ಬೆಂಗಳೂರು, ಮೇ.6– ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗಳ ನೇಮಕಾತಿ ಪರೀಕ್ಷೆಯ ಅಕ್ರಮದ ತನಿಖೆಯನ್ನು ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳಿಗೆ ಬಂಧಿತ ಬೆರಳಚ್ಚು ವಿಭಾಗದ (ಫಿಂಗರ್ ಪ್ರಿಂಟ್) ವಿಭಾಗದ ಇನ್ಸ್‌ಪೆಕ್ಟರ್ ಆನಂದ ಮೇತ್ರೆ ಪ್ರಶ್ನೆಪತ್ರಿಕೆಯನ್ನು ಸೋರಿಕೆ ಮಾಡಿರುವುದು ಪತ್ತೆಯಾಗಿದೆ.
ಪರೀಕ್ಷೆಗೆ ಗೈರಾಗುವ ಅಭ್ಯರ್ಥಿಗಳ ಪ್ರಶ್ನೆಪತ್ರಿಕೆಗಳು ಪರೀಕ್ಷಾ ಕೇಂದ್ರದಲ್ಲಿ ಇರಲಿದ್ದು. ಶಾಲೆಯ ಮುಖ್ಯೋಪಾಧ್ಯಾಯ ಕಾಶೀನಾಥ ಜತೆಗೂಡಿ ಗೈರು ಹಾಜರಾದ ಅಭ್ಯರ್ಥಿಯೊಬ್ಬರ ಪ್ರಶ್ನೆಪತ್ರಿಕೆ ಬಯಲಿಗೆ ತಂದು ಉತ್ತರಗಳನ್ನು ಸಿದ್ಧಪಡಿಸುವಂತೆ ಆನಂದ ಮೇತ್ರೆ ಮಾಡಿದ್ದಾರೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. ಪ್ರಶ್ನೆಪತ್ರಿಕೆ ಹೊರಗೆ ಕಳುಹಿಸಿ ಉತ್ತರ ಬರುವಂತೆ ಮಾಡಿದ್ದು, ಅದು ಅಲ್ಲಿದ್ದ ಪೊಲೀಸರ ಗಮನಕ್ಕೂ ಬಾರದಂತೆ ನೋಡಿಕೊಂಡಿದ್ದರು ಎನ್ನಲಾಗುತ್ತಿದೆ.
ಮೇತ್ರೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಪಡ್ನೂರ ಗ್ರಾಮದ ಮೂಲದವರಾಗಿದ್ದು, 2009ರಲ್ಲಿ ಫಿಂಗರ್ಪ್ರಿಂಟ್ ಪಿಎಸ್ಐ ಆಗಿ ನೇಮಕಗೊಂಡಿದ್ದರು.
ಎಸ್ಐ ಸಮವಸ್ತ್ರ ಶಾಕ್:
ತಾತ್ಕಾಲಿಕ ಆಯ್ಕೆಪಟ್ಟಿಯಲ್ಲಿ ಹೆಸರು ಬಂದ ಕೂಡಲೇ ಎಸ್ಐ ಸಮವಸ್ತ್ರ ಧರಿಸಿ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದ ವಿವೇಕನಗರ ಠಾಣೆ ಕಾನ್ಸ್ಟೇಬಲ್ ಬಸನಗೌಡ ಕರೇಗೌಡರ್ನನ್ನು ಅಮಾನತು ಮಾಡಿ ಆದೇಶಿಸಲಾಗಿದೆ.
ಎಸ್ಐ ಹುದ್ದೆಗೆ ಆಯ್ಕೆ ಆಗುವ ಮೊದಲೇ ಬಸನಗೌಡ, ಎಸ್ಐ ಸಮವಸ್ತ್ರ ಧರಿಸಿ ಹುಟ್ಟೂರಿನಲ್ಲಿ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿದ್ದ. ಜತೆಗೆ ಪೋಟೋಶೂಟ್ ಮಾಡಿಸಿ ಊರತುಂಬ ಫ್ಲೆಕ್ಸ್ಗಳನ್ನು ಹಾಕಿಸಿದ್ದ. ಈ ವಿಡಿಯೋ, ಪೋಟೋ ವೈರಲ್ ಆಗಿತ್ತು. ಈ ಬಗ್ಗೆ ವರದಿ ಪಡೆದು ಕೇಂದ್ರ ವಿಭಾಗ ಡಿಸಿಪಿ ಎಂ.ಎನ್. ಅನುಚೇತ್, ಪೊಲೀಸ್ ನಿಯಮ ಉಲ್ಲಂಘನೆ ಆರೋಪದ ಮೇಲೆ ಅಮಾನತು ಮಾಡಿ ಆದೇಶಿಸಿದ್ದಾರೆ.
ದಿವ್ಯಾ ಪಶ್ಚಾತ್ತಾಪ:
ದಿವ್ಯಾ ಹಾಗರಗಿ ವಿಚಾರಣೆ ವೇಳೆ ಸಾಕಷ್ಟು ಮಾಹಿತಿ ನೀಡಿದ್ದು, ಮುಖ್ಯೋಪಾಧ್ಯಾಯ ಕಾಶೀನಾಥ ಮಾತು ಕೇಳಿ ಅಕ್ರಮಕ್ಕೆ ಸೈ ಎಂದಿರುವೆ. ನಾನು ಮಾಡಿದ್ದು ತಪ್ಪು ಎಂದು ಪಶ್ಚಾತ್ತಾಪದ ಮಾತುಗಳನ್ನಾಡಿದ್ದಾರೆ ಎಂದು ಗೊತ್ತಾಗಿದೆ. ಡೀಲ್ನಲ್ಲಿ ಯಾರ್ಯಾರಿದ್ದಾರೆ? ದಿವ್ಯಾ ಯಾರ್ಯಾರ ಹೆಸರು ಬಾಯ್ಬಿಡುತ್ತಾರೋ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ.
ಕಲಬುರಗಿಯ ಎಂ.ಎಸ್. ಇರಾಣಿ ಕಾಲೇಜಿನಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ಕಸ್ಟಡಿಯಲ್ಲಿರುವ ಚಂದ್ರಕಾಂತ ಕುಲಕರ್ಣಿ, ಪಿಎಸ್ಐ ಅಭ್ಯರ್ಥಿ ರಾಜಾಪುರದ ಪ್ರಭು ಹಾಗೂ ಆತನ ತಂದೆ ಶರಣಪ್ಪ ಸೇರಿ ಕಿಂಗ್ಪಿನ್ ದಿವ್ಯಾ ಹಾಗರಗಿ, ಜ್ಯೋತಿ ಪಾಟೀಲ್ ಇತರರನ್ನು ಸಹ ನಿನ್ನೆ ಮತ್ತೊಮ್ಮೆ ವೈದ್ಯಕಿಯ ಪರೀಕ್ಷೆಗೆ ಒಳಪಡಿಸಲಾಗಿದೆ.