ಬೆಂಗಳೂರು, ಮೇ.10-ಪ್ರೇಯಸಿಯ ಹಾಲಿ ಪ್ರಿಯಕರನನ್ನು ಮಾಜಿ ಪ್ರಿಯಕರ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ಕಾಲಿನಿಂದ ಒದ್ದು ಗೋಡೆಗೆ ತಲೆಯನ್ನು ಬಲವಾಗಿ ಗುದ್ದಿ ಕೊಲೆ ಮಾಡಿರುವ ದುರ್ಘಟನೆ ಬೊಮ್ಮನಹಳ್ಳಿಯಲ್ಲಿ ನಡೆದಿದೆ.
ಶಿವಮೊಗ್ಗ ಮೂಲದ ಸಮರ್ಥ ನಾಯರ್ ಕೊಲೆಯಾದವರು. ಕೃತ್ಯ ನಡೆಸಿದ ಕಿರಣ್, ಅರುಣ್ ಹಾಗು ರಾಕೇಶ್ ನನ್ನು ಬಂಧಿಸಲಾಗಿದೆ.
ಕೊಲೆಯಾದ ಸಮರ್ಥ ನಾಯರ್ ಭದ್ರಾವತಿ ಮೂಲದ ಯುವತಿಯನ್ನು ಪ್ರೀತಿಸುತಿದ್ದು ಆಕೆಯ ಜೊತೆಗೆ ಸುತ್ತಾಡುತ್ತಿದ್ದ.
ಆದರೆ ಆ ಯುವತಿಯು ಹಿಂದೆ ಕೆಲಸ ಮಾಡ್ತಿದ್ದ ಕಂಪನಿಯಲ್ಲಿ ಆರೋಪಿ ಕಿರಣ್ ನನ್ನು ಪ್ರೀತಿಸುತ್ತಿದ್ದಳು. ಕಿರಣ್ ಹಾಗು ಯುವತಿ ನಡುವಿನ ಪ್ರೀತಿ ಹಲವಾರು ಇತ್ತೀಚೆಗೆ ಬ್ರೇಕಪ್ ಆಗಿತ್ತು. ಬಳಿಕ ಯುವತಿಯು ಸಮರ್ಥ ನಾಯರ್ ಜೊತೆಗೆ ಪ್ರೀತಿಯಲ್ಲಿ ಬಿದ್ದಿದ್ದು ಆತನ ಜೊತೆಗೆ ಹೆಚ್ಚು ಕಾಲ ಕಳೆಯ ತೊಡಗಿದ್ದಳು.
ಈ ವಿಷಯ ಗೊತ್ತಾಗಿ ಹಳೆ ಪ್ರೇಮಿ ಕಿರಣ್ ಆಕ್ರೋಶಗೊಂಡಿದ್ದು ಸಮರ್ಥ ನಾಯರ್ ಗೆ ಬುದ್ದಿ ಕಲಿಸಲು ಮುಂದಾಗಿ ಸ್ನೇಹಿತರಾದ ಇನ್ನಿಬ್ಬರು ಆರೋಪಿಗಳ ಜೊತೆ ಯುವತಿಯ ಜೊತೆ ಸಮರ್ಥ ನಾಯರ್ ಇದ್ದ ಸಮಯದಲ್ಲಿ ಆಕೆಯ ಮನೆಗೆ ಬಂದಿದ್ದಾರೆ.
ಅಲ್ಲಿ ಸಮರ್ಥ ನಾಯರ್ ಇರುವುದನ್ನು ಕಂಡು ಏಕಾಏಕಿ ಆತನ ಮೇಲೆ ಹಲ್ಲೆಗೆ ಮುಂದಾಗಿತಲೆಗೆ ಕಾಲಿನಿಂದ ಒದ್ದು ಗೋಡೆಗೆ ತಲೆ ಹಿಡಿದು ಗುದ್ದಿ ಪರಾರಿಯಾಗಿದ್ದಾರೆ.
ಗಂಭೀರವಾಗಿ ಗಾಯಗೊಂಡ ಸಮರ್ಥ ನಾಯರ್ ರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು ಪ್ರಕರಣ ದಾಖಲಿಸಕೊಂಡ ಬೊಮ್ಮನಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.