ಬೆಂಗಳೂರು,ಫೆ.27-
ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ಕುರಿತು ದಕ್ಷಿಣ ಭಾರತದ ರಾಜ್ಯಗಳಲ್ಲಿ ಉಂಟಾಗಿರುವ ಆತಂಕ ನಿವಾರಣೆಗೊಳಿಸುವ ದೃಷ್ಟಿಯಿಂದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ನೀಡಿರುವ ಹೇಳಿಕೆಯನ್ನು ನಂಬಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕೊಯಮತ್ತೂರಿನಲ್ಲಿ ನಿನ್ನೆ ಅಮಿತ್ ಶಾ ನೀಡಿರುವ ಹೇಳಿಕೆಗೆ ಸುಧೀರ್ಘ ಪತ್ರಿಕಾ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ನಾಯಕರ ಮಾತು ಮತ್ತು ಕರ್ತವ್ಯದಲ್ಲಿ ಎಂದಿಗೂ ಸಾಮ್ಯತೆ ಇರುವುದಿಲ್ಲ ಅವರು ಹೇಳುವುದು ಒಂದು ಮಾಡುವುದು ಮತ್ತೊಂದು ಎಂದಿದ್ದಾರೆ.
ಅಮಿತ್ ಶಾ ಅವರ ಹೇಳಿಕೆಯು ದಕ್ಷಿಣದ ರಾಜ್ಯಗಳಲ್ಲಿ ಗೊಂದಲ ಸೃಷ್ಟಿಸುವ ದುರುದ್ದೇಶದಿಂದ ಕೂಡಿದೆ. ಅವರಿಗೆ ಮಾಹಿತಿಯ ಕೊರತೆ ಇದೆ ಅಥವಾ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಾದ ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಆಂಧ್ರಪ್ರದೇಶಗಳಿಗೆ ಅನ್ಯಾಯ ಮಾಡುವ ದುರುದ್ದೇಶ ಇದೆ ಎಂದು ಅರ್ಥೈಸುತ್ತದೆ ಎಂದು ಹೇಳಿದ್ದಾರೆ.
ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಮಾಡಬಾರದೆಂಬ ಸದುದ್ದೇಶ ಕೇಂದ್ರ ಸರ್ಕಾರ ಹೊಂದಿರುವುದಾಗಿದ್ದರೆ ಕ್ಷೇತ್ರ ಪುನರ್ ವಿಂಗಡನೆಯನ್ನು ಜನಸಂಖ್ಯೆಯ ಅನುಪಾತದ ಆಧಾರದಲ್ಲಿ ಮಾಡಲಾಗುವುದೋ? ಅಥವಾ ಲೋಕಸಭಾ ಸದಸ್ಯರ ಈಗಿನ ಸಂಖ್ಯೆಯ ಅನುಪಾತದಲ್ಲಿ ಮಾಡಲಾಗುವುದೋ? ಎನ್ನುವುದಕ್ಕೆ ಸಚಿವರೇ ಉತ್ತರಿಸಬೇಕು ಎಂದಿದ್ದಾರೆ.
ಕ್ಷೇತ್ರ ಪುನರ್ ವಿಂಗಡನೆಯ ಪರಿಣಾಮಗಳ ಬಗ್ಗೆ ಹಲವಾರು ಅಧ್ಯಯನಗಳು ನಡೆದಿವೆ. ಇವುಗಳ ಪ್ರಕಾರ ಇತ್ತೀಚಿನ ಜನಗಣತಿಯನ್ನು (2021 ಇಲ್ಲವೇ 2031) ಮಾತ್ರ ಆಧರಿಸಿ ಕ್ಷೇತ್ರ ಪುನರ್ ವಿಂಗಡನೆ ನಡೆದರೆ ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 28ರಿಂದ 26ಕ್ಕೆ ಇಳಿಯುವ ಸಾಧ‍್ಯತೆ ಇದೆ. ಉತ್ತರಪ್ರದೇಶದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 80ರಿಂದ 91, ಬಿಹಾರದ ಸಂಖ್ಯೆ 40ರಿಂದ 50, ಮಧ್ಯಪ್ರದೇಶದ ಸಂಖ್ಯೆ 29ರಿಂದ 33ಕ್ಕೆ ಏರಿಕೆಯಾಗಲಿದೆ. ಕ್ಷೇತ್ರ ಪುನರ್ ವಿಂಗಡಣೆಯಿಂದ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಆಗಬಾರದೆಂದರೆ 1971ರ ಜನಗಣತಿಯನ್ನು ಆಧಾರವಾಗಿಟ್ಟುಕೊಳ್ಳಬೇಕು. ಇಲ್ಲವಾದರೆ ಜನಸಂಖ್ಯೆಯ ಮಾನದಂಡವನ್ನು ಕೈಬಿಟ್ಟು ಈಗಿನ ಲೋಕಸಭಾ ಕ್ಷೇತ್ರಗಳ ಸಂಖ್ಯೆಯನ್ನು ಅನುಪಾತಕ್ಕನುಗುಣವಾಗಿ ಹೆಚ್ಚಿಸಬೇಕು ಎಂದಿದ್ದಾರೆ
ಇತ್ತೀಚಿನ ಜನಗಣತಿಯಿಂದ ಪಡೆದ ಜನಸಂಖ್ಯೆಯ ಅನುಪಾತದ ಮೇಲೆ ನಡೆಸಿದರೆ ಜನಸಂಖ್ಯೆಯ ನಿಯಂತ್ರಣ ಮಾಡಿರುವ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳ ಲೋಕಸಭಾ ಕ್ಷೇತ್ರಗಳ ಸಂಖ್ಯೆ ಒಂದೋ ಕಡಿಮೆಯಾಗಲಿದೆ. ಇಲ್ಲದೆ ಇದ್ದರೆ ಉತ್ತರದ ರಾಜ್ಯಗಳ ಕ್ಷೇತ್ರಗಳ ಪ್ರಮಾಣದಲ್ಲಿ ಏರಿಕೆ ಆಗಲಾರದು. ಈ ಎರಡೂ ಬೆಳವಣಿಗಳಿಂದ ದಕ್ಷಿಣದ ರಾಜ್ಯಗಳೇ ನಷ್ಟ ಅನುಭವಿಸಲಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಜನತೆ ಬಿಜೆಪಿಯನ್ನು ಬೆಂಬಲಿಸದೆ ಇದ್ದರೆ ರಾಜ್ಯಕ್ಕೆ ನರೇಂದ್ರ ಮೋದಿ ಅವರ ಆಶೀರ್ವಾದ ಇರುವುದಿಲ್ಲ ಎಂದು ವಿಧಾನಸಭಾ ಚುನಾವಣಾ ಪ್ರಚಾರದ ಕಾಲದಲ್ಲಿ ಜೆ.ಪಿ.ನಡ್ಡಾ ನೀಡಿದ್ದ ಎಚ್ಚರಿಕೆ ನಮ್ಮ ರಾಜ್ಯದ ವಿರುದ್ಧ ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮದಲ್ಲಿ ನಿಜವಾಗುತ್ತಿದೆ. ತೆರಿಗೆ ಹಂಚಿಕೆ, ಜಿಎಸ್‌ಟಿ ಮತ್ತು ಪ್ರಕೃತಿ ವಿಕೋಪ ಪರಿಹಾರದಲ್ಲಿ ಅನ್ಯಾಯ, ರಾಜ್ಯಕ್ಕೆ ಕಂಟಕವಾಗಿರುವ ಹೊಸ ಶಿಕ್ಷಣ ನೀತಿ ಮತ್ತು ಯುಜಿಸಿ ನಿಯಮಾವಳಿಗಳಿಗೆ ತಿದ್ದುಪಡಿಯೂ ಸೇರಿದಂತೆ ಕೇಂದ್ರ ಸರ್ಕಾರದ ಪ್ರತಿಯೊಂದು ಕ್ರಮವೂ ರಾಜ್ಯವನ್ನು ಶಿಕ್ಷಿಸುವ ದುರುದ್ದೇಶದಿಂದ ಕೂಡಿದೆ ಎನ್ನುವುದು ಸ್ಪಷ್ಟವಾಗುತ್ತಿದೆ ಎಂದಿದ್ದಾರೆ.
Previous Articleಇನ್ನು ಮುಂದೆ ಇಡ್ಲಿ ತಯಾರಿಕೆಗೆ ಇದು ಬಳಸುವಂತಿಲ್ಲ
Next Article ಇಂಧನ ಉಳಿತಾಯದತ್ತ ಬೆಸ್ಕಾಂ ಹೆಜ್ಜೆ.