ಬೆಂಗಳೂರು,ಮೇ.29-ಅತ್ಯಾಚಾರ, ಅಶ್ಲೀಲ ವಿಡಿಯೋ ಪ್ರಕರಣದ ಪ್ರಮುಖ ಆರೋಪಿ ಸಂಸದ ಪ್ರಜ್ವಲ್ ರೇವಣ್ಣ ಭಾರತಕ್ಕೆ ವಾಪಸಾಗುವ ಹೇಳಿಕೆ ನೀಡಿದ್ದ ವಿಡಿಯೋ ಎಲ್ಲಿಂದ ಎನ್ನುವ ಮಾಹಿತಿಯು ಪ್ರಕರಣ ತನಿಖೆಯನ್ನು ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ (ಎಸ್ ಐಟಿ) ಲಭ್ಯವಾಗಿದೆ.
ಮೇ.31ರಂದು ಬೆಂಗಳೂರಿಗೆ ಆಗಮಿಸಿ ವಿಚಾರಣೆಗೆ ಹಾಜರಾಗುವುದಾಗಿ ಕಳೆದ ಮೇ.27 ಸೋಮವಾರ ಪ್ರಜ್ವಲ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು. ಪ್ರಜ್ವಲ್ ವಿಡಿಯೋ ಮಾಡಿರುವ ಸ್ಥಳವನ್ನು ಇದೀಗ ಎಸ್ಐಟಿ ಪತ್ತೆ ಮಾಡಿದೆ.
ಯೂರೋಪ್ನ ಹಂಗೇರಿಯ ಬುಡಾಪೆಸ್ಟ್ನಿಂದ ಪ್ರಜ್ವಲ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ವಿಡಿಯೋ ಬಿಡುಗಡೆಗೊಂಡ ಮೊಬೈಲ್ ವಿಳಾಸ ಪತ್ತೆ ಮಾಡುವ ಮೂಲಕ ಎಸ್ಐಟಿ ಈ ಮಾಹಿತಿ ಕಲೆ ಹಾಕಿದೆ. ವಿಡಿಯೋ ಹೇಳಿಕೆ ಬಿಡುಗಡೆಗೂ ಎರಡು ದಿನ ಮೊದಲೇ ರೆಕಾರ್ಡ್ ಆಗಿತ್ತು ಎಂಬುದನ್ನೂ ಎಸ್ಐಟಿಯ ತಂತ್ರಜ್ಞರ ತಂಡವು ಪತ್ತೆ ಮಾಡಿದೆ.
ಪ್ರಜ್ವಲ್ ದೇಶಕ್ಕೆ ಬರುತ್ತಿದ್ದಂತೆಯೇ ವಿಮಾನ ನಿಲ್ದಾಣದಲ್ಲಿಯೇ ಬಂಧಿಸಲು ಎಸ್ಐಟಿ ಅಧಿಕಾರಿಗಳು ಸನ್ನದ್ಧರಾಗಿದ್ದಾರೆ.
ಪ್ರಕರಣ ಬೆಳಕಿಗೆ ಬಂದ ನಂತರ ವಿದೇಶದಲ್ಲಿದ್ದ ಪ್ರಜ್ವಲ್ ಬರೋಬ್ಬರಿ ಒಂದು ತಿಂಗಳ ಬಳಿಕ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು. ಮೊದಲಿಗೆ ಅವರು ಜರ್ಮನಿಯಲ್ಲಿದ್ದಾರೆ ಎಂದು ಹೇಳಲಾಗಿತ್ತು. ಮೇ 31ರಂದು ಬೆಳಗ್ಗೆ 10.30ಕ್ಕೆ ಎಸ್ಐಟಿ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ವಿಡಿಯೋ ಹೇಳಿಕೆಯಲ್ಲಿ ಪ್ರಜ್ವಲ್ ಹೇಳಿದ್ದರು. ಅಲ್ಲದೆ, ತಂದೆ- ತಾಯಿ, ತಾತನ ಕ್ಷಮೆಯಾಚಿಸಿದ್ದರು. ಅಲ್ಲದೇ ಜನರು, ಪಕ್ಷದ ಕಾರ್ಯಕರ್ತರ ಬಳಿಯೂ ಕ್ಷಮೆ ಕೋರಿದ್ದರು. ವಿದೇಶ ಪ್ರವಾಸ ಮೊದಲೇ ನಿಗದಿಯಾಗಿತ್ತು ಎಂದೂ ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದರು. ಸೋಮವಾರವಷ್ಟೇ ಪ್ರಜ್ವಲ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದರು. ಪ್ರಜ್ವಲ್ ವಿಡಿಯೋ ಮಾಡಿರುವ ಸ್ಥಳವನ್ನು ಇದೀಗ ಎಸ್ಐಟಿ ಪತ್ತೆ ಮಾಡಿದೆ.
Previous Articleವಿಮಾನ ನಿಲ್ದಾಣದಲ್ಲಿ ಕಿಡಿಗೇಡಿಗಳ ಕಾಟ.
Next Article ಎದೆ ನಡುಗಿಸಿದ ಭೀಕರ ಹತ್ಯೆ.