ಬೆಂಗಳೂರು – ರಾಜ್ಯ ರಾಜಕೀಯದಲ್ಲಿ ಆಪರೇಷನ್ ಬಿರುಗಾಳಿ ಬುಗಿಲೆದ್ದಿದೆ. ಲೋಕಸಭೆ ಚುನಾವಣೆಗೆ ಇನ್ನೂ ಒಂದು ವರ್ಷವಿರುವಾಗಲೇ ರಾಜ್ಯ ರಾಜಕೀಯದಲ್ಲಿ ಪಕ್ಷಾಂತರ ಪರ್ವ ಬಿರುಸುಗೊಂಡಿದೆ.ಸ್ಪಷ್ಟ ಬಹುಮತದಿಂದ ಅಧಿಕಾರ ಹಿಡಿದರುವ ಕಾಂಗ್ರೇಸ್ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಘರ್ ವಾಪ್ಸಿ ಹೆಸರಲ್ಲಿ ಈ ಪಕ್ಷಾಂತರಕ್ಕೆ ಕೈಹಾಕಿದೆ.
ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನ ಗೆಲ್ಲಿಸಿಕೊಡುವುದಾಗಿ ರಾಜ್ಯ ನಾಯಕರು ಹೈಕಮಾಂಡ್ ಗೆ ಭರವಸೆ ನೀಡಿದ್ದಾರೆ ಅದರ ಭಾಗವಾಗಿ ಈ ಬೆಳವಣಿಗೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.
ಆದರೆ ವಾಸ್ತವ ಸಂಗತಿ ಇದಲ್ಲ.ಈ ಪಕ್ಷಾಂತರಕ್ಕೆ ಪ್ರಮುಖ ಕಾರಣ ನ್ಯಾಯಮೂರ್ತಿ ನಾಗಮೋಹನ್ ದಾಸ್ ಮತ್ತು ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ ಕುನ್ಹಾ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಸರ್ಕಾರದ ವಿವಿಧ ಯೋಜನೆಗಳ ಕಾಮಗಾರಿ ಗುತ್ತಿಗೆಯಲ್ಲಿ 40ರಷ್ಟು ಕಮಿಷನ್ ಪ್ರಕರಣದ ಬಗ್ಗೆ ನ್ಯಾಯಾಂಗ ವಿಚಾರಣೆಗೆ ರಾಜ್ಯ ಸರ್ಕಾರ ಆದೇಶಿಸಿದೆ.
ಹೈಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ವಿಚರಣಾ ಆಯೋಗ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅದೇ ರೀತಿ ಕೋವಿಡ್ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ನಡೆದ ಅಕ್ರಮ ಆರೋಪಗಳ ತನಿಖೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಡಿ’ಕುನ್ಹಾ ನೇತೃತ್ವದಲ್ಲಿ ವಿಚಾರಣ ಆಯೋಗ ರಚಿಸಿ ರಾಜ್ಯ ಸರಕಾರ ಶನಿವಾರ ಆದೇಶ ಪ್ರಕಟಿಸಿದೆ.
ಈ ಇಬ್ಬರೂ ನ್ಯಾಯಮೂರ್ತಿಗಳು ವಿಚಾರಣೆ ಪ್ರಕ್ರಿಯೆ ಆರಂಭಿಸಿದರೆ ಯಾರೆಲ್ಲಾ ಇದರಲ್ಲಿ ಸಿಲುಕುತ್ತಾರೆ.ನ್ಯಾಯಾಂಗ ಆಯೋಗದ ವರದಿಯ ಯಾವ ಅಂಶವನ್ನು ಸರ್ಕಾರ ಅನುಷ್ಠಾನಕ್ಕೆ ತರಲಿದೆ ಎಂಬ ಚರ್ಚೆಗಳು ಈಗಾಗಲೇ ಆರಂಭವಾಗಿವೆ. ಇಂತಹ ತನಿಖೆಯ ಭೀತಿಗೆ ಸಿಲುಕಿರುವ ಬಿಜೆಪಿಯ ಹಲವಾರು ನಾಯಕರು ಕಾಂಗ್ರೆಸ್ ನ ಘರ್ ವಾಪ್ಸಿ ಕರೆಯ ಹೆಸರಲ್ಲಿ ಕೈ ಪಾಳಯಕ್ಕೆ ಜಿಗಿಯಲು ಮುಂದಾಗಿದ್ದಾರೆ.
ತಾವುಗಳು ಕಾಂಗ್ರೆಸ್ ಪಕ್ಷ ಸೇರಿದರೆ ತನಿಖೆಯ ಸುಳಿಗೆ ಸಿಲುಕುವದರಿಂದ ಪಾರಾಗಬಹುದು ಎಂಬ ಆಲೋಚನೆಯೊಂದಿಗೆ ಇವರೆಲ್ಲರೂ ಕಾಂಗ್ರೆಸ್ ಸೇರುತ್ತಿದ್ದಾರೆ ಎನ್ನುತ್ತವೆ ಉನ್ನತ ಮೂಲಗಳು.
LATEST KANNADA NEWS