ಬೆಂಗಳೂರು,ಮೇ.30-
ಹಲವಾರು ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಸುಳಿಗೆ ಸಿಲುಕಿ ವಿದೇಶಕ್ಕೆ ಪರಾರಿಯಾಗಿದ್ದ ಹಾಸನದ ಸಂಸದ ಪ್ರಜ್ವಲ್ ರೇವಣ್ಣ ತಡರಾತ್ರಿ ಬೆಂಗಳೂರಿಗೆ ಆಗಮಿಸುತ್ತಿದ್ದು ಅವರನ್ನು ವರ್ಷಕ್ಕೆ ಪಡೆಯಲು ವಿಶೇಷ ತನಿಖಾ ತಂಡ ಸಜ್ಜುಗೊಂಡಿದೆ
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವಿದೇಶಕ್ಕೆ ಹಾರಿದ್ದ ಪ್ರಜ್ವಲ್ ರೇವಣ್ಣ ಪೊಲೀಸರು ನೀಡಿದ ನೋಟಿಸ್ ಮತ್ತು ವಿದೇಶಾಂಗ ಇಲಾಖೆ ಹೊರಡಿಸಿದ ಬ್ಲೂ ಕಾರ್ನರ್ ನೋಟಿಸ್ ಗೂ ಪ್ರತಿಕ್ರಿಯೆ ನೀಡಿರಲಿಲ್ಲ ಇದಾದ ನಂತರ ಮಾಜಿ ಪ್ರಧಾನಿ ದೇವೇಗೌಡ ತಕ್ಷಣವೇ ಸ್ವದೇಶಕ್ಕೆ ಮರಳಬೇಕೆಂದು ನೀಡಿದ ಎಚ್ಚರಿಕೆಗೂ ಸೊಪ್ಪು ಹಾಕಿರಲಿಲ್ಲ.
ಇದಾದ ಬಳಿಕ ವಿದೇಶಾಂಗ ಇಲಾಖೆ ಪ್ರಜ್ವಲ್ ರೇವಣ್ಣ ಅವರ ರಾಜತಾಂತ್ರಿಕ ಪಾಸ್ ಪೋರ್ಟ್ ರದ್ದುಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿತ್ತು. ಇದರಿಂದ ಸಂಕಷ್ಟಕ್ಕೆ ಸೋಲುಕಿದ ಪ್ರಜ್ವಲ್ ರೇವಣ್ಣ ಕೊನೆಗೆ ವಿದೇಶದಿಂದಲೇ ವಿಡಿಯೋ ಸಂದೇಶವನ್ನು ಬಿಡುಗಡೆ ಮಾಡಿ ಮೇ 31 ರಂದು ಬೆಂಗಳೂರಿಗೆ ಆಗಮಿಸಿ ಎಸ್ ಐ ಟಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು.
ಅದರಂತೆ ಜರ್ಮನಿಯ ಮ್ಯೂನಿಕ್ ಏರ್ ಪೋರ್ಟ್ ನಿಂದ ಭಾರತೀಯ ಕಾಲಮಾನ ಎಂದು ಮಧ್ಯಾಹ್ನ 3 ಗಂಟೆಗೆ ಪ್ರಯಾಣ ಆರಂಭಿಸಿರುವ ಅವರು ತಡರಾತ್ರಿ 12 ಗಂಟೆಯ ನಂತರ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ.
ಪ್ರಜ್ವಲ್ ವಿರುದ್ದ ಈಗಾಗಲೇ ಲುಕ್ ಔಟ್ ನೋಟಿಸ್ ಹೊರಡಿಸಿರುವ ಹಿನ್ನೆಲೆಯಲ್ಲಿ ಅವರನ್ನು ವಿಮಾನ ನಿಲ್ದಾಣದ ಇಮಿಗ್ರೇಶನ್ ಕೇಂದ್ರದಲ್ಲಿಯೇ ವಶಕ್ಕೆ ಪಡೆಯಲಾಗುತ್ತದೆ ಬಳಿಕ ಅವರನ್ನು ಕರ್ನಾಟಕದ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗುತ್ತದೆ.
ಮತ್ತೊಂದೆಡೆ ಷಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಜ್ವಲ್ ಅವರನ್ನು ಕರೆತರುವ ಏರ್‌ಪೋರ್ಟ್ ರಸ್ತೆ ಉದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಎಸ್‌ಐಟಿ ಮುಖ್ಯಸ್ಥ ಬಿ.ಕೆ. ಸಿಂಗ್ ಅವರು ಇಂದು ಬೆಳಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಅವರನ್ನು ಭೇಟಿ ಮಾಡಿ
ಬಂದೋಬಸ್ತ್ ಬಗ್ಗೆ ಚರ್ಚೆ ನಡೆಸಿದರು.
ಜಾಮೀನು ಅರ್ಜಿ:
ಈ ನಡುವೆ ತಮಾಷೆ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಾಳೆ ಮಧ್ಯಾಹ್ನ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ.
ಶಕ್ತಿ ಪ್ರದರ್ಶನ :
ಇನ್ನು ಮಾಜಿ ಪ್ರಧಾನಿ ದೇವೇಗೌಡ ಅವರ ತವರು ಹಾಸನದಲ್ಲಿ ಹಲವಾರು ಜನಪರ ಸಂಘಟನೆಗಳ ಕಾರ್ಯಕರ್ತರು ಬೃಹತ್ ಶಕ್ತಿ ಪ್ರದರ್ಶನ ನಡೆಸಿ ಕ್ಷಣವೇ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಬೇಕು ಮತ್ತು ಅವರಿಂದ ಕಿರುಕುಳಕ್ಕೆ ಒಳಗಾದ ಮಹಿಳೆಯರಿಗೆ ಸೂಕ್ತ ನ್ಯಾಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಮಹಾರಾಜಾ ಪಾರ್ಕ್‌ನಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಸದಸ್ಯರು, ಪ್ರಜ್ವಲ್ ರೇವಣ್ಣ ಬಂಧಿಸಬೇಕು. ಮಹಿಳೆಯರಿಗೆ ರಕ್ಷಣೆ ನೀಡಬೇಕು. ಅವರ ನೆರವಿಗೆ ಸರ್ಕಾರ ನಿಲ್ಲಬೇಕು ಎಂದು ಆಗ್ರಹಿಸಿದರು. ದಾರಿಯುದ್ದಕ್ಕೂ ಘೋಷಣೆ ಕೂಗಿದ ಸದಸ್ಯರು, ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬಹಿರಂಗ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ರಾಜ್ಯಸಭೆ ಮಾಜಿ ಸದಸ್ಯೆ ಸುಭಾಷಿಣಿ ಅಲಿ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದ್ದರೂ ದೇಶದ ಹಲವೆಡೆ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಪುರುಷ ಪ್ರಧಾನ, ಬಂಡವಾಳಶಾಹಿ ವ್ಯವಸ್ಥೆ, ರಾಜಕೀಯ ಪ್ರಭುತ್ವದಂತಹ ಮೈತ್ರಿಕೂಟ ರಚಿಸಿಕೊಂಡಿರುವ ಬಲಾತ್ಕಾರಿ ಬಚಾವೋ ಪಾರ್ಟಿಯನ್ನು ಅಧಿಕಾರದಿಂದ ಕೆಳಗೆ ಇಳಿಸುವ ಸಂಕಲ್ಪ ಮಾಡುತ್ತಿದ್ದೇವೆ ಎಂದು ಹೇಳಿದರು.
ನಮ್ಮನ್ನು ಆಳುವ ದೊಡ್ಡವರು ಹೇಳುತ್ತಿದ್ದಾರೆ, ಇದುವರೆಗೆ ನಾವು ಟ್ರೇಲರ್ ತೋರಿಸಿದ್ದೇವೆ. ಇನ್ನೂ ಸಿನಿಮಾ ಬಾಕಿ ಇದೆ ಎಂದು. ಆದರೆ, ಇವರು ತೋರಿಸಿರುವ ಟ್ರೇಲರ್ ಎಂಥದ್ದು. ಬ್ರಿಜ್‌ಭೂಷಣ್ ಪರವಾಗಿ ನಿಂತರು. ಬಿಲ್ಕೀಸ್ ಬಾನು ಅತ್ಯಾಚಾರಿಗಳಿಗೆ ಜಾಮೀನು ಕೊಡಿಸಿದರು. ರಾಮ್‌ರಹೀಮರಿಗೆ ಪೆರೋಲ್ ಕೊಡಿಸಿದರು. ಪ್ರಜ್ವಲ್ ರೇವಣ್ಣ ಕೈಎತ್ತಿ ಹಿಡಿದು ಮತ ಕೇಳಿದರು. ಇದೇನಾ ನಿಮ್ಮ ಟ್ರೇಲರ್ ಎಂದು ಪ್ರಶ್ನಿಸಿದ ಅವರು, ಇಂತಹ ನಿಮ್ಮ ಸಿನಿಮಾ, ಟ್ರೇಲರ್ ನಡೆಯಲ್ಲ. ಜೂನ್ 4 ರ ನಂತರ ಟ್ರೇಲರ್ ಬಂದ್ ಆಗಲಿದೆ. ಯಾವುದೇ ಸರ್ಕಾರವಿರಲಿ, ನ್ಯಾಯಕ್ಕಾಗಿ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.
ಮನೆಯಲ್ಲಿ ಕೆಲಸ ಮಾಡುವವರು, ಅವರ ಪಕ್ಷದ ಕಾರ್ಯಕರ್ತೆಯರು, ಸರ್ಕಾರಿ ಉದ್ಯೋಗಿಗಳು ಸೇರಿದಂತೆ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲಾಗಿದೆ. ಅಲ್ಲದೇ ಅದನ್ನು ವಿಡಿಯೋ ಮಾಡಿಕೊಂಡು, ಜಗತ್ತಿನ ಎದುರು ತೋರಿಸಿದ್ದಾರೆ ಎಂದು ಆರೋಪಿಸಿದರು.