ಬೆಂಗಳೂರು, ಮೇ 12-
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಪೆನ್‍ಡ್ರೈವ್ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದೀಗ ಕುತೂಹಲಕಾರಿ ಬೆಳವಣಿಗೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡರ ಆಪ್ತರೊಬ್ಬರು ಸೇರಿದಂತೆ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ವಿಶೇಷ ತನಿಖಾ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಮಾಜಿ ಶಾಸಕ ಪ್ರೀತಂಗೌಡ ಅವರ ಅತ್ಯಾಪ್ತನೆನ್ನಲಾದ ಲಿಖಿತ್‍ಗೌಡ ಮತ್ತು ಯಲಗುಂದ ಚೇತನ್ ಎಂಬ ಇಬ್ಬರನ್ನು ಪೆನ್‍ಡ್ರೈವ್ ಹಂಚಿಕೆ ಸಂಬಂಧದ ಆರೋಪದಲ್ಲಿ ಎಸ್‍ಐಟಿ ಅಧಿಕಾರಿಗಳು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪೆನ್‍ಡ್ರೈವ್ ವೈರಲ್ ವಿಚಾರದಲ್ಲಿ ಬಿಜೆಪಿಯ ಇಬ್ಬರು ಕಾರ್ಯಕರ್ತರನ್ನು ಎಸ್‍ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವುದು ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಪೂರ್ಣ ಚಂದ್ರ ತೇಜಸ್ವಿ ಎಂಬುವವರು ಏ.23ರಂದು ಹಾಸನ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿ ಲೋಕಸಬೆ Electionಗೆ ಸರ್ಧಿಸಿರುವ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾದ ಪ್ರಜ್ವಲ್ ರೇವಣ್ಣ ಅವರ ಭಾವಚಿತ್ರಗಳನ್ನು ನವೀನ್‍ಗೌಡ ಎಂಬುವವರು ಮಾರ್ಪ್ ಮಾಡಿ ಅಶ್ಲೀಲ ವಿಡಿಯೋ ತಯಾರಿಸಿಕೊಂಡು ಮನೆ ಮನೆಗೆ ತೆರಳಿ ಮತದಾರರಿಗೆ ತೋರಿಸುತ್ತಿದ್ದಾರೆ.
ಪೆನ್‍ಡ್ರೈವ್, ಸಿಡಿ, ವಾಟ್ಸಾಪ್ ಪೋಟೊಗಳನ್ನು ಮೊಬೈಲ್‍ಗಳಲ್ಲಿ ತೋರಿಸಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಿದ್ದರು.
ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಸರ್ಕಾರ ಎಸ್‍ಐಟಿಗೆ ವಹಿಸಿದೆ. ತನಿಖೆ ಕೈಗೊಂಡ ಎಸ್‍ಐಟಿ ಇಂದು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಈ ಪೆನ್‍ಡ್ರೈವ್‍ಗಳನ್ನು ಏಕೆ ಹಂಚಲಾಯಿತು, ಎಲ್ಲೆಲ್ಲಿ ಹಂಚಿದ್ದೀರಿ, ಇದರ ಹಿಂದೆ ಯಾರು ಯಾರು ಇದ್ದಾರೆ ಎಂಬಿತ್ಯಾದಿ ಪ್ರಶ್ನೆಗಳನ್ನು ಅವರಿಗೆ ಕೇಳಿ ಎಸ್‍ಐಟಿ ಮಾಹಿತಿ ಕಲೆ ಹಾಕುತ್ತಿದೆ.
ಇವರು ನೀಡಿದ ಮಾಹಿತಿ ಆಧರಿಸಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಿಗಾಗಿ ಎಸ್‍ಐಟಿ ಶೋಧ ನಡೆಸುತ್ತಿದೆ.
ವಿದೇಶಕ್ಕೆ ಹೋಗೋಲ್ಲಾ:
ಈ ನಡುವೆ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲು ವಿಶೇಷ ತನಿಖಾ ದಳದ ಅಧಿಕಾರಿಗಳು ವಿದೇಶಕ್ಕೆ ತೆರಳುವ ಅವಕಾಶ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‍ಐಟಿ ಅಧಿಕಾರಿಗಳು ವಿದೇಶಕ್ಕೆ ಹೋಗಲು ಅವಕಾಶ ಇಲ್ಲ ಎಂದು ಸ್ಪಷ್ಟ ಪಡಿಸಿದರು.ಈ ವಿಷಯವಾಗಿ ಎಸ್ ಐಟಿ ಯಿಂದ ಈಗಾಗಲೇ ಬ್ಲೂ ಕಾರ್ನರ್ ನೋಟಿಸ್ ಹೊರಡಿಸಲಾಗಿದೆ. ಇಂಟರ್ ಪೋಲ್ ಸಂಸ್ಥೆಯವರು ಪ್ರಜ್ವಲ್‍ನ ಚಲನವಲನಗಳನ್ನು ಗುರುತಿಸಿ, ಎಲ್ಲಿದ್ದಾರೆ ಎಂದು ಪತ್ತೆ ಹಚ್ಚುತ್ತಾರೆ. ಅದನ್ನು ಸಿಬಿಐಗೆ ತಿಳಿಸುತ್ತಾರೆ. ಅಲ್ಲಿಂದ ನಮ್ಮ ತನಿಖಾ ಸಂಸ್ಥೆಗಳಿಗೆ ಮಾಹಿತಿ ಬರುತ್ತದೆ. ಸದ್ಯಕ್ಕೆ ಈವರೆಗೂ ಪ್ರಜ್ವಲ್ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ ಎಂದು ವಿವರಿಸಿದರು.
ಸದ್ಯಕ್ಕೆ ಪ್ರಕರಣದ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ತನಿಖೆಯ ಮೇಲೆ ಪರಿಣಾಮ ಬೀರುವ ಯಾವುದೇ ವಿಚಾರ ಅಥವಾ ಮಾಹಿತಿಗಳನ್ನು ಸಾರ್ವಜನಿಕವಾಗಿ ಹೇಳಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.
ಪೆನ್‍ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೇವರಾಜೇಗೌಡರನ್ನು ಈಗಾಗಲೇ ಬಂಧಿಸಲಾಗಿದೆ. ಮುಂದಿನ ಕ್ರಮಗಳ ಬಗ್ಗೆ ಎಸ್‍ಐಟಿ ಅಧಿಕಾರಿಗಳಿಗೆ ಮಾಹಿತಿ ಇರುತ್ತದೆ. ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ
ಸಿಬಿಐ ತನಿಖೆ:
ಇದರ ನಡುವೆ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು
ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಯಾರೂ ಸಮರ್ಥನೆ ಮಾಡುವ ಪ್ರಶ್ನೆಯೇ ಇಲ್ಲ. ಪ್ರಕರಣದ ತನಿಖೆ ನಡೆಯುತ್ತಿರುವ ರೀತಿ ಸರಿಯಲ್ಲ, ಮಾಹಿತಿ ಕೊಟ್ಟವರನ್ನೇ ಬಂಧನ ಮಾಡಲಾಗುತ್ತಿದೆ. ಎಸ್‌ಐಟಿ ತನಿಖೆ ದಿಕ್ಕು ತಪ್ಪುತ್ತಿದೆ ಎಂದರು.
ಈ ಪೆನ್‌ಡ್ರೈವ್ ಪ್ರಕರಣದ ಬಗ್ಗೆ ಸರಿಯಾದ ತನಿಖೆಯಾಗಲು ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಪ್ರಜ್ವಲ್ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರ್‍ಯಾರ ಹೆಸರು ಕೇಳಿ ಬರುತ್ತಿದೆಯೋ ಅವರ ವಿಚಾರಣೆ ಮಾಡಬೇಕು. ಹಾಗಾಗಿ ಈ ಪ್ರಕರಣ ಸಿಬಿಐಗೆ ಕೊಡಿ ಎಂದು ನಾವು ಒತ್ತಾಯ ಮಾಡುತ್ತಿದ್ದೇವೆ ಎಂದರು.