ಪ್ರತಿಯೊಬ್ಬರೂ ತಮ್ಮ ಮದುವೆಯು ತಮ್ಮ ಜೀವನದಲ್ಲಿ ಮರೆಯಲಾಗದ ದಿನಗಳಂತಿರಬೇಕು ಅಂತ ಬಯಸುತ್ತಾರೆ. ಕೆಲವರು ತಮ್ಮ ಮದುವೆಗೆ ಆಗಮಿಸಿದ ಅತಿಥಿಗಳಿಗೆ ಅದ್ದೂರಿ ಪಾರ್ಟಿಗಳನ್ನು ನೀಡುವ ಮೂಲಕ ತಮ್ಮ ವಿವಾಹವನ್ನು ಸ್ಮರಣೀಯವಾಗಿಸಲು ಪ್ರಯತ್ನಿಸುತ್ತಾರೆ. ಆದರೆ ಅಮೆರಿಕದ ದಂಪತಿ ಒಂದು ಹೆಜ್ಜೆ ಮುಂದೆ ಹೋಗಿ ಮದುವೆಯಲ್ಲಿ ಭಾರೀ ಸಾಹಸವೊಂದನ್ನುಗೈದು ನೆಟ್ಟಿಗರನ್ನು ದಿಗ್ಭ್ರಮೆಗೊಳ್ಳುವಂತೆ ಮಾಡಿದ್ದಾರೆ.
ನವವಿವಾಹಿತ ದಂಪತಿ ಗೇಬ್ ಜೆಸ್ಸಾಪ್ ಮತ್ತು ಆಂಬಿರ್ ಬಾಂಬಿರ್ ದಂಪತಿ ತಮ್ಮ ಮದುವೆಯ ಆರತಕ್ಷತೆಯಿಂದ ನಿರ್ಗಮಿಸುವ ವೇಳೆ ಉದ್ದೇಶಪೂರ್ವಕವಾಗಿ ಕ್ಯಾಮೆರಾ ಮುಂದೆ ಬೆಂಕಿ ಹಚ್ಚಿಕೊಂಡು ತಮ್ಮ ಸಾಹಸವನ್ನು ಪ್ರದರ್ಶಿಸಿದ್ದಾರೆ. ಇಬ್ಬರು ವೃತ್ತಿಪರ ಹಾಲಿವುಡ್ ಸೆಟ್ಗಳಲ್ಲಿ ಸ್ಟಂಟ್ ಕಲಾವಿದರಾಗಿ ಕೆಲಸ ಮಾಡಿಕೊಂಡಿದ್ದು ಮದುವೆಗೆ ಬಂದ ಅತಿಥಿಗಳಿಗೂ ಅದನ್ನು ಪ್ರದರ್ಶಿಸಲು ಮುಂದಾಗಿದ್ದಾರೆ.
ಛಾಯಾಗ್ರಾಹಕ ರಸ್ ಪೊವೆಲ್, ಈ ವಿಡಿಯೋ ವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಮತ್ತು ಟಿಕ್ಟಾಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋದಲ್ಲಿ ವಧುವು ಬೆಂಕಿ ಹೊತ್ತಿಕೊಂಡಿರುವ ಪುಷ್ಪಗುಚ್ಚವನ್ನು ಕೈಯಲ್ಲಿ ಹಿಡಿದಿಟ್ಟುಕೊಂಡಿರುವುದನ್ನು ಕಾಣಬಹುದು.
ವಧು ಮತ್ತು ವರನ ಹಿಂಭಾಗದಲ್ಲಿ ಮೊದಲಿಗೆ ಪಟಾಕಿಗಳನ್ನು ಸಿಡಿಸಲಾಗುತ್ತದೆ. ನಂತರ ಇಬ್ಬರೂ ಬೆನ್ನಿಗೆ ಬೆಂಕಿ ಹಚ್ಚಿಕೊಂಡು, ಅತಿಥಿಗಳತ್ತ ಕೈ ಬೀಸುತ್ತಾ, ಓಡಲಾರಂಬಿಸುತ್ತಾರೆ. ಕೊನೆಗೆ ಇಬ್ಬರು ಮಂಡಿಯೂರಿ ಕುಳಿತುಕೊಳ್ಳುತ್ತಾರೆ. ನಂತರ ಇಬ್ಬರು ವ್ಯಕ್ತಿಗಳು ಬೆಂಕಿಯನ್ನು ನಂದಿಸುತ್ತಾರೆ.