ಬೆಂಗಳೂರು,ಏ.25-
ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ಗುಂಡಿನ ದಾಳಿಯ ಬೆನ್ನಲ್ಲೇ Bengaluru ಸೇರಿದಂತೆ ರಾಜ್ಯದ ವಿವಿಧೆಡೆ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಉಗ್ರರ ದಾಳಿಯ ಹಿನ್ನೆಲೆಯಲ್ಲಿ ದೇಶದ ಹಲವಡೆ ಕೈಗೊಂಡಿರುವ ಭದ್ರತಾ ಕ್ರಮಗಳ ಕುರಿತಂತೆ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಮಾತನಾಡಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ, ತಮ್ಮ ತಮ್ಮ ರಾಜ್ಯಗಳಲ್ಲಿ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳನ್ನು ಹುಡುಕಿ ದೇಶದಿಂದ ಹೊರ ಹಾಕುವಂತೆ ಸೂಚನೆ ನೀಡಿದ್ದಾರೆ.
ಭಾರತ ಸದ್ಯ ಪಾಕಿಸ್ತಾನದ ಪ್ರಜೆಗಳಿಗೆ ನೀಡಿರುವ ವೀಸಾಗಳ ಅವಧಿಯು ಏಪ್ರಿಲ್ 27ರಿಂದ ಜಾರಿಗೆ ಬರುವಂತೆ ಮುಕ್ತಾಯವಾಗಲಿದೆ. ವೀಸಾದ ಅವಧಿ ಮುಗಿಯುವುದರೊಳಗೆ ಸದ್ಯ ಭಾರತದಲ್ಲಿ ನೆಲೆಸಿರುವ ಎಲ್ಲ ಪಾಕಿಸ್ತಾನಿಯರು ದೇಶವನ್ನು ತೊರೆಯಬೇಕು ಎಂದು ಭಾರತ ತಾಕೀತು ಮಾಡಿದೆ.
ವೈದ್ಯಕೀಯ ವೀಸಾ ಏಪ್ರಿಲ್ 29ರವರೆಗೆ ಮಾತ್ರ ಊರ್ಜಿತವಾಗಿರಲಿದೆ ಎಂದು ವಿದೇಶಾಂಗ ಸಚಿವಾಲಯ ಪ್ರಕಟಿಸಿದೆ.
ಇದರ ಬೆನ್ನಲ್ಲೇ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ವೈಯಕ್ತಿಕವಾಗಿ ಕರೆ ಮಾಡಿರುವ ಅಮಿತ್ ಶಾ, ಪಾಕಿಸ್ತಾನದ ಯಾವುದೇ ಪ್ರಜೆ ಗಡುವು ಮೀರಿ ಭಾರತದಲ್ಲಿ ಇರದಂತೆ ನೋಡಿಕೊಳ್ಳಬೇಕು. ಜತೆಗೆ ತಮ್ಮ ತಮ್ಮ ಪ್ರದೇಶಗಳಲ್ಲಿ ವಾಸಿಸುತ್ತಿರುವ ಪಾಕಿಸ್ತಾನಿ ಪ್ರಜೆಗಳನ್ನು ಗುರುತಿಸಿ ಅವರನ್ನು ಗಡೀಪಾರು ಮಾಡುವಂತೆಯೂ ಸೂಚನೆ ನೀಡಿದ್ದಾರೆ.
ಕೇಂದ್ರ ಗೃಹ ಮಂತ್ರಿಗಳ ಸೂಚನೆಯ ಹಿನ್ನೆಲೆಯಲ್ಲಿ ಗೃಹ ಇಲಾಖೆಯ ವಿದೇಶಿ ವಿಭಾಗದ ಪೊಲೀಸರು ಬೆಂಗಳೂರು ಸೇರಿದಂತೆ ರಾಜ್ಯದ ಇತರ ಕಡೆ ನೆಲೆಸಿರುವ ಪಾಕಿಸ್ತಾನಿ ಪ್ರಜೆಗಳು ಪ್ರವಾಸಿ ವೀಸಾ, ವಾಣಿಜ್ಯ ವೀಸಾ ಮತ್ತು ವೈದ್ಯಕೀಯ ವೀಸಾದಲ್ಲಿ ಬಂದಿರುವ ಪಾಕಿಸ್ತಾನಿ ಪ್ರಜೆಗಳಿಗಾಗಿ ಶೋಧ ನಡೆಸುತ್ತಿದ್ದಾರೆ.