ಬೆಂಗಳೂರು.
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಕಿರುಕುಳ ಆರೋಪ ಇದೀಗ ದೇಶಾದ್ಯಂತ ದೊಡ್ಡ ರೀತಿಯಲ್ಲಿ ಸದ್ದು ಮಾಡುತ್ತಿದೆ. ಪ್ರಕರಣದಲ್ಲಿ ಬಂಧನದ ಭೀತಿಗೆ ಸಿಲುಕಿರುವ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ತೆರಳಿದ್ದಾರೆ. ಈ ನಡುವೆ ಅವರನ್ನು ಪ್ರಕರಣದ ಸುಳಿಯಲ್ಲಿ ಸಿಲುಕದಂತೆ ಮಾಡಲು ವ್ಯವಸ್ಥಿತ ಕಾರ್ಯತಂತ್ರವೊಂದು ಸಿದ್ಧಗೊಳ್ಳುತ್ತಿದೆ.
ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಕಿರುಕುಳ ಎನ್ನಲಾದ ದೃಶ್ಯಾವಳಿಗಳು ಪೆನ್ ಡ್ರೈವ್ ಮೂಲಕ ಸಾವಿರಾರು ಜನರನ್ನು ತಲುಪಿವೆ. ಅವುಗಳನ್ನು ನೋಡಿದವರು ಪ್ರಜ್ವಲ್ ರೇವಣ್ಣ ಅವರ ವರ್ತನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವುದು ಈಗ ಗುಟ್ಟಾಗಿ ಏನು ಉಳಿದಿಲ್ಲ.
ಪ್ರಜ್ವಲ್ ರೇವಣ್ಣ ಒಬ್ಬ ಮಾನಸಿಕ ಅಸ್ವಸ್ಥನಂತೆ ನಡೆದುಕೊಳ್ಳುತ್ತಿದ್ದಾನೆ ಬುದ್ಧಿ ಸ್ಥಿಮಿತದಲ್ಲಿರುವ ಯಾವುದೇ ವ್ಯಕ್ತಿ ಮಹಿಳೆಯರ ಜೊತೆ ಈ ರೀತಿ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಜನಸಾಮಾನ್ಯರು ಸರ್ವೇಸಾಮಾನ್ಯವಾಗಿ ಹೇಳುತ್ತಿರುವ ಅಭಿಪ್ರಾಯವನ್ನ ಪ್ರಜ್ವಲ್ ರಕ್ಷಣೆಗೆ ಗುರಾಣಿಯಾಗಿ ಬಳಸಿಕೊಳ್ಳಲು ಸಿದ್ಧತೆ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವಿದೇಶದಿಂದ ಹಿಂತುರುಗಿದ ಕೂಡಲೇ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಲು ವಿಶೇಷ ತನಿಖಾ ತಂಡ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿದೆ. ತನಿಖಾ ತಂಡ ಪ್ರಜ್ವಲ್ ಅವರನ್ನು ವಶಕ್ಕೆ ಪಡೆದು ನಿಯಮಾನುಸಾರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯಕೀಯ ತಪಾಸಣೆ ನಡೆಸಿ ಆನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದೆ. ಇದನ್ನೇ ಅಸ್ತ್ರವಾಗಿ ಬಳಸಿಕೊಳ್ಳಲು ಪ್ರಜ್ವಲ್ ರೇವಣ್ಣ ಅವರ ಆಪ್ತ ವಲಯ ಯೋಜನೆಯೊಂದನ್ನು ಸಿದ್ದಪಡಿಸಿದೆ ಎಂದು ಗೊತ್ತಾಗಿದೆ.
ರಾಜ್ಯದ ಮತ್ತು ಹೊರ ರಾಜ್ಯದ ಕೆಲವು ಪ್ರತಿಷ್ಠಿತ ಮಾನಸಿಕ ವೈದ್ಯರನ್ನು ಸಂಪರ್ಕಿಸಿರುವ ಈ ತಂಡ ಪ್ರಜ್ವಲ್ ರೇವಣ್ಣ ಒಬ್ಬ ಮಾನಸಿಕ ಅಸ್ವಸ್ಥ ಅಥವಾ ಮನೋರೋಗಿ ಎಂದು ಸಾಬೀತುಪಡಿಸುವ ದಾಖಲೆಗಳನ್ನು ಸಿದ್ಧಪಡಿಸಲಾಗುತ್ತಿದೆ ಇದಕ್ಕಾಗಿ ಪ್ರತಿಷ್ಠಿತ ಆಸ್ಪತ್ರೆಯೊಂದನ್ನು ಬಳಸಿಕೊಳ್ಳಲಾಗಿದೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ.
ವಿಮಾನ ನಿಲ್ದಾಣದಲ್ಲಿ ವಿಶೇಷ ತನಿಖಾ ತಂಡ ಪ್ರಜ್ವಲ್ ಅವರನ್ನು ವಶಕ್ಕೆ ಪಡೆದು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ವೇಳೆ ಆತನ ಮಾನಸಿಕ ಆರೋಗ್ಯ ಕುರಿತಾಗಿ ಪರಿಣಿತ ವೈದ್ಯರ ವರದಿಯೊಂದನ್ನು ಸಲ್ಲಿಸಲು ಹಿರಿಯ ವಕೀಲರ ತಂಡ ಸಜ್ಜುಗೊಂಡಿದೆ ಈ ಮೂಲಕ ಇಡೀ ಪ್ರಕರಣಕ್ಕೆ ಹೊಸ ತಿರುವು ನೀಡುವುದರೊಂದಿಗೆ ಪ್ರಜ್ವಲ್ ರೇವಣ್ಣ ಅವರನ್ನು ಜೈಲು ಶಿಕ್ಷೆಯ ಕುಣಿಕೆಯಿಂದ ಪಾರು ಮಾಡಲು ಸಂಚುರೂಪಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.