ಬೆಂಗಳೂರು,ಆ.12:ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಪಾದಯಾತ್ರೆ ನಡೆಸಿದ ಬಿಜೆಪಿಯಲ್ಲಿ ಇದೀಗ ಭಿನ್ನಮತ ಧಗದಗಿತೊಡಗಿದೆ. ಪಕ್ಷದ ಅಧ್ಯಕ್ಷ ವಿಜಯೇಂದ್ರ ಪದಚ್ಯುತಿಗೆ ಆಗ್ರಹ ತೀವ್ರಗೊಂಡಿದೆ ಇದರ ಬೆನ್ನಲ್ಲೇ ಹೊಂದಾಣಿಕೆ ಮೂಲಕ ಗೆಲುವು ಸಾಧಿಸಿರುವ ವಿಜಯೇಂದ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಆಗ್ರಹ ಕೂಡ ಕೇಳಿಬಂದಿದೆ.
ಬಿಜೆಪಿಯ ಅತೃಪ್ತ ಹಿರಿಯ ನಾಯಕರು ಬೆಳಗಾವಿಯಲ್ಲಿ ಸಭೆ ಸೇರಿ ಮತ್ತೊಂದು ಪಾದಯಾತ್ರೆಗೆ ತೀರ್ಮಾನಿಸಿರುವ ಬೆನ್ನೆಲ್ಲೇ ಹಲವು ನಾಯಕರು ಇವರನ್ನು ಬೆಂಬಲಿಸಿದ್ದಾರೆ ಇದೆ ವೇಳೆ ಇಂತಹ ಪಾದಯಾತ್ರೆ ನಡೆದಲ್ಲಿ ಬಿಜೆಪಿ ತಾಲೂಕು ಹಂತದಲ್ಲೇ ವಿಭಜನೆಯಾಗಲಿದೆ ಎಂದು ಎಚ್ಚರಿಸಿರುವ ಹಿರಿಯ ನಾಯಕ ಈಶ್ವರಪ್ಪ ವರಿಷ್ಠರು ತಕ್ಷಣವೇ ವಿಜಯೇಂದ್ರ ಅವರನ್ನು ಬದಲಾಯಿಸಬೇಕು ಎಂದು ಆಗ್ರಹಿಸಿದ್ದಾರೆ
ಇದರ ನಡುವೆ ದಾವಣಗೆರೆಯ ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ವಿಜಯೇಂದ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಮರುElection ಎದುರಿಸಬೇಕು. ಚುನಾವಣೆಯ ಗೆಲುವು ಕಾಂಗ್ರೆಸ್ ಭಿಕ್ಷೆಯಲ್ಲ ಬಿಜೆಪಿಯ ಶಕ್ತಿ ಎಂಬುದನ್ನು ನಿರೂಪಿಸಬೇಕು ಎಂದು ಆಗ್ರಹಿಸಿದರು.
ಬಿ.ವೈ.ವಿಜಯೇಂದ್ರ ಶಾಸಕ ಸ್ಥಾನ ಕಾಂಗ್ರೆಸ್ ಭಿಕ್ಷೆ’ ಎಂಬ ಗಂಭೀರ ಆರೋಪವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವಿನ ಹೊಂದಾಣಿಕೆ ರಾಜಕಾರಣದ ಆರೋಪಕ್ಕೆ ಇದು ಪುಷ್ಟಿ ನೀಡಿದೆ. ಇಂತಹ ಬ್ಲ್ಯಾಕ್‌ಮೇಲ್‌ಗೆ ಬಿ.ಎಸ್.ಯಡಿಯೂರಪ್ಪ ಕುಟುಂಬ ಸರಿಯಾಗಿ ಪ್ರತಿಕ್ರಿಯಿಸಬೇಕು. ಕಾಂಗ್ರೆಸ್ ಭಿಕ್ಷೆಯಿಂದ ಶಾಸಕರಾಗುವ ಅನಿವಾರ್ಯತೆ ಬಿಜೆಪಿ ನಾಯಕರಿಗೆ ಇಲ್ಲ ಎಂಬುದನ್ನು ತೋರಿಸಬೇಕು’ ಎಂದು ಹೇಳಿದರು.
ರಾಜ್ಯದಲ್ಲಿ ನಡೆಯುತ್ತಿರುವ ಹೊಂದಾಣಿಕೆ ರಾಜಕಾರಣ ಅಸಹ್ಯ ಹುಟ್ಟಿಸಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಭ್ರಷ್ಟಾಚಾರ ಮುಚ್ಚಿಕೊಳ್ಳಲು ಪರಸ್ಪರ ಪ್ರಯತ್ನಿಸುತ್ತಿದ್ದಾರೆ. ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಿರುವ ಮುಖಂಡರಿಗೆ ತಕ್ಕ ಪಾಠ ಕಲಿಸಲಿದ್ದೇವೆ’ ಎಂದರು.
‘ಬಿಜೆಪಿಯ ಸಮಾನ ಮನಸ್ಕರು ಬೆಳಗಾವಿಯಲ್ಲಿ ಸಭೆ ನಡೆಸಿದ್ದೇವೆ. ಪಕ್ಷದ ಬಲವರ್ಧನೆಯ ದೃಷ್ಟಿಯಿಂದ ಬೆಂಗಳೂರಿನಲ್ಲಿ ಮತ್ತೊಂದು ಸುತ್ತಿನ ಸಭೆ ಶೀಘ್ರದಲ್ಲೇ ಆಯೋಜಿಸಲಾಗುತ್ತಿದೆ. ಪಕ್ಷದ ಸಾಕಷ್ಟು ನಾಯಕರು ಈ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿ.ವೈ.ವಿಜಯೇಂದ್ರ ಮಾಡಿರುವ ತಪ್ಪುಗಳನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುತ್ತದೆ. ಪಕ್ಷಕ್ಕೆ ಪರ್ಯಾಯ ನಾಯಕರ ಅಗತ್ಯವಿದ್ದು, ಹೈಕಮಾಂಡ್ ಒಪ್ಪಿಗೆ ಪಡೆದು ಮುಂದುವರಿಯುತ್ತೇವೆ’ ಎಂದು ಪ್ರತಿಕ್ರಿಯಿಸಿದರು.
ಬಿಜೆಪಿ ಇಬ್ಭಾಗ:
ರಾಜ್ಯ ಬಿಜೆಪಿಯಲ್ಲಿ ಪರ್ಯಾಯ ನಾಯಕತ್ವಕ್ಕಾಗಿ ಆಗ್ರಹಿಸಿ ಹಲವು ಹಿರಿಯ ನಾಯಕರು ಮಾಡುತ್ತಿರುವ ಹೋರಾಟವನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಬೇಕು ತಪ್ಪಿದಲ್ಲಿ ಪಕ್ಷಕ್ಕೆ ದೊಡ್ಡ ಹಾನಿಯಾಗಲಿದೆ ಎಂದು ಹಿರಿಯ ನಾಯಕ ಈಶ್ವರಪ್ಪ ಎಚ್ಚರಿಸಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬೆಳಗಾವಿಯಲ್ಲಿ ಕೆಲವು ನಾಯಕರು ಮಾಡಿದ ಸಭೆಯನ್ನು ಹೈಕಮಾಂಡ್ ನಿರ್ಲಕ್ಷಿಸಬಾರದು ಈ ನಾಯಕರು ಘೋಷಿಸಿರುವಂತೆ ಪಾದಯಾತ್ರೆ ಮಾಡಿದರೆ ಬಿಜೆಪಿ ತಾಲೂಕು ಹಂತದಲ್ಲೇ ವಿಭಜನೆ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ಎಂಬ ಒಂದೇ ಕಾರಣಕ್ಕೆ ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಸರಿಯಲ್ಲ ಪಕ್ಷವನ್ನು ಒಂದು ಕುಟುಂಬದ ಹಿಡಿತಕ್ಕೆ ನೀಡಿರುವ ಕ್ರಮ ದುರದೃಷ್ಟಕರ ಎಂದು ಬಣ್ಣಿಸಿದರು.
ಬಿಜೆಪಿ ಅಧ್ಯಕ್ಷರಾದ ನಂತರ ವಿಜಯೇಂದ್ರ ಪಕ್ಷ ಸಂಘಟನೆಗೆ ಯಾವುದೇ ಒತ್ತು ನೀಡಲಿಲ್ಲ ಪ್ರತಿ ಹಂತದಲ್ಲಿ ಹೊಂದಾಣಿಕೆ ಮಾಡಿಕೊಂಡರು ಇದರ ಪರಿಣಾಮ ಲೋಕಸಭೆ ಚುನಾವಣೆಯಲ್ಲಿ ಪಕ್ಷ ನಿರೀಕ್ಷಿತ ಸ್ಥಾನ ಗಳಿಸಲಿಲ್ಲ ಪ್ರಧಾನಿ ಮೋದಿ ನಮಗೆಲ್ಲ ದೊಡ್ಡ ನಾಯಕ ಆದರೆ ವಿಧಾನಸಭೆ ಸೇರಿದಂತೆ ಸ್ಥಳೀಯ ಚುನಾವಣೆಗಳಲ್ಲಿ ಅವರ ವರ್ಚಸ್ಸು ನಡೆಯುವುದಿಲ್ಲ ಹೀಗಾಗಿ ಅವರ ಮುಖ ತೋರಿಸಿ ಚುನಾವಣೆ ಗೆದ್ದು ಬರುತ್ತೇವೆ ಎಂಬ ನಿಲುವಿನಿಂದ ಹೈಕಮಾಂಡ್ ಹಿಂದೆ ಸರಿಯಬೇಕು ಇಲ್ಲವಾದರೆ ಕರ್ನಾಟಕದಲ್ಲಿ ಪಕ್ಷ ನಿರ್ನಾಮವಾಗಲಿದೆ ಎಂದು ಎಚ್ಚರಿಸಿದರು.
Previous Articleಅಂಬಾನಿ ಮಾಡಿದ ಕೆಲಸ ಏನು ಗೊತ್ತಾ..
Next Article ಗ್ರಂಥಾಲಯ ಮೇಲ್ವಿಚಾರಕರಿಗೆ ಸಿಹಿ ಸುದ್ದಿ.