ಆಧುನಿಕ ಜೀವನ ಶೈಲಿಗೆ ಅನುಗುಣವಾಗಿ ಆಹಾರ ಪದ್ಧತಿ, ಹವ್ಯಾಸ ಎಲ್ಲವೂ ಬದಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಬಹುತೇಕ ಮಂದಿ ದೇಹಕ್ಕೆ ಅಹಿತಕರವಾದ ಹವ್ಯಾಸಗಳನ್ನೇ ಅಭ್ಯಾಸವಾಗಿಸಿಕೊಂಡಿರುವುದು ವಿಪರ್ಯಾಸ. ಇಂತಹ ಕೆಲ ಅಹಿತಕರ ಅಭ್ಯಾಸಗಳಲ್ಲಿ ಒಂದು ನಿತ್ಯ ಮದ್ಯ ಸೇವನೆ. ಈಗಾಗಲೇ ಮದ್ಯಪಾನ ಆರೋಗ್ಯಕ್ಕೆ ಹಾನಿಕರವೆಂಬುದು ತಿಳಿದಿರುವ ವಿಚಾರವಾದರೂ, ಹಾಲ್ಕೋಹಾಲ್ ಕಡಿಮೆ ಪ್ರಮಾಣದಲ್ಲಿರುವ ಮದ್ಯ ಸೇವನೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವೇನು ಬೀರಲಾರದು ಎಂಬ ತಪ್ಪುಕಲ್ಪನೆಯೂ ಕೆಲವರಲ್ಲಿದೆ. ಆದರೆ, ದಿನಕ್ಕೆ ಕೇವಲ ಒಂದು ಪಿಂಟ್ ಬಿಯರ್ ಸೇವನೆ ಅಥವ ವೈನ್ ಸೇವನೆ ಮಿದುಳಿನ ಸಾಮರ್ಥ್ಯವನ್ನೇ ಕುಗ್ಗಿಸಿ, ಸಂಕುಚಿತವಾಗಿಸಬಲ್ಲದು ಎಂಬುದು ನಿಮಗೆ ತಿಳಿದಿದೆಯೇ? ಇತ್ತೀಚೆಗಿನ ಸಂಶೊಧನೆಯೊಂದು ಈ ವಿಚಾರ ಬಹಿರಂಗಪಡಿಸಿದೆ ಈ ಸಂಬಂಧಿಸಿದ ಹೆಚ್ಚಿನ ಮಾಹಿತಿ ಇಲ್ಲಿದೆ.
ವಿಸ್ಕಾನ್ಸಿನ್-ಮ್ಯಾಡಿಸನ್ ಅಧ್ಯಯನ
ಅಮೆರಿಕದ ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾನಿಲಯದ ಸಂಶೋಧಕರು ಆಲ್ಕೋಹಾಲ್ ಸೇವಿಸುವವರ ಕುರಿತು ಸಂಶೋಧನೆ ನಡೆಸಿದ್ದು, ಘಟಕಗಳ ಆಧಾರದಲ್ಲಿ ಆಲ್ಕೋಹಾಲ್ ಸೇವನೆಯನ್ನು ಪರಿಗಣಿಸಿದೆ. ಒಂದು ಆಲ್ಕೋಹಾಲ್ ಘಟಕ ಎಂದರೆ 10 ಮಿಲಿಲೀಟರ್ ಅಥವ 8 ಗ್ರಾಂ ಶುದ್ಧ ಆಲ್ಕೋಹಾಲ್ ಎನ್ನಬಹುದು.ಇದರ ಅರ್ಥ 25 ಮಿಲಿಲೀಟರ್ ಅಥವ ಒಂದು ಶಾಟ್ ಮದ್ಯವು ಒಂದು ಘಟಕವಾದಂತೆ. 16-ಔನ್ಸ್ ಕ್ಯಾನ್ ಬಿಯರ್ ಅಥವ ಎರಡು ಸೈಡರ್ ಘಟಕ ಮತ್ತು 6-ಔನ್ಸ್ ಗಾಜಿನ ವೈನ್ (175 ಮಿಲಿಲೀಟರ್) ಸೇರಿದರೆ ಆಲ್ಕೋಹಾಲಿನ ಎರಡು ಘಟಕಗಳು ಎಂದು ಪರಿಗಣಿಸಬಹುದು. ಈ ರೀತಿ ಘಟಕಗಳ ಆಧಾರದ ಮೇಲೆ ಒಬ್ಬ ವ್ಯಕ್ತಿ ಎಟು ಮದ್ಯ ಸೇವಿಸುತ್ತಾನೆ ಹಾಗು ಅದರಿಂದ ಮಿದುಳಿನ ಮೇಲಾಗುವ ಪರಿಣಾಮವನ್ನು ಸಂಶೋಧಕರು ಬಹಿರಂಗಪಡಿಸಿದ್ದಾರೆ.
ಅಧ್ಯಯನ ಹೇಳುವುದೇನು
- ಸತತ ಒಂದು ತಿಂಗಳು ನಿತ್ಯವೂ ಒಂದು ಪಿಂಟ್ ಬಿಯರ್ ಅಥವ 6 ಔನ್ಸ್ ಗ್ಲಾಸ್ ವೈನ್ (2 ಯೂನಿಟ್ ಆಲ್ಕೋಹಾಲ್) ಸೇವಿಸಿದ 50 ವರ್ಷ ಮೇಲ್ಪಟ್ಟವರ ಮಿದುಳು ಒಂದು ಯೂನಿಟ್ ಆಲ್ಕೋಹಾಲ್ ಸೇವಿಸಿದವರ ಮಿದುಳಿಗಿಂತ 2 ವರ್ಷ ಸಂಕುಚಿತವಾಗಿರುತ್ತದೆ ಎಂದು ಅಧ್ಯಯನ ಬಹಿರಂಗಪಡಿಸಿದೆ.
- ದಿನಕ್ಕೆ ಮೂರು ಯೂನಿಟ್ ಆಲ್ಕೋಹಾಲ್ ಸೇವಿಸುವವರ ಮಿದುಳಿನಲ್ಲಿನ ಬಿಳಿ ಹಾಗು ಬೂದು ದ್ರವ್ಯಗಳ ಪ್ರಮಾಣವೂ ಕಡಿಮೆಯಾಗಿರುತ್ತದೆ ಅಲ್ಲದೇ, ಅವರ ಮಿದುಳಿನ ವಯಸ್ಸು 3.5 ವರ್ಷದಷ್ಟು ಸಂಕುಚಿತಗೊಂಡಿರುತ್ತದೆ.
- ದಿನಕ್ಕೆ ಒಂದು ಯೂನಿಟ್ ಆಲ್ಕೋಹಾಲ್ ಸೇವಿಸುವವರ ಮಿದುಳು ಮದ್ಯವನ್ನೇ ಸೇವಿಸದವರ ಮಿದುಳಿನ ಕೇವಲ ಅರ್ಧ ವಯಸ್ಸಿಗೆ ಸಮನಾಗಿರುತ್ತದೆ. ಜತೆಗೆ 4 ಯೂನಿಟ್ ಆಲ್ಕೋಹಾಲ್ ಸೇವನೆ ಮಾಡುವವರ ಮಿದುಳು 10ವರ್ಷಗಳಷ್ಟು ಸಂಕುಚಿತಗೊಂಡಿರುತ್ತದೆ
- ಹೆಚ್ಚು ಆಲ್ಕೋಹಾಲ್ ಸೇವಿಸಿದಂತೆಲ್ಲ ಮಿದುಳಿನ ವಯಸ್ಸು ಕಡಿಮೆಯಾಗಿ, ಸಂಕುಚಿತಗೊಳ್ಳುತ್ತದೆ ಅಲ್ಲದೇ, ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತದೆ. ಇದು ಪ್ರಾಣಕ್ಕೂ ಕುತ್ತು ತರಬಲ್ಲದು ಎನ್ನಲಾಗಿದೆ.
ಅಧ್ಯಯನದ ಮಿತಿ
ಸಂಶೋಧನೆಗೆ ಒಳಪಡಿಸಿರುವ ವ್ಯಕ್ತಿಗಳು ಮದ್ಯ ಸೇವನೆ ಮಾಡುವುದಕ್ಕೆ ಮುಂಚಿನ ಒಂದು ವರ್ಷದ ದತ್ತಾಂಶಗಳನ್ನು ಮಾತ್ರ ಸಂಶೋಧಕರು ಸಂಗ್ರಹಿಸಿರುವುದು ಅಧ್ಯಯನದ ಮಿತಿ ಎಂದು ಪರಿಗಣಿಸಲಾಗಿದೆ. ಅಂದರೆ, ಒಬ್ಬ ವ್ಯಕ್ತಿಯ ಮಿದುಳಿನ ಮೇಲಿನ ಪರಿಣಾಮ ಆ ವ್ಯಕ್ತಿ ಜೀವಿತಾವಧಿಯಲ್ಲಿ ಸೇವಿಸಿರುವ ಮದ್ಯದ ಪ್ರಮಾಣಕ್ಕೂ ಸಂಬಂಧಿಸಿದ್ದಾಗಿದೆ. ಈ ಹಿನ್ನೆಲೆ ಅಧ್ಯಯನವನ್ನು ಆಧರಿಸಿ ಯಾವುದೇ ನಿರ್ಣಾಯಕ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಇನ್ನೂ ಹೆಚ್ಚಿನ ಅಧ್ಯಯನದ ಅಗತ್ಯವಿದೆ ಎಂದು ವಾಷಿಂಗ್ಟನ್ ವಿಶ್ವವಿದ್ಯಾಲಯದ ಆರೋಗ್ಯ ಮಾಪನ ವಿಜ್ಞಾನಗಳ ಪ್ರಾಧ್ಯಾಪಕ ಎಮ್ಯಾನುಯೆಲಾ ಗಕಿಡೌ ಹೇಳಿದ್ದಾರೆ.
ಮದ್ಯದಿಂದ ಪ್ರಯೋಜನವಿದೆಯೇ?
ಆಧುನಿಕ ವೈದ್ಯರು ನಿಯಮಿತ ಪ್ರಮಾಣದ ಆಲ್ಕೋಹಾಲ್ ಸೇವನೆ ಹೃದಯ ಮತ್ತು ಮಿದುಳಿಗೆ ಆರೋಗ್ಯ ಪ್ರಯೋಜನವನ್ನು ನೀಡುತ್ತದೆ ಎಂದು ನಂಬಿದ್ದರು. ಆದರೆ ಇತ್ತೀಚಿನ ಸಂಶೋಧನೆ ಇಂತಹ ವಿಚಾರಗಳು ಕೇವಲ ಊಹೆ ಎಂದಿದೆ. ಅಲ್ಲದೇ, ಯಾವುದೇ ಪ್ರಮಾಣದಲ್ಲಿ ಮದ್ಯ ಸೇವನೆ ಆರೋಗ್ಯಕರವಲ್ಲ ಎಂದು ಕಂಡುಹಿಡಿದಿದೆ. ವಿಶೇಷವಾಗಿ ವಲ್ಡ…ರ್ ಹಾರ್ಟ್ ಫೆಡರೇಶನ್ ಕೂಡ ಇತ್ತೀಚೆಗೆ ಆರೋಗ್ಯ ಸುರಕ್ಷಿತವಾಗಿರಬಹುದು ಎನ್ನುವಂತಹ ಯಾವುದೇ ಮದ್ಯ ಪ್ರಮಾಣವಿಲ್ಲ ಎಂದು ಸ್ಪಷ್ಟಪಡಿಸಿದೆ. ಆದಾಗ್ಯೂ ಹೃದ್ರೋಗ, ಮಧುಮೇಹ ಇರುವಂತಹ ವ್ಯಕ್ತಿಗಳಿಗೆ ಸಣ್ಣ ಪ್ರಮಾಣದ ಆಲ್ಕೋಹಾಲ್ ಸೇವನೆಯಿಂದ ಪ್ರಯೋಜನವಿದೆ ಎನ್ನಲಾಗಿದೆ. ಆದರೆ, ಇವರನ್ನು ಹೊರತು ಪಡಿಸಿದ ಬಹುತೇಕ ಮಂದಿಗೆ ಆಲ್ಕೋಹಾಲ್‌ನಿಂದ ಸ್ತನ ಕ್ಯಾನ್ಸರ್, ರಸ್ತೆ ಅಪಘಾತಗಳಿಗೆ ಗುರಿಯಾಗುವುದು ಇಂತಹ ಸಮಸ್ಯೆಗಳಿಗೆ ಸಿಲುಕುತ್ತಾರೆ. ಒಟ್ಟಾರೆ ಆಲ್ಕೋಹಾಲ್ ಪ್ರಯೋಜನ ಅಥವ ಹಾನಿಕಾರಕ ಎಂಬುದು ಆ ವ್ಯಕ್ತಿಯ ಆರೋಗ್ಯ ಸ್ಥಿತಿ ಮೇಲೆ ಅವಲಂಬಿತವಾಗಿರುತ್ತದೆ ಎನ್ನಲಾಗಿದೆ.
ಅತಿದೊಡ್ಡ ಅಧ್ಯಯನ
- ಬ್ರಿಟನ್ ಬಯೋಬ್ಯಾಂಕ್ ಅಧ್ಯಯನದಲ್ಲಿ ಭಾಗವಹಿಸಿದ 36,000 ಕ್ಕೂ ಹೆಚ್ಚು ಜನರ ದತ್ತಾಂಶವನ್ನು ಈ ಅಧ್ಯಯನ ವರದಿಯು ವಿಶ್ಲೇಷಿಸಿದ್ದು, ಇದು ಬ್ರಿಟನ್‌ನಲ್ಲಿ ವಾಸಿಸುವ 5,00,000 ಕ್ಕೂ ಹೆಚ್ಚು ಮಧ್ಯವಯಸ್ಕರ ಆರೋಗ್ಯ ಸ್ಥಿತಿಯ ಬಗ್ಗೆ ಆಳವಾದ ಮಾಹಿತಿಯನ್ನು ಕಲೆಹಾಕಿದೆ.
- ಅಧ್ಯಯನಕ್ಕೆ ಒಳಪಟ್ಟ ಜನರು ಹಿಂದಿನ ವರ್ಷದಲ್ಲಿ ಪ್ರತಿ ವಾರ ಸೇವಿಸಿದ ಮದ್ಯದ ಪ್ರಮಾಣದ ಮಾಹಿತಿಯನ್ನು ಹೊಂದಿದೆ.
- ಪ್ರತಿ ವ್ಯಕ್ತಿಯನ್ನು ಬ್ರೈನ್ ಸ್ಕ್ಯಾನ್ ಗೆ ಒಳಪಡಿಸಿ, ಮಿದುಳಿನ ವಯಸ್ಸು, ಚಿತ್ರಣ, ಧೂಮಪಾನದಿಂದಾಗಿರುವ ಪರಿಣಾಮದ ಮಟ್ಟ, ವಂಶಾವಳಿ ಸಮಸ್ಯೆ,ತಲೆಯ ಗಾತ್ರ ಸೇರಿದಂತೆ ಪ್ರತಿ ವಿಚಾರವನ್ನೂ ಸೂಕ್ಷ್ಮವಾಗಿ ಗಮನಿಸಲಾಗಿದೆ.
- ಹಿಂದಿನ ಯಾವುದೇ ಸಂಶೋಧನೆ, ತನಿಖೆಗಳಿಗಿಂತ ಅಗಾಧವಾದ ಹೆಚ್ಚಿನ ಪುರಾವೆಗಳನ್ನು ಒದಗಿಸುತ್ತದೆ ಮತ್ತು ಚರ್ಚೆಯನ್ನು ಇತ್ಯರ್ಥಗೊಳಿಸಲು ಪೂರಕವಾಗಿದೆ.