ಬೆಂಗಳೂರು,ನ.27-
ಅತ್ಯಂತ ವಿಶ್ವಾಸಾರ್ಹ ಹಾಗೂ ಶಿಸ್ತಿನ ಸೇವೆಗೆ ಹೆಸರಾದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಇದೀಗ ತೀವ್ರ ಸ್ವರೂಪದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಇದರ ಪರಿಣಾಮವಾಗಿ ನಿಗಮದ ನೌಕರರ ಭವಿಷ್ಯ ನಿಧಿ ಕೂಡಾ ಪಾವತಿಸಿಲ್ಲ.
ಕಳೆದ ಕೆಲವು ತಿಂಗಳುಗಳಿಂದ ನೌಕರರ ಭವಿಷ್ಯ ನಿಧಿ ಪಾವತಿಸಲು ಸಾಧ್ಯವಾಗುತ್ತಿಲ್ಲ ಹೀಗಾಗಿ ಆರ್ಥಿಕ ನೆರವು ನೀಡುವಂತೆ ಕೋರಿ ರಾಜ್ಯ ರಸ್ತೆ ಸಾರಿಗೆ ನಿಗಮಗಳು ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ.
ಭವಿಷ್ಯ ನಿಧಿ ಕಾಯ್ದೆ ಪ್ರಕಾರ ಪ್ರತಿ ತಿಂಗಳು ನೌಕರರ ವೇತನದಲ್ಲಿ ಭವಿಷ್ಯ ನಿಧಿ ಮೊತ್ತ ಕಡಿತಗೊಳಿಸಬೇಕು ಹಾಗೂ ಉದ್ಯೋಗದಾತರು ಅದಕ್ಕೆ ಸಮಾನವಾದ ಮೊತ್ತವನ್ನು ಸೇರಿಸಿ ನೌಕರರ ಭವಿಷ್ಯ ನಿಧಿ ಖಾತೆಗೆ ಹಣ ಪಾವತಿಸಬೇಕು.
ಆದರೆ, ನೌಕರರ ವೇತನದಿಂದ ಕಡಿತಗೊಳಿಸಿದ ಮತ್ತು ತಮ್ಮ ಪಾಲವನ್ನು ಭವಿಷ್ಯ ನಿಧಿ ನ್ಯಾಸಕ್ಕೆ ಪಾವತಿಸುವಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳು ವಿಫಲವಾಗಿವೆ.
ಇದರಿಂದಾಗಿ ನಾಲ್ಕೂ ನಿಗಮಗಳು ಭವಿಷ್ಯ ನಿಧಿ ನ್ಯಾಸಕ್ಕೆ ಭವಿಷ್ಯ ನಿಧಿ ಬಾಕಿ ಹಾಗೂ ವಿಳಂಬ ಬಡ್ಡಿ ಸೇರಿದಂತೆ 2024ರ ಅಕ್ಟೋಬರ್‌ವರೆಗೆ 2,792.61 ಕೋಟಿ ರೂ ಪಾವತಿಸುವುದು ಬಾಕಿ ಉಳಿದಿದೆ.
ಈ ಮೊತ್ತ ಪಾವತಿಸಲು ತಮಗೇ ಸಾಧ್ಯವೇ ಇಲ್ಲ ಎಂದು ಹೇಳಿರುವ ನಿಗಮಗಳು, ಅದಕ್ಕಾಗಿ ಸರ್ಕಾರದಿಂದ ಆರ್ಥಿಕ ನೆರವು ನೀಡುವಂತೆ ಪತ್ರದ ಮೂಲಕ ಕೋರಿವೆ.
523.52 ಕೋಟಿ ಬಡ್ಡಿ:
ರಾಜ್ಯ ರಸ್ತೆ ಸಾರಿಗೆ ನಿಗಮಗಳ ಲೆಕ್ಕದಂತೆ ಒಟ್ಟು 2,269.09 ಕೋಟಿ ರೂ. ಭವಿಷ್ಯ ನಿಧಿ ಬಾಕಿ ಉಳಿಸಿಕೊಂಡಿವೆ. ಅಲ್ಲದೆ, ಹೀಗೆ ನಿಗದಿತ ಸಮಯದಲ್ಲಿ ಭವಿಷ್ಯ ನಿಧಿ ಪಾವತಿಸದೆ ವಿಳಂಬ ಮಾಡಿದ್ದಕ್ಕಾಗಿ 523.52 ಕೋಟಿ ರು. ಹೆಚ್ಚುವರಿ ಬಡ್ಡಿ ರೂಪದಲ್ಲಿ ಪಾವತಿಸಬೇಕಿದೆ.
ಅದರಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವು 2021ರ ಸೆಪ್ಟೆಂಬರ್‌ನಿಂದ 2024ರ ಅಕ್ಟೋಬರ್ ವರೆಗೆ ಸತತ 3 ವರ್ಷಗಳ ಕಾಲ ಭವಿಷ್ಯ ನಿಧಿ ಮೊತ್ತ ಪಾವತಿಸಿಲ್ಲ. ಹೀಗಾಗಿ 821.48 ಕೋಟಿ ರು. ಭವಿಷ್ಯ ನಿಧಿ ಬಾಕಿಗೆ 232.9 ಕೋಟಿ ರು. ವಿಳಂಬ ಬಡ್ಡಿ ಪಾವತಿಸಬೇಕಾಗಿದೆ.
ಭವಿಷ್ಯ ನಿಧಿ ಪಾವತಿಗೆ ಸಂಬಂಧಿಸಿದಂತೆ ಆರ್ಥಿಕ ನೆರವು ನೀಡುವಂತೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನ್ಬುಕುಮಾರ್ ಸರ್ಕಾರಕ್ಕೆ ಪತ್ರದ ಮೂಲಕ ಕೋರಿದ್ದಾರೆ.
ಈ ಪತ್ರದಲ್ಲಿ ಕೊರೋನಾ ಅವಧಿಯಲ್ಲಿ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸಿವೆ. ಅದರ ಜತೆಗೆ ತೈಲ ಬೆಲೆ, ವೇತನ ಹೆಚ್ಚಳದಿಂದಾಗಿ ನಿಗಮಗಳ ವೆಚ್ಚ ಹೆಚ್ಚಳವಾಗುವಂತಾಗಿದೆ. ಅದರ ಪರಿಣಾಮ ನೌಕರರ ಮತ್ತು ನಿಗಮಗಳ ವಂತಿಗೆಯ ಭವಿಷ್ಯ ನಿಧಿ ಮೊತ್ತವನ್ನು ಪಾವತಿಸಲು ಸಾಧ್ಯವಾಗಿಲ್ಲ. ಹೀಗಾಗಿ ಆರ್ಥಿಕ ನೆರವು ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಹಲವು ತಿಂಗಳಿನಿಂದ ಭವಿಷ್ಯ ನಿಧಿ ಮೊತ್ತ ಪಾವತಿಸ ಬಾಕಿ ಉಳಿಸಿಕೊಂಡಿದ್ದಕ್ಕಾಗಿ ಭವಿಷ್ಯ ನಿಧಿ ಕಚೇರಿಯ ಪ್ರಾದೇಶಿಕ ಆಯುಕ್ತರು ಗಂಭೀ ವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲ ಸಾರಿಗೆ ನಿಗಮಗಳಿಗೆ ನೀಡಲಾಗಿರುವ ಭವಿಷ್ಯ ನಿಧಿ ವಿನಾಯಿತಿಯನ್ನು ರದ್ದು ಮಾಡುವ ಎಚ್ಚರಿಕೆ ನೀಡಿದ್ದಾರೆ.
Previous Articleದನದ ಕೊಟ್ಟಿಗೆಯಲ್ಲಿನ ಕಚೇರಿಗೆ 34 ಕೋಟಿ ವರ್ಗಾವಣೆ .
Next Article ಕರ್ನಾಟಕದಲ್ಲಿ 563 ಹುಲಿಗಳು