ಬೆಂಗಳೂರು,ಡಿ.23:
ಕಾರ್ಯ ಕ್ಷಮತೆ ಹಾಗೂ ದಕ್ಷತೆಯ ಬಗ್ಗೆ ಕರ್ನಾಟಕ ಪೊಲೀಸರ ಬಗ್ಗೆ ದೇಶದಲ್ಲೇ ಉತ್ತಮ ಕೆಲಸ ಮಾಡುವ ಇಲಾಖೆ ಎಂಬ ಗೌರವ ಇತ್ತು. ಆದರೆ ಈಗ ಈ ಗೌರವವನ್ನು ಮಣ್ಣುಪಾಲು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಕೇಂದ್ರ ಕೈಗಾರಿಕೆ ಮಂತ್ರಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಪೊಲೀಸ್ ಇಲಾಖೆ ದೇಶದಲ್ಲೇ ವಿಶೇಷವಾದ ಗೌರವಯುತ ಸ್ಥಾನ ಇದೆ.ಆದರೆ ಬಿಜೆಪಿ ನಾಯಕ ಸಿ.ಟಿ. ರವಿ ಪ್ರಕರಣದಲ್ಲಿ ಅದನ್ನು ಹಾಳು ಮಾಡಲಾಗುತ್ತಿದೆ ಎಂದರು.
ಇಂತಹ ಕೃತ್ಯಕ್ಕಾಗಿನಾನು ಸಂಪೂರ್ಣವಾಗಿ ಪೊಲೀಸ್ ಇಲಾಖೆಯನ್ನು ದೂಷಿಸಿವುದಿಲ್ಲ. ಆದರೆ, ಸರ್ಕಾರದಲ್ಲಿರುವ ಮಂತ್ರಿಗಳು ಕೆಲವು ಆಯ್ದ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ಕೊಡುವ ಮೂಲಕ ಕಾನೂನು ಬಾಹಿರವಾದಂತಹ ತೀರ್ಮಾನಗಳಾಗುತ್ತಿವೆ ಎಂದು ಟೀಕಿಸಿದರು.
ಸರ್ಕಾರದ ಪ್ರಮುಖ ಹುದ್ದೆಯಲ್ಲಿರುವ ಕೆಲವು ವ್ಯಕ್ತಿಗಳು ತಮಗೆ ಬೇಕಾದಂತೆ ಕೇಸುಗಳನ್ನು ಬುಕ್ ಮಾಡಿಸುತ್ತಿದ್ದಾರೆ. ತಮ್ಮ ವಿರೋಧಿಗಳನ್ನು ಸದೆ ಬಡಿಯಬೇಕು ಎಂಬ ರೀತಿಯ ತೀರ್ಮಾನ ಹಾಗೂ ಅಧಿಕಾರ ದುರುಪಯೋಗ, ಕಾನೂನಿನ ಉಲ್ಲಂಘನೆ ಸರ್ಕಾರದಿಂದಲೇ ಆಗುತ್ತಿದೆ ಎಂದು ಆರೋಪಿಸಿದರು.
ಕಾಲವೇ ಇದಕ್ಕೆಲ್ಲ ಉತ್ತರ ಕೊಡುತ್ತದೆ. ರಾಜ್ಯದಲ್ಲಿ ಈ ಸರ್ಕಾರ ಬಂದ ನಂತರ ಏನೇನು ನಡೆಯುತ್ತಿದೆ ಎಂಬುದನ್ನು ಗಮನಿಸಿದ್ದೇನೆ. ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ರಾಜಕಾರಣ ಯಾವ ರೀತಿ ಹೋಗಬಹುದು ಅನ್ನುವುದಕ್ಕೆ ವೇದಿಕೆ ಸಿದ್ದ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು