ಮಂಗಳೂರು,ಮೇ.1-ನಗರದ ಹೊರವಲಯದ ಕುಡುಪು ಬಳಿ ಗುಂಪು ಹಲ್ಲೆಯಿಂದ ಕೇರಳ ಮೂಲದ ಮುಸ್ಲಿಂ ಯುವಕನನ್ನು ಕೊಲೆಗೈದ ಪ್ರಕರಣ ಕರ್ನಾಟಕದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಗುಂಪು ಹಲ್ಲೆಗೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದೇ ಕಾರಣ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ಆರಂಭದಲ್ಲಿ ‘‘ಅಸಹಜ ಸಾವು’’ ಪ್ರಕರಣ ದಾಖಲಿಸಲಾಗಿತ್ತು. ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಇದೀಗ ಕರ್ತವ್ಯ ಲೋಪ ಆರೋಪದಡಿ ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಸೇರಿದಂತೆ ಮೂವರು ಪೊಲೀಸರನ್ನು ಅಮಾನತು ಮಾಡಲಾಗಿದೆ.
ಮಂಗಳೂರು ಗ್ರಾಮಾಂತರ ಠಾಣೆ ಇನ್ಸ್ಪೆಕ್ಟರ್ ಶಿವಕುಮಾರ್, ಹೆಡ್ ಕಾನ್ಸ್ಟೇಬಲ್ ಚಂದ್ರ.ಪಿ ಮತ್ತು ಕಾನ್ಸ್ಟೇಬಲ್ ಯಲ್ಲಾಲಿಂಗ ಅವರನ್ನು ಅಮಾನತು ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಇನ್ಸ್ಪೆಕ್ಟರ್ ಶಿವಕುಮಾರ್ ಅವರನ್ನು ಅಮಾನತು ಮಾಡುವಂತೆ ಗೃಹ ಸಚಿವ ಜಿ. ಪರಮೇಶ್ವರ್ಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಪತ್ರ ಬರೆದಿದ್ದರು.
ಇನ್ಸ್ಪೆಕ್ಟರ್ ಶಿವಕುಮಾರ್ ಆರಂಭದಲ್ಲಿ ಅಸಹಜ ಸಾವು ಎಂದು ಪ್ರಕರಣ ದಾಖಲಿಸಿದ್ದರು. ವಿವಾದ ದೊಡ್ಡದಾದ ಮೇಲೆ ಕೊಲೆ ಎಂದು ಎಫ್ಐಆರ್ ದಾಖಲಿಸಿದ್ದಾರೆ. ಮೃತ ಯುವಕನ ಮೇಲೆ ಗಾಯಗಳು ಕಂಡು ಬಂದರು ಸಹ ಅಸಹಜ ಸಾವು ಪ್ರಕರಣವೆಂದು ದಾಖಲಿಸಿಕೊಂಡಿದ್ದರು. ಹೀಗಾಗಿ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ ಆರೋಪ ಕೂಡ ಕೇಳಿಬಂದ ಹಿನ್ನೆಲೆ ಮೂವರನ್ನು ಅಮಾನತ್ತು ಮಾಡಲಾಗಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ 23 ಜನರನ್ನು ಪೊಲೀಸರು ಬಂಧಿಸಿದ್ದಾರೆ.
Previous Articleಸಿದ್ದರಾಮಯ್ಯ ಕಾಂಗ್ರೆಸ್ಸಿನಿಂದ ಉಚ್ಚಾಟನೆ ಸಾಧ್ಯವೇ..!
Next Article ನಮಾಜ್ ಮಾಡಿ ಸಸ್ಪೆಂಡ್ ಆದ.
