ಬೆಂಗಳೂರು,ಆ.4-
ಪರಿಶಿಷ್ಟ ಜಾತಿ ಮತ್ತು ಸಮುದಾಯಗಳಿಗೆ ಒಳ ಮೀಸಲಾತಿ ನೀಡಬೇಕಾಗಿದ್ದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಸರ್ಕಾರಿ ನೌಕರರ ಮುಂಬಡ್ತಿ ಮತ್ತು ನೇಮಕಾತಿ ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡಲು ಸರ್ಕಾರ ನಿರ್ಧರಿಸಿದೆ.
ಒಳ ಮೀಸಲಾತಿ ನೀಡುವ ಸಂಬಂಧ ರಚಿಸಲಾಗಿದ್ದ
ನಿವೃತ್ತ ನ್ಯಾಯಮೂರ್ತಿ ಎಚ್ ಎನ್ ನಾಗಮೋಹನ್ ದಾಸ್ ನೇತೃತ್ವದ ಆಯೋಗ ತನ್ನ ಸಮೀಕ್ಷೆಯನ್ನು ಪೂರ್ಣಗೊಳಿಸಿ ರಾಜ್ಯ ಸರ್ಕಾರಕ್ಕೆ 1766 ಪುಟಗಳ ವರದಿಯನ್ನು ನೀಡಿದೆ.
ಆಯೋಗ ರಾಜ್ಯ ಸರ್ಕಾರಕ್ಕೆ ತನ್ನ ವರದಿ ನೀಡಿರುವ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಮುಂಬಡ್ತಿ ಮತ್ತು ನೇಮಕಾತಿ ಪ್ರಕ್ರಿಯೆಗಳನ್ನು ಪುನರಾರಂಭಿಸಲು ಇದ್ದ ಅಡ್ಡಿ ನಿವಾರಣೆಯಾಗಿದೆ.
ಪರಿಶಿಷ್ಟ ಜಾತಿ ಮತ್ತು ವರ್ಗಗಳಿಗೆ ಒಳ ಮೀಸಲಾತಿ ಕಲ್ಪಿಸುವ ದೃಷ್ಟಿಯಿಂದ ಕಳೆದ ಜನವರಿಯಲ್ಲಿ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ ದಾಸ್ ರವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿತು.
ಈ ಆಯೋಗವು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಶೈಕ್ಷಣಿಕ ಹಿಂದುಳಿದಿರುವಿಕೆ.ಸರ್ಕಾರಿ ಉದ್ಯೋಗದಲ್ಲಿ ಅಗತ್ಯ ಪ್ರಾತಿನಿಧ್ಯದ ಕೊರತೆ ಮತ್ತು ಸಾಮಾಜಿಕ ಹಿಂದುಳಿದಿರುವಿಕೆಯ ಬಗ್ಗೆ ಅಧ್ಯಯನ ನಡೆಸಿದೆ.
ರಾಜ್ಯದ ಪರಿಶಿಷ್ಟ ಜಾತಿಯ 27,24,768 ಕುಟುಂಬಗಳು ಮತ್ತು 1,07,01,982 ಜನರು ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ.
ಸಮೀಕ್ಷೆಯಲ್ಲಿ ಸಂಗ್ರಹಿಸಿದ ಮತ್ತು ಸರ್ಕಾರದ ಸಂಸ್ಥೆಗಳಿಂದ ಸಂಗ್ರಹಿಸಿದ ದತ್ತಾಂಶವನ್ನು ವಿಶ್ಲೇಷಿಸಿ, ಸರ್ವೋಚ್ಚ ನ್ಯಾಯಾಲಯದ ಸೂಚನೆಯಂತೆ ಪರಿಶಿಷ್ಟ ಜಾತಿಯ ಒಳಜಾತಿಗಳನ್ನು ವರ್ಗೀಕರಿಸಿ ಲಭ್ಯವಿರುವ ಮೀಸಲಾತಿಯನ್ನು ವರದಿಯಲ್ಲಿ ಹಂಚಲಾಗಿದೆ
ಸಮೀಕ್ಷೆಯ ದತ್ತಾಂಶ ಮತ್ತು ಅನುಬಂಧಗಳು ಒಟ್ಟು ಸೇರಿ ಸುಮಾರು 1766 ಪುಟಗಳು ಮತ್ತು ಆರು ಶಿಫಾರಸ್ಸುಗಳನ್ನೊಳಗೊಂಡ ವರದಿಯನ್ನು ನೀಡಿದೆ.
ಸಂಪುಟ ನಿರ್ಧಾರ:
ಪರಧಿ ಸ್ವೀಕರಿಸಿದ ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಪರಿಶೀಲರ ನಡೆಸಿ ಮುಂದಿನ ಸಂಪುಟ ಸಭೆಯಲ್ಲಿ ಎಲ್ಲರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿಗಳ ಮಾತಿಗೆ ದನಿಗೂಡಿಸಿದ ಆಹಾರ ಮಂತ್ರಿ ಕೆಎಚ್ ಮುನಿಯಪ್ಪ ರಾಜ್ಯದ ಪರಿಶಿಷ್ಟ ಸಮುದಾಯದ ಬಹುದಿನದ ಬೇಡಿಕೆ ಈಡೇರುವ ಸಮಯ ಹತ್ತಿರ ಬಂದಿದೆ. ವೈಜ್ಞಾನಿಕ ರೀತಿಯಲ್ಲಿ ವಿಶ್ಲೇಷಣೆ ನಡೆಸಿ ನೀಡಿರುವ ವರದಿಯಿಂದ ಯಾವುದೇ ಸಮುದಾಯಕ್ಕೂ ಅನ್ಯಾಯವಾಗುವುದಿಲ್ಲ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು.
ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, “ನ್ಯಾ. ನಾಗಮೋಹನ್ ದಾಸ್ ಆಯೋಗ ಒಳಮೀಸಲಾತಿ ವರದಿ ಕೊಟ್ಟಿದೆ. ಆಯೋಗ ಸುದೀರ್ಘವಾಗಿ ಸಮೀಕ್ಷೆ ನಡೆಸಿತ್ತು. 27 ಲಕ್ಷ ಕುಟುಂಬಗಳ ಸಮೀಕ್ಷೆ ಮಾಡಿತ್ತು. 1 ಕೋಟಿ 7 ಲಕ್ಷ ಜನರ ಸಮೀಕ್ಷೆ ನಡೆಸಲಾಗಿತ್ತು. ವರದಿಯಲ್ಲಿ ಏನಿದೆ ನೋಡಬೇಕಾಗಿದೆ” ಎಂದರು.
ಮಾಜಿ ಸಚಿವ ಎಸ್ ಆಂಜನೇಯ ಮಾತನಾಡಿ, “ಎಸ್ ಸಿ ಜಾತಿಯಲ್ಲಿ ಒಳಮೀಸಲಾತಿ ಕಲ್ಪಿಸುವ ವರದಿಯನ್ನು ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಅವರಿಗೆ ಸುವರ್ಣಾವಕಾಶ. ಶೀಘ್ರವಾಗಿ ಒಳ ಮೀಸಲಾತಿ ಜಾರಿಗೆ ತರಬೇಕು. ಸಂಪುಟಕ್ಕೆ ತಂದು ಬಿಲ್ ಪಾಸ್ ಮಾಡಬೇಕು. ಆಗಸ್ಟ್ ತಿಂಗಳಲ್ಲಿ ಒಳಮೀಸಲಾತಿ ಜಾರಿಗೆ ಬಂದರೆ ಮಾದಿಗರಿಗೆ ಸ್ವಾತಂತ್ರ್ಯ ಬಂದಂತೆ. ಇದಕ್ಕೆ ಸಾಕಷ್ಟು ಹೋರಾಟ ನಡೆದಿದೆ. ಇದೀಗ ಅಂತಿಮವಾಗಿ ಒಳಮೀಸಲಾತಿ ಜಾರಿಗೆ ಅವಕಾಶ ಕೂಡಿಬಂದಿದೆ” ಎಂದು ಹೇಳಿದರು
Previous Articleರಮ್ಯಾಗೆ ಸಂದೇಶ ಕಳುಹಿಸಿದವರಿಗೆ ಪೊಲೀಸ್ ಶೋಧ !
Next Article ರಾಹುಲ್ ಗಾಂಧಿ ಪ್ರತಿಭಟನೆ ಮುಂದೂಡಿಕೆ !

