ಬೆಂಗಳೂರು Aug 29 : ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ’ಜನೋತ್ಸವ’ ಕಾರ್ಯಕ್ರಮಕ್ಕೆ ಪ್ತತಿಯಾಗಿ ಬಿಜೆಪಿ ನಿಮ್ಮ ಹತ್ತಿರ ಇದೆಯಾ ಉತ್ತರ ಎಂಬ ಅಭಿಯಾನಕ್ಕೆ ಕಾಂಗ್ರೆಸ್ ಚಾಲನೆ ನೀಡಿದೆ.
ಈ ಸಂಬಂಧ ಕಾಂಗ್ರೆಸ್ ಹೊರತಂದಿರುವ ಕಿರು ಹೊತ್ತಿಗೆ ಬಿಜೆಪಿ ನಿಮ್ಮ ಹತ್ತಿರ ಇದೆಯಾ ಉತ್ತರ ಬಿಡುಗಡೆ ಮಾಡಲಾಯಿತು.
ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಈ ಕಿರು ಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದರು.
ಇದು ಬಿಜೆಪಿ ವಿರುದ್ಧ ನಮ್ಮ ಪಕ್ಷದಿಂದ ನಡೆಯಲಿರುವ ಅಭಿಯಾನ. ವಿಧಾನಸಭೆ ಚುನಾವಣೆಗೆ ಇನ್ನು ಏಳೆಂಟು ತಿಂಗಳು ಮಾತ್ರ ಇದೆ. ಅಲ್ಲಿಯವರೆಗೆ ನಾವು ಇದನ್ನೆ ಕೇಳುತ್ತೇವೆ. ಇದೇ ಪ್ರಶ್ನೆಗಳನ್ನು ಇಟ್ಟುಕೊಂಡು ಜನರ ಮುಂದೆ ಹೋಗುತ್ತೇವೆ. ಬಿಜೆಪಿ ಸರ್ಕಾರದಲ್ಲಿ ಶೇ 30 ಕಮೀಷನ್ ಮಠಗಳಿಗೆ, ಶೇ 40 ಗುತ್ತಿಗೆದಾರರಿಗೆ, ಶೇ 50 ಬಿಜೆಪಿ ಕಾರ್ಯಕರ್ತರಿಗೆ ಇದೆ. ಹೀಗೆ ಕಮಿಷನ್‌ನ್ನು ವಿವಿಧ ಹಂತಗಳಲ್ಲಿ ಮಾಡಿಕೊಂಡಿದ್ದಾರೆ‘ ಎಂದು ದೂರಿದರು.
ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಇದೆ. ಇಡೀ ದೇಶದಲ್ಲೇ ಇದು ಅತ್ಯಂತ ಭ್ರಷ್ಟ ಸರ್ಕಾರ. ಬಿಜೆಪಿ ಸುಳ್ಳು ಹೇಳುವ ಪಕ್ಷ. ಬಿಜೆಪಿ ಅಂದರೆ ಬಿಗ್ ಟ್ರೇಡ್ ಜನತಾ ಪಾರ್ಟಿ. ಬಿಜೆಪಿ ಎಂದರೆ ಬೇಕೂಫ್ ಜನತಾ ಪಾರ್ಟಿ‘ ಎಂದು ಸುರ್ಜೇವಾಲ ವ್ಯಂಗ್ಯವಾಡಿದರು
ನುಡಿದಂತೆ ನಡೆಯಬೇಕು.:
.ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ, ‘ಬಸವಣ್ಣ ಹೇಳಿದ್ದು ನುಡಿದಂತೆ ನಡೆಯಬೇಕೆಂದು. ನಾವು ನುಡಿದಂತೆ ನಡೆದಿದ್ದೇವೆ. ನೀವು ನುಡಿದಂತೆ ನಡೆಯುತ್ತಿದ್ದೀರಾ? ನಾವು ಬಿಜೆಪಿಯವರಿಗೆ ಪ್ರಶ್ನೆ ಕೇಳುತ್ತೇವೆ. ಕೊಟ್ಟ ವಚನ ಈಡೇರಿಸಿದ್ದೀರಾ? ನಿಮ್ಮ ಆತ್ಮಸಾಕ್ಷಿ ಮೂಲಕ ಉತ್ತರ ಕೊಡಿ ಎಂದು ಕೇಳುತ್ತಿದ್ದೇವೆ‘ ಎಂದರು.
‘ನಿಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಈಡೇರಿಸಿದ್ರಾ? ನೀವು ನುಡಿದಂತೆ ನಡೆಯಲಿಲ್ಲ, ವಚನ ಭ್ರಷ್ಟರಾಗಿದ್ದೀರಾ? ನಾವು ಪ್ರತಿದಿನ ಒಂದೊಂದು ಪ್ರಶ್ನೆ ಕೇಳುತ್ತೇವೆ. ರೈತರಿಗೆ ಕೊಟ್ಟ ಮಾತು ಉಳಿಸಿಕೊಂಡ್ರಾ ? ರೈತರ ಆದಾಯ ಡಬಲ್ ಎಂದ ಪ್ರಧಾನಿಯವರು ಎಲ್ಲಿ? ರೈತರಿಗೆ ನೀವು ಸಹಾಯ ಮಾಡಿದ್ರಾ‘ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕೊಟ್ಟ ಮಾತೇನಾಯಿತು.:
ಸಿದ್ದರಾಮಯ್ಯ ಮಾತನಾಡಿ, ‘2013ರಲ್ಲಿ ನಾವು ಪ್ರಣಾಳಿಕೆ ಹೊರಡಿಸಿದ್ದೆವು. ಜನ ಆಗ ನಮಗೆ ಅವಕಾಶ ಕೊಟ್ಟಿದ್ದರು. 122 ಸ್ಥಾನಗಳನ್ನ ನಾವು ಗೆದ್ದು ಬಂದಿದ್ದೆವು. 2018ರಲ್ಲೂ ಪ್ರಣಾಳಿಕೆ ಹೊರಡಿಸಿದ್ದೆವು. ಬಿಜೆಪಿಯವರು ಪ್ರಣಾಳಿಕೆ ಹೊರಡಿಸಿದ್ದರು. ನಾವು ಜನರಿಗೆ 165 ಭರವಸೆ ನೀಡಿದ್ದೆವು. ಅದರಲ್ಲಿ 158 ಭರವಸೆಗಳನ್ನ ಈಡೇರಿಸಿದ್ದೆವು. ಬಿಜೆಪಿಯವರು ಪ್ರಣಾಳಿಕೆಯಲ್ಲಿ 600 ವಚನಗಳನ್ನ ಕೊಟ್ಟಿದ್ದರು. ಅದರಲ್ಲಿ ಎಷ್ಟು ವಚನಗಳನ್ನ ಈಡೇರಿಸಿದ್ದಾರೆ‘ ಎಂದು ಪ್ರಶ್ನಿಸಿದರು.
‘ಕೊಟ್ಟ ಭರವಸೆಗಳಲ್ಲಿ ಶೇ 10ರಷ್ಟೂ ಈಡೇರಿಸಿಲ್ಲ. ಜನರಿಗೆ ಮಾತು ಕೊಟ್ಟ ಮೇಲೆ ಉಳಿಸಿಕೊಳ್ಳಬೇಕಲ್ಲವೇ? ಜನರಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ವಚನಗಳ ವಂಚನೆ ಮಾಡಿದ್ದಾರೆ‘ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಗೆ ಪ್ರಶ್ನೆ:
1.-ಯಾವಾಗ ಕೊಡುವಿರಿ ನಿರಂತರ ವಿದ್ಯುತ್?
2.- ಯಾವಾಗ ಸಿಗುತ್ತದೆ ಬೆಳೆಗಳಿಗೆ ಬೆಂಬಲ ಬೆಲೆ?
3.- ಹೈನುಗಾರಿಕೆಗೆ ₹3 ಸಾವಿರ ಕೋಟಿ ನಿಧಿ ಕೊಟ್ಟಿದ್ದೀರಾ?
4.-ಸ್ವಸಹಾಯ ಸಂಘಗಳಿಗೆ ಮತ್ತು ರೈತಸಂಘಗಳಿಗೆ ಕಡಿಮೆ ಬಡ್ಡಿ ದರದಲ್ಲಿ ನೀಡುವ ಸಾಲದ ಯೋಜನೆ ಏನಾಯಿತು?
5.-ರೈತರಿಗೆ ಕೃಷಿ ಅಧ್ಯಯನದ ಚೀನಾ ಮತ್ತು ಇಸ್ರೇಲ್ ಪ್ರವಾಸ ಯಾವಾಗ?
6.-ಶಿಕ್ಷಣ ಸಂಸ್ಥೆಗಳ 57 ಸಾವಿರ ಅಧ್ಯಾಪಕರ ಖಾಲಿ ಹುದ್ದೆ ಭರ್ತಿ ಯಾವಾಗ?
7.- ಶಾಲಾ-ಕಾಲೇಜುಗಳ ಶುಲ್ಕ ನಿಯಂತ್ರಣ ಪ್ರಾಧಿಕಾರದ ಅನುಷ್ಠಾನವೆಲ್ಲಿ?
8.- ಪದವಿಯವರೆಗಿನ ಉಚಿತ ಶಿಕ್ಷಣ ನೀಡುವುದು ಯಾವಾಗ?
9.- ರಾಜ್ಯದಲ್ಲಿ 70 ಪದವಿ ಕಾಲೇಜುಗಳ ನಿರ್ಮಾಣದ ಭರವಸೆ ಏನಾಯಿತು?
10.- ಕರ್ನಾಟಕ ವಿದ್ಯಾರ್ಥಿವೇತನ ಮತ್ತು ಸಾಲ ಪ್ರಾಧಿಕಾರದ ಸ್ಥಾಪನೆಯ ಭರವಸೆ ಏನಾಯಿತು?
11-ಎಲ್ಲಿ ಕೊಟ್ಟಿದ್ದೀರಾ ₹3000 ಕೋಟಿ ವಿದ್ಯಾರ್ಥಿವೇತನ
12.- ₹15 ಸಾವಿರ ಕೋಟಿ ವಸತಿ ಯೋಜನೆ ಅನುಷ್ಠಾನ ಯಾವಾಗ? ವಾಲ್ಮೀಕಿ ಭವನಗಳ ನಿರ್ಮಾಣ ಎಲ್ಲಾಯಿತು?
13.- ಸರ್ಕಾರಿ ಹುದ್ದೆಗಳಲ್ಲಿ ವಿಶೇಷ ನೇಮಕಾತಿ ಯೋಜನೆ ಏನಾಯಿತು?
14.-ಏನಾಯಿತು ಮಹಿಳೆಯರ ಉಚಿತ ಸ್ಮಾರ್ಟ್ ಫೋನ್ ಯೋಜನೆ?
15.- ಮಹಿಳೆಯರ ರಕ್ಷಣೆಗಾಗಿ ವಿಶೇಷ ತನಿಖಾ ದಳ ರಚನೆಯ ಭರವಸೆ ಏನಾಯಿತು?
16.- ಮಹಿಳಾ ಉದ್ಯಮಿಗಳಿಗೆ ₹ 100 ಕೋಟಿ ನೀಡುವ ಭರವಸೆ ಏನಾಯಿತು?
17.- ಮಹಿಳೆಯರ ಆರ್ಥಿಕ ಸ್ವಾವಲಂಬನೆ ನೀಡುವ ಸ್ತ್ರೀ ಉನ್ನತಿ ಕೇಂದ್ರಗಳು ಎಲ್ಲಿದೆ?
18.- ವಿಶ್ವಗುರು ಬಸವಣ್ಣ, ಕುವೆಂಪು, ಶ್ರೀ ನಾರಾಯಣ ಗುರು ಅವರುಗಳಿಗೆ ಅಪಮಾನವೇಕೆ ಮಾಡಿದಿರಿ?
19.- ಕಸ ಮುಕ್ತ ಬೆಂಗಳೂರಿನ ಭರವಸೆ ಏನಾಯಿತು?
20.- ₹500 ಕೋಟಿಯಲ್ಲಿ ದೇವಸ್ಥಾನ ಹಾಗೂ ಮಠಗಳ ಜೀರ್ಣೋದ್ದಾರ ಯೋಜನೆ ಏನಾಯಿತು?
Previous Articleಕರ್ನಾಟಕ ಕ್ರೀಡಾ ರಾಜ್ಯವಾಗಬೇಕಿದೆ
Next Article ನಂಬಿದ್ದ ಸ್ವಾಮಿ ವಿಕೃತ ಕಾಮಿ ಹೇಗಾದರು..?