ಬೆಂಗಳೂರು : ರಾಜ್ಯದಾದ್ಯಂತ ಭಾರಿ ಸುದ್ದಿ ಮಾಡಿದ್ದ ಬೆಂಗಳೂರ ಹಾಲು ಒಕ್ಕೂಟದಲ್ಲಿ ನಡೆದ ವಿವಿಧ ಹುದ್ದೆಗಳ ನೇಮಕಾತಿ ಅಕ್ರಮ ಆರೋಪದ ಬಗ್ಗೆ ರಾಜ್ಯ ಸರ್ಕಾರ ಉನ್ನತ ತನಿಖೆಗೆ ಆದೇಶಿಸಿದೆ.
ಬೆಂಗಳೂರು ಹಾಲು ಒಕ್ಕೂಟದ ನೇಮಕಾತಿ ಪ್ರಕ್ರಿಯೆಯಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಸ್ವಜನ ಪಕ್ಷಪಾತ,ಅಕ್ರಮ ಮಾರ್ಗಗಳ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲಾಗಿದೆ ಎಂದು ಆರೋಪಿಸಿ ಸಂಸದ ಡಿ.ಕೆ.ಸುರೇಶ್ ಸಹಕಾರ ಸಚಿವರಿಗೆ ಪತ್ರ ಬರೆದಿದ್ದರು.
ಬಮೂಲ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ 2021ರ ಡಿಸೆಂಬರ್ 12ರಂದು ನಡೆಸಲಾಗಿರುವ ಲಿಖಿತ ಪರೀಕ್ಷೆಯಲ್ಲಿ ಹಲವು ಅಕ್ರಮಗಳು ನಡೆದಿವೆ. ಬಮೂಲ್ ಸಂಸ್ಥೆಯ ಎಂ.ಡಿ. ಸಹಕಾರ ಸಂಘದ ನಿಯಮ ಪಾಲಿಸಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ನಿವೃತ್ತಿ ಅಂಚಿನಲ್ಲಿದ್ದ ಅವರು ಸಂಸ್ಥೆ ಮೇಲೆ ಆರ್ಥಿಕವಾಗಿ ಹಾಗು ಸಂಸ್ಥೆಯ ನೀತಿ ನಿಯಮಗಳಿಗೆ ಗಂಭೀರ ಪರಿಣಾಮ ಬೀರುವ ಯಾವುದೇ ತೀರ್ಮಾನ ಕೈಗೊಳ್ಳುವಂತಿಲ್ಲ. ಆದರೆ, ಅವರು ಸಹಕಾರಿ ಸಂಘದ ಈ ಎಲ್ಲಾ ನಿಯಮಗಳನ್ನು ಅವರು ಸಂಪೂರ್ಣವಾಗಿ ಧಿಕ್ಕರಿಸಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ಹುದ್ದುಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ತಯಾರಿಕೆ, ಮೌಲ್ಯ ಮಾಪನ, ಫಲಿತಾಂಶ ಪ್ರಕಟಣೆಯ ಉಸ್ತುವಾರಿಯನ್ನು ಬಮೂಲ್ ಆಡಳಿತ ಮಂಡಳಿ ಸದಸ್ಯರು ಹಾಗು ಇತರೆ ಜನಪ್ರತಿನಿಧಿಗಳಿಂದ ವಿರೋಧದ ನಡುವೆಯೂ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯಕ್ಕೆ ವಹಿಸಲಾಗಿತ್ತು. ಇದರಲ್ಲಿ ಬಾಹ್ಯ ಒತ್ತಡ ಹಾಗು ರಾಜಕೀಯ ಶಿಫಾರಸು ಕೆಲಸ ಮಾಡಿದೆ
ಲಿಖಿತ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳು ನಿಗದಿತ ಸಮಯಕ್ಕಿಂತ ಅರ್ಧಗಂಟೆ ಮೊದಲೇ ಸೋರಿಕೆಯಾಗಿದ್ದು, ಅನರ್ಹ ಹಾಗು ಪ್ರಭಾವಿಗಳಿಗೆ ಅನುಕೂಲ ಮಾಡಿಕೊಡಲಾಗಿದೆ ಈ ಎಲ್ಲಾ ಪ್ರಕ್ರಿಯೆಗಳನ್ನು ಗಮನಿಸಿದಾಗ ಬಾರಿ ಅಕ್ರಮ ನಡೆದಿರುವುದು ಸ್ಪಷ್ಟ ಎಂದು ಡಿ.ಕೆ. ಸುರೇಶ್ ಪತ್ರದಲ್ಲಿ ವಿವರಿಸಿದ್ದಾರೆ.
ಈ ಆರೋಪಗಳ ಬಗ್ಗೆ SIT ಅಥವ ಸಿಐಡಿಯಿಂದ ತನಿಖೆ ನಡೆಸುವಂತೆ ಸಂಸದ ಡಿ.ಕೆ.ಸುರೇಶ್ ಸರ್ಕಾರಕ್ಕೆ ಆಗ್ರಹಿಸಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ಎಲ್ಲಾ ಆರೋಪಗಳ ಬಗ್ಗೆ ಸಹಕಾರ ಇಲಾಖೆ ಜಂಟಿ ರಿಜಿಸ್ಟಾರ್ ಅವರಿಗೆ ತನಿಖೆ ನಡೆಸಲು ಸೂಚಿಸಿದ್ದಾರೆ.