ಬೆಂಗಳೂರು,ಜ.9:
ಆಡಳಿತ ರೂಢ ಕಾಂಗ್ರೆಸ್ ನಲ್ಲಿ ಸಂಚಲನ ಮೂಡಿಸಿರುವ ಔತಣಕೂಟ ರಾಜಕಾರಣ ಇದೀಗ ಪ್ರಮುಖ ಪ್ರತಿಪಕ್ಷ ಬಿಜೆಪಿಯಲ್ಲೂ ಆರಂಭಗೊಂಡಿದ್ದು ಕುತೂಹಲ ಮೂಡಿಸಿದೆ.
ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಕುರಿತಂತೆ ಉಂಟಾಗಿರುವ ಅಸಮಾಧಾನದ ಬೆನ್ನಲ್ಲೇ ಕಳೆದ ರಾತ್ರಿ ತಟಸ್ಥರು ಎನ್ನಲಾದ ಬಣದ ಶಾಸಕರು ಮತ್ತು ಹಿರಿಯ ನಾಯಕರು ಭೋಜನಕೂಟ ನಡೆಸಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಉಂಟಾಗಿರುವ ಬಣ ಬಡಿದಾಟಕ್ಕೆ ಬ್ರೇಕ್ ಹಾಕಬೇಕು ಹೈಕಮಾಂಡ್ ಕೂಡಲೇ ಮಧ್ಯಪ್ರವೇಶಿಸಿ ಉಭಯ ಬಣಗಳ ಮುಖಂಡರೊಂದಿಗೆ ಮಾತುಕತೆ ನಡೆಸಿ ಗೊಂದಲ ಪರಿಹರಿಸಬೇಕು ಎಂದು ಆಗ್ರಹಿಸಲು ತೀರ್ಮಾನಿಸಲಾಗಿದೆ.
ಪಕ್ಷದ ಅಧ್ಯಕ್ಷ ವಿಜಯೇಂದ್ರ ನಾಯಕತ್ವದ ವಿರುದ್ಧ ಬಂಡಾಯ ಸಾರಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಮತ್ತು ಅರವಿಂದ ಲಿಂಬಾವಳಿ ಬಣ ವಿಜಯೇಂದ್ರ ಪದಚ್ಯುತಿಗೆ ಪಟ್ಟು ಹಿಡಿದಿದೆ. ಇದರ ಬೆನ್ನಲ್ಲೇ ಮಾಜಿ ಸಚಿವರಾದ ರೇಣುಕಾಚಾರ್ಯ ಮತ್ತು ಕಟ್ಟ ಸುಬ್ರಹ್ಮಣ್ಯ ನಾಯ್ಡು ನೇತೃತ್ವದ ಬಣ ಭಿನ್ನರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಇದು ಪಕ್ಷ ಸಂಘಟನೆಯ ಮೇಲೆ ದೊಡ್ಡ ಪರಿಣಾಮ ಬೀರಿದ್ದು ಗೊಂದಲ ಉಂಟಾಗಿದೆ ಇದನ್ನು ಬಗೆಹರಿಸಲು ಹೈಕಮಾಂಡ್ ಮಧ್ಯಪ್ರವೇಶಿಸಲು ಒತ್ತಾಯಿಸಬೇಕು ಎನ್ನುವ ತೀರ್ಮಾನಕ್ಕೆ ಕಳೆದ ರಾತ್ರಿಯ ಸಭೆ ಬಂದಿದೆ.
ವಿಜಯೇಂದ್ರ ಸಭೆ:
ಇದರ ಬೆನ್ನಲ್ಲೇ ಅಧ್ಯಕ್ಷ ವಿಜಯೇಂದ್ರ ಅವರು ನಾಳೆ ಮಾಜಿ ಶಾಸಕರು ಮತ್ತು ಸಚಿವರ ಔತಣಕೂಟ ಕರೆದಿದ್ದಾರೆ.
ನಾಳೆ ಮಧ್ಯಾಹ್ನ ಕ್ಯಾಪಿಟಲ್ ಹೋಟೆಲ್‌ನಲ್ಲಿ ಮಾಜಿ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರಿಗೆ ವಿಜಯೇಂದ್ರ ಭೋಜನ ಕೂಟ ಏರ್ಪಡಿಸಿದ್ದು, ಸಭೆಗೆ ಕಡ್ಡಾಯವಾಗಿ ಎಲ್ಲರೂ ಆಗಮಿಸಬೇಕೆಂದು ಸೂಚನೆ ನೀಡಲಾಗಿದೆ.
ಮೇಲ್ನೋಟಕ್ಕೆ ಇದೊಂದು ಪಕ್ಷದ ಸಂಘಟನೆ ಕುರಿತಾಗಿ ನಡೆಯಲಿರುವ ಸಭೆ ಎಂದೇ ಹೇಳಲಾಗುತ್ತಿದೆಯಾದರೂ ಬಿಜೆಪಿ ಒಳಗೆ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಆದರೆ ಸದ್ಯದಲ್ಲಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಸಾಂಸ್ಥಿಕ Election ನಡೆಯಲಿದ್ದು ಇದರಲ್ಲಿ ವಿಜಯೇಂದ್ರ ಅವರ ಬೆಂಬಲಕ್ಕೆ ಎಲ್ಲರೂ ನಿಲ್ಲುವಂತೆ ಮನವಿ ಮಾಡಲು ಈ ಸಭೆ ಆಯೋಜಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಾಲ್ಗೊಳ್ಳಲಿರುವ ಈ ಸಭೆಯಲ್ಲಿ ಪಕ್ಷದ ಅಧ್ಯಕ್ಷರಾಗಿ ವಿಜಯೇಂದ್ರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲು ಮನವಿ ಮಾಡಲಿದ್ದಾರೆ ಎಂದು ಗೊತ್ತಾಗಿದೆ.
Previous Articleಬಳ್ಳಾರಿಯಲ್ಲಿ ಜೀನ್ಸ್ ಪಾರ್ಕ್ ಸ್ಥಾಪನೆ
Next Article ಕಾಂಗ್ರೆಸ್ಸಿನಲ್ಲಿ ಶತ್ರು ಸಂಹಾರ ನಡೆಯಲಿದೆಯಾ