ಬೆಂಗಳೂರು,
ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ಪ್ರವರ್ಗ- 2ಎಗೆ ಸೇರ್ಪಡೆ ಮಾಡಬೇಕು ಎಂದು ಆಗ್ರಹಿಸಿ ಪಂಚಮಸಾಲಿ ಮಠಾಧೀಶ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ತೀವ್ರಗೊಂಡಿರುವ ಬೆನ್ನಲ್ಲೇ ಇತರೆ ಹಿಂದುಳಿದ ವರ್ಗಗಳು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ.
ಪಂಚಮಸಾಲಿ ಲಿಂಗಾಯತ ಸಮುದಾಯವನ್ನು ಹಿಂದುಳಿದ ಪ್ರವರ್ಗ-2ಎಗೆ ಸೇರಿಸಬಾರದು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಮುಖಂಡರು ಹಾಗೂ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ.
ಲಿಂಗಾಯತ ಪಂಚಮಸಾಲಿ ಸಮುದಾಯವು ಶೈಕ್ಷಣಿಕ ಆರ್ಥಿಕ ಮತ್ತು ಸಾಮಾಜಿಕವಾಗಿ ಸಾಕಷ್ಟು ಪ್ರಬಲವಾಗಿದೆ ಈ ಹಿಂದೆಯೂ ಸಮುದಾಯ ಹಿಂದುಳಿದ ಪ್ರವರ್ಗ- 2ಎ ಅಡಿಯಲ್ಲಿ ಮೀಸಲಾತಿ ಕೋರಿ ಮನವಿ ಸಲ್ಲಿಸಿತ್ತು. ಅಂದು ಇವುಗಳನ್ನು ಸಮಗ್ರವಾಗಿ ಪರಿಶೀಲಿದ್ದ ಡಾ. ನಾಗನೂರು ಆಯೋಗ, ಹಾವನೂರು ಆಯೋಗ ಮತ್ತು ಚಿನ್ನಪ್ಪ ರೆಡ್ಡಿ ನೇತೃತ್ವದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗಗಳು ಈ ಸಮುದಾಯಕ್ಕೆ ಇಂತಹ ಮೀಸಲಾತಿಯ ಅಗತ್ಯವಿಲ್ಲ ಎಂದು ಹೇಳಿವೆ.
ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಪ್ರವರ್ಗ 2 ಎ ಅಡಿಯಲ್ಲಿ ಮೀಸಲಾತಿ ಕಲ್ಪಿಸುವ ಬದಲಿಗೆ ಬೇರೆ ಪ್ರವರ್ಗದಲ್ಲಿ ಮೀಸಲಾತಿ ಕಲ್ಪಿಸಲು ನಮ್ಮ ವಿರೋಧವಿಲ್ಲ ಆದರೆ ಪ್ರವರ್ಗ 2 ಎ ಅಡಿಯಲ್ಲಿ ಮೀಸಲಾತಿ ನೀಡಿದರೆ ಹಲವಾರು ಸಮುದಾಯಗಳಿಗೆ ಅನ್ಯಾಯವಾಗಲಿದೆ ಎಂದು ಹೇಳಿದೆ.
ಸದ್ಯ ಪ್ರವರ್ಗ 2ಎ ನಲ್ಲಿ ತೀರಾ ಹಿಂದುಳಿದ ಶೋಷಿತ ಸಮುದಾಯಗಳಿವೆ ಇದರಲ್ಲಿನ ಅನೇಕ ಸಮುದಾಯಗಳಿಗೆ ಇಲ್ಲಿಯವರೆಗೆ ಯಾವುದೇ ರೀತಿಯ ಮೀಸಲಾತಿಯ ಸೌಲಭ್ಯ ಸಿಕ್ಕಿಲ್ಲ ಇದೀಗ ಪ್ರಬಲವಾಗಿರುವ ಲಿಂಗಾಯತ ಪಂಚಮಸಾಲಿ ಸಮುದಾಯ ಈ ಪ್ರವರ್ಗದಲ್ಲಿ ಸೇರಿದರೆ ಆ ಶೋಷಿತ ಸಮುದಾಯಗಳು ಶಾಶ್ವತವಾಗಿ ಮೀಸಲಾತಿಯಿಂದ ವಂಚಿತವಾಗಲಿವೆ ಎಂಬ ಆತಂಕವನ್ನು ವ್ಯಕ್ತಪಡಿಸಿದೆ.
ದೊಡ್ಡ ಸಮುದಾಯವಾದ ಪಂಚಮಸಾಲಿ ಲಿಂಗಾಯತ ಸಮುದಾಯದ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಪ್ರವರ್ಗ 2ಎ ಅಡಿಯಲ್ಲಿ ಮೀಸಲಾತಿ ಕಲ್ಪಿಸಲು ಮುಂದಾದರೆ ತೀರ ಹಿಂದುಳಿದ ಸಮುದಾಯಗಳು ರಾಜ್ಯಾದ್ಯಂತ ಅನಿವಾರ್ಯವಾಗಿ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
Previous Articleಪೊಲೀಸ್ ಲಾಠಿ ಚಾರ್ಜ್.
Next Article ಶಿವರಾಜ್ ಕುಮಾರ್ ಡಿ.18ಕ್ಕೆ ಅಮೇರಿಕಾ ಯಾತ್ರೆ.