ವಿಶ್ವದಾದ್ಯಂತ ತಂತ್ರಜ್ಞಾನ ಉದ್ಯಮ ಕ್ಷೇತ್ರ ತನ್ನ ಅದೃಷ್ಟದಲ್ಲಿ ಇತ್ತಿಚೇಗೆ ವಿಪರೀತ ಏರುಪೇರನ್ನು ಕಾಣಲಾರಂಭಿಸಿದೆ. ಕೆಲವೇ ವರ್ಷಗಳ ಹಿಂದೆ ಟೆಕ್ ಕಂಪನಿಗಳ ಆಸ್ತಿಗಳು ಊಹಿಸಲಾರದ ಮಟ್ಟಕ್ಕೆ ಬೆಳೆದು ಏನೇ ಹೂಡಿಕೆ ಇದ್ದರೂ ಈ ಕ್ಷೇತ್ರದಲ್ಲೇ ಮಾಡಬೇಕು ಎಂಬ ಭಾವನೆ ಹೂಡಿಕೆದಾರರ ಮನಸ್ಸಿನಲ್ಲಿ ಮನೆಮಾಡಿತ್ತು. ಆದರೆ ಈಗ ಟೆಕ್ ಕಂಪನಿಗಳ ಮೌಲ್ಯ ಕುಸಿಯಲು ಆರಂಭಿಸಿರುವುದು ಎಲ್ಲಾ ಕಡೆಯೂ ಕಾಣಲು ಸಿಗುತ್ತಿದೆ. ವಿಶ್ವದ ಪ್ರತಿಷ್ಠಿತ Nasdaq ಷೇರು ವಿನಿಮಯ ಕೇಂದ್ರದಲ್ಲಿ ಜಗತ್ತಿನ ನೂರು ಅತ್ಯಂತ ದೊಡ್ಡ ಟೆಕ್ ಉದ್ಯಮಗಳು ಒಟ್ಟಾರೆಯಾಗಿ ಮೂರು ಟ್ರಿಲಿಯನ್ ಡಾಲರ್ಸ್ ಎಂದರೆ ಸುಮಾರು ಎರಡೂವರೆ ಲಕ್ಷ ಶತಕೋಟಿ ರೂಪಾಯಿಯಷ್ಟು ಹಣದ ನಷ್ಟವನ್ನು ಕಂಡಿವೆ. ಕಳೆದ ವರ್ಷದ ನವೆಂಬರ್ ನಿಂದ ಇತ್ತೀಚೆಗೆ ಇನ್ನೂ ಅನೇಕ ಕಂಪನಿಗಳು ತಮ್ಮ ಮೌಲ್ಯದಲ್ಲಿ ವಿಪರೀತ ಕುಸಿತವನ್ನು ಅನುಭಸಿವೆ. ಸಾರ್ವಜನಿಕ ಹೂಡಿಕೆಯನ್ನು ಪಡೆಯಲು ಮುಂದಾದ ಕಂಪನಿಗಳು ದೊಡ್ಡ ಮಟ್ಟದಲ್ಲಿ ಹೊಡೆತ ತಿಂದಿರುವುದು ಜಗಜ್ಜಾಹೀರಾಗಿದೆ. ಇದರೊಂದಿಗೆ ಬಿಟ್ ಕಾಯಿನ್ ನಂಥ ಕ್ರಿಪ್ಟೋ ಕರೆನ್ಸಿಗಳ ಮೌಲ್ಯಗಳೂ ಕುಸಿಯಲಾರಂಭಿಸಿವೆ. ಇನ್ನು ಮುಂದಿನ ದಿನಗಳಲ್ಲಿ ಟೆಕ್ ಕಂಪನಿಗಳಿಗೆ ಮತ್ತು ಅದರಲ್ಲೂ ಟೆಕ್ ಸ್ಟಾರ್ಟ್ ಅಪ್ ಗಳಿಗೆ ಫಂಡಿಂಗ್ ಅಥವ ಹೂಡಿಕೆ ಬರುವುದು ಕಷ್ಟವಾಗಬಹುದು ಎಂದು ವಿಶ್ವದ ಪ್ರತಿಷ್ಠಿತ ನಿಯತಕಾಲಿಕೆ ದಿ ಇಕಾನಾಮಿಸ್ಟ್ ವರದಿ ಮಾಡಿದೆ.