ಬೆಂಗಳೂರು.ನ,13:
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಕರ್ಮಕಾಂಡ ಆರೋಪದ ಬಗ್ಗೆ ತನಿಖೆ ತೀವ್ರಗೊಳಿಸಿರುವ ಜಾರಿ ನಿರ್ದೇಶನಾಲಯ ಸಂಸದ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಕುಮಾರ್ ನಾಯಕ್ ಅವರಿಗೆ ಸಮನ್ಸ್ ನೀಡಿದೆ.
ಮತ್ತೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಸಿ.ಟಿ.ಕುಮಾರ್ ಅವರನ್ನು ತೀವ್ರ ವಿಚಾರಣೆಗೊಳಪಡಿಸಿದೆ.
ಹಲವಾರು ವರ್ಷಗಳಿಂದ ಸಿದ್ದರಾಮಯ್ಯ ಅವರ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿರುವ ಸಿ ಟಿ ಕುಮಾರ್ ಮೈಸೂರಿನಲ್ಲಿ ಸಿಎಂಗೆ ಸೇರಿದ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿ.ಟಿ ಕುಮಾರ್ ಅವರನ್ನು ವಿಚಾರಣೆ ನಡೆಸಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸಿಎಂ ಪತ್ನಿ ಬದಲಿ 14 ನಿವೇಶನಗಳನ್ನು ಪಡೆದ ವಿಚಾರದಲ್ಲಿ ಹಲವಾರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದುಕೊಂಡಿದ್ದಾರೆ.
ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಪರ್ಯಾಯ ನಿವೇಶನ ಬೆಳವಣಿಗೆ ನಡೆದ ಸಮಯದಲ್ಲಿ ಮೈಸೂರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಕುಮಾರ್ ನಾಯಕ್ ಅವರಿಗೆ ಇಡಿ ಸಮನ್ಸ್ ನೀಡಿದೆ.
ಜಿಲ್ಲಾಧಿಕಾರಿಯಾಗಿದ್ದ ಸಮಯದಲ್ಲಿ ಈ ಪ್ರಕರಣ ನಡೆದಿದ್ದು ಅಂದು ಪ್ರಾಧಿಕಾರ ಸ್ವಾಧೀನ ಪಡಿಸಿಕೊಂಡ ಜಮೀನು ಮತ್ತು ಸ್ವಾಧೀನ ಪ್ರಕ್ರಿಯೆಯಿಂದ ಜಮೀನು ಕೈಬಿಟ್ಟ ಬೆಳವಣಿಗೆಗಳ ಬಗ್ಗೆ ಸರಿಯಾದ ನಿಗಮ ವಹಿಸಿಲ್ಲ ಹಾಗೂ ಪರ್ಯಾಯ ನಿವೇಶನ ನೋಂದಣಿ ಮಾಡಿಕೊಡುವ ಸಮಯದಲ್ಲಿ ದಾಖಲೆಗಳನ್ನು ಪರಿಶೀಲಿಸಿಲ್ಲ ಒತ್ತಡಕ್ಕೆ ಮಣಿದು ಕೆಲಸ ಮಾಡಿಕೊಟ್ಟಿದ್ದಾರೆ ಎಂಬ ಆರೋಪವನ್ನು ಕುಮಾರ್ ನಾಯಕ್ ಎದುರಿಸುತ್ತಿದ್ದು ಈ ಅಂಶಗಳ ಬಗ್ಗೆ ಮಾಹಿತಿ ಪಡೆಯಲು ಅವರಿಗೆ ಇಡಿ ಸಮನ್ಸ್ ನೀಡಿದೆ ಎಂದು ಹೇಳಲಾಗುತ್ತಿದೆ