ಬೆಂಗಳೂರು, ಮೇ.8-
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ, ಅಶ್ಲೀಲ ವಿಡಿಯೋ ವೈರಲ್ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ)ದ ಅಧಿಕಾರಿಗಳು ಪೆನ್‌ಡ್ರೈವ್ ಬಯಲು ಮಾಡಿದ ಆರೋಪದಲ್ಲಿ ಪ್ರಜ್ವಲ್ ರೇವಣ್ಣ ಅವರ ಮಾಜಿ ಡ್ರೈವರ್ ಕಾರ್ತಿಕ್ ಗೌಡನನ್ನು ಬಂಧಿಸಲು ಮುಂದಾಗಿದ್ದಾರೆ.
ಅಶ್ಲೀಲ ವಿಡಿಯೋ ವೈರಲ್ ಪ್ರಕರಣದಲ್ಲಿ ಪ್ರಕರಣ ದಾಖಲಾದ ಬಳಿಕ ಡ್ರೈವರ್ ಕಾರ್ತಿಕ್ ಅವರನ್ನು ವಿಚಾರಣೆ ಮಾಡಲಾಗಿತ್ತು. ಕಳೆದ ಏಪ್ರಿಲ್ 30ರಂದು ಎಸ್‌ಐಟಿ ವಿಚಾರಣೆಗೆ ಕಾರ್ತಿಕ್ ಗೌಡ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಹಾಸನದ ಪೆನ್‌ಡ್ರೈವ್ ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಹೀಗಾಗಿ ಯಾವುದೇ ಹೇಳಿಕೆ, ದಾಖಲೆಯನ್ನು ಬಹಿರಂಗ ಪಡಿಸಬಾರದು ಎಂದು ಎಚ್ಚರಿಕೆ ನೀಡಲಾಗಿತ್ತು.
ಪೆನ್‌ಡ್ರೈವ್ ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಯಾವುದೇ ಹೇಳಿಕೆ, ದಾಖಲೆ ಬಹಿರಂಗ ಪಡಿಸಬಾರದು. ಇದರಿಂದ ತನಿಖೆಗೆ ಹಿನ್ನೆಡೆಯಾಗುತ್ತೆ ಎಂದು ಕಾರ್ತಿಕ್ ಗೌಡಗೆ ಎಸ್‌ಐಟಿ ಸೂಚಿಸಿತ್ತು. ಆದರೆ ಕಾರ್ತಿಕ್ ಗೌಡ ಅವರು ಸಂದರ್ಶನಗಳನ್ನು ನೀಡಿದ್ದು, ಕೆಲವು ಮಹತ್ವದ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾರೆ. ಪೋಟೋ, ವಿಡಿಯೋ ವೈರಲ್ ಆಗಿರಬಹುದಾದ ಬಗ್ಗೆ ಆರೋಪಿಯ ಬಗ್ಗೆ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.
ಡ್ರೈವರ್ ಕಾರ್ತಿಕ್ ಗೌಡ ಅವರು ಮೊದಲ ವಿಚಾರಣೆಯಲ್ಲಿ ಫೋಟೋ ವಿಡಿಯೋ ಮೊದಲು ನನಗೆ ಸಿಕ್ಕಿದ್ದು ನಂತರ ದೇವರಾಜೇಗೌಡರಿಗೆ ಕೊಟ್ಟಿದ್ದೆ. ಅವರೇ ಪೆನ್‌ಡ್ರೈವ್ ವಿಡಿಯೋ ವೈರಲ್ ಮಾಡಿರಬಹುದು ಎಂದಿದ್ದರು.
ಆದರೆ,ಪೋಟೋ, ವಿಡಿಯೋಗಳನ್ನು ಪ್ರಜ್ವಲ್ ಸ್ನೇಹಿತ ಮೊದಲು ನನಗೆ ಕೊಟ್ಟಿತ್ತು. ಪ್ರಜ್ವಲ್ ಸ್ನೇಹಿತ ಬ್ಲೂ ಟೂತ್‌ನಲ್ಲಿ ನನ್ನ ಮೊಬೈಲ್‌ಗೆ ಕಳಿಸಿದ್ದ. ಅದರಲ್ಲಿ ಕೆಲ ಫೋಟೋಗಳನ್ನ ನಾನು ಭವಾನಿ ರೇವಣ್ಣ ಅವರಿಗೆ ಕಳಿಸಿ ಪ್ರಜ್ವಲ್ ಕೃತ್ಯದ ಬಗ್ಗೆ ಹೇಳಿದ್ದೆ ಎಂದಿದ್ದಾರೆ. ಈ ಹೇಳಿಕೆಗಳ ಹಿನ್ನೆಲೆಯಲ್ಲಿ ಡ್ರೈವರ್ ಕಾರ್ತಿಕ್ ಅವರನ್ನು ವಶಕ್ಕೆ ಪಡೆಯಲು ಎಸ್ಐಟಿ ಸಿದ್ಧತೆ ನಡೆಸಿದ್ದಾರೆ.
ಜೆಡಿಎಸ್ ದೂರು:
ಈ ನಡುವೆ ಸಂತ್ರಸ್ತ ಮಹಿಳೆಯರ ಅಶ್ಲೀಲ ಚಿತ್ರಗಳುಳ್ಳ ವಿಡಿಯೋಗಳನ್ನು ಬಿತ್ತರಿಸಿರುವ ವ್ಯಕ್ತಿಗಳ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ 2022ರಡಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ರಾಜ್ಯದ ಎಲ್ಲಾ ಜಿಲ್ಲಾ ಎಸ್‌ಪಿಗಳಿಗೆ ಸೂಚನೆ ನೀಡಬೇಕೆಂದು ಆಗ್ರಹಿಸಿ ಜೆಡಿಎಸ್ ಮಹಿಳಾ ವಿಭಾಗ ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದೆ.
ಸಂತ್ರಸ್ತ ಮಹಿಳೆಯರಿಗೆ ಹಾಗೂ ಕುಟುಂಬದವರಿಗೆ ನ್ಯಾಯ ಒದಗಿಸಲು ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ರಾಜಕೀಯ ಮುಖಂಡರು, ಕಾರ್ಯಕರ್ತರು, ಸಮಾಜಘಾತುಕರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಎಂದು ಜೆಡಿಎಸ್ ಮಹಿಳಾ ವಿಭಾಗ ಒತ್ತಾಯಿಸಿದೆ.
ಜೆಡಿಎಸ್ ರಾಜ್ಯ ಮಹಿಳಾ ವಿಭಾಗದ ಅಧ್ಯಕ್ಷೆ ರಶ್ಮಿ ರಾಮೇಗೌಡ ನೇತೃತ್ವದಲ್ಲಿ ದೂರು ನೀಡಲಾಗಿದ್ದು, ಈ ಪ್ರಕರಣದಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಲು ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ ವಿಫಲವಾಗಿದೆ ಎಂದು ಮನವಿ ಪತ್ರದಲ್ಲಿ ಆರೋಪಿಸಲಾಗಿದೆ.
ಮಹಿಳಾ ಆಯೋಗದ ಪತ್ರವನ್ನು ಆಧರಿಸಿ ಸರ್ಕಾರ ಹಾಸನ ವಿಡಿಯೋ ಪ್ರಕರಣದಲ್ಲಿ ಎಸ್‌ಐಟಿ ತನಿಖೆಗೆ ರಚಿಸಿರುವುದನ್ನು ಸ್ವಾಗತಿಸುವುದಾಗಿ ತಿಳಿಸಲಾಗಿದೆ