ಬೆಂಗಳೂರು,ಮಾ.26:
ರಾಜ್ಯ ಬಿಜೆಪಿಯಲ್ಲಿ ಹಠಾತ್ ವಿದ್ಯಮಾನಗಳು ನಡೆದಿದ್ದು, ಪಕ್ಷದ ರಾಜ್ಯ ನಾಯಕತ್ವದ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದ್ದ ಹಿರಿಯ ನಾಯಕ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಲಾಗಿದೆ.
ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಆರೋಪದಲ್ಲಿ ಯತ್ನಾಳ್ ಅವರಿಗೆ ಕೇಂದ್ರೀಯ ಶಿಸ್ತು ಸಮಿತಿ ಎರಡು ಬಾರಿ ನೋಟಿಸ್ ನೀಡಿದ್ದು ಅದಕ್ಕೆ ಅವರು ನೀಡಿದ ಉತ್ತರವನ್ನು ಆಧರಿಸಿ ಹೈಕಮಾಂಡ್ ಇದೀಗ ಉಚ್ಛಾಟನೆಯ ಆದೇಶ ಪ್ರಕಟಿಸಿದೆ.
ಆರು ವರ್ಷಗಳ ಕಾಲ ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಬಸನಗೌಡ ಪಾಟೀಲ್ ಅವರನ್ನು ಉಚ್ಛಾಟಿಸಲಾಗಿದೆ ಎಂದು ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಓಂ ಪಾಠಕ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಕಳೆದ 2015ರಲ್ಲಿ ಪಕ್ಷದ ಶಿಸ್ತು ಉಲ್ಲಂಘಿಸಿದ ಆರೋಪದಲ್ಲಿ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿತ್ತು ಇದೀಗ ಎರಡನೇ ಬಾರಿ ಅವರನ್ನು ಇದೇ ಕಾರಣಕ್ಕಾಗಿ ಉಚ್ಛಾಟಿಸಲಾಗಿದೆ.
ಕಳೆದ ರಾತ್ರಿಯಷ್ಟೇ ಪಕ್ಷದ ಶಿಸ್ತು ಉಲ್ಲಂಘಿಸಿದ ಆರೋಪದಲ್ಲಿ ಶಾಸಕರಾದ ಬಿಪಿ ಹರೀಶ್ ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರಿಗೆ ನೋಟಿಸ್ ನೀಡಲಾಗಿತ್ತು ಅದೇ ರೀತಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪರವಾಗಿ ಸಭೆಗಳನ್ನು ನಡೆಸುವ ಮೂಲಕ ಶಿಸ್ತು ಉಲ್ಲಂಘಿಸಿದ ಆರೋಪದಲ್ಲಿ ಮಾಜಿ ಮಂತ್ರಿಗಳಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ರೇಣುಕಾಚಾರ್ಯ ಅವರಿಗೂ ನೋಟಿಸ್ ನೀಡಲಾಗಿದ್ದು ಇದೀಗ ಈ ಐದು ಜನರ ಬಗ್ಗೆ ಪಕ್ಷದ ಹೈಕಮಾಂಡ್ ಯಾವ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.