ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಅಭಿವೃದ್ದಿ ಹೆಸರಲ್ಲಿ ಲೂಟಿ ಮಾಡಲಾಗುತ್ತಿದೆ ಎಂದು ಆಪಾದಿಸಿರುವ ಮಾಜಿ ಸಿಎಂ ಕುಮಾರಸ್ವಾಮಿವಕಳೆದ 15 ವರ್ಷಗಳಿಂದ ಬೆಂಗಳೂರಿನ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಅನುದಾನದ ಬಗ್ಗೆ ಉನ್ನತ ಮಟ್ಟದ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ದಾಸರಳ್ಳಿ ವಿಧಾನಸಭಾ ವಿಧಾನಸಭಾ ಕ್ಷೇತ್ರದ ನೆಲಗದರನಹಳ್ಳಿ ರಸ್ತೆಯ ರುಕ್ಮಿಣಿ ನಗರ, ಸಿದ್ಧಾರ್ಥ ನಗರ ಕೊಳಗೇರಿ, ಬಸಪ್ಪನ ಕಟ್ಟೆ, ಚಿಕ್ಕಬಾಣಾವರ ಮುಂತಾದ ಮಳೆ ಹಾನಿ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದ ನಂತರ ಅವರು ಮಾಧ್ಯಮಗಳ ಜೊತೆ ಮಾತನಾಡಿದರು.
ಕೆ.ಆರ್.ಪುರ, ಮಹಾಲಕ್ಷ್ಮಿ ಲೇಔಟ್, ರಾಜರಾಜೇಶ್ವರಿ, ಯಶವಂತಪುರ ಸೇರಿದಂತೆ ನಗರದಲ್ಲಿ ಎಷ್ಟು ಹಣ ಲೂಟಿ ಆಗಿದೆ ಎನ್ನುವುದು ನನಗೆ ಗೊತ್ತಿದೆ. ಹಿಟಾಚಿಯಲ್ಲಿ ಹಣವನ್ನು ಬಗೆಯೋದನ್ನು ಸಚಿವರು ನಿಲ್ಲಿಸಲಿ. ಸಚಿವರಾದ ಭೈರತಿ ಬಸವರಾಜ, ಮುನಿರತ್ನ, ಗೋಪಾಲಯ್ಯ, ಸೋಮಶೇಖರ್ ಮಳೆಯಿಂದ ಸಂಕಷ್ಟಕ್ಕೆ ಒಳಗಾದ ಜನರ ಕೆಲಸ ಮಾಡಲಿ ಕಿಡಿಕಾರಿದರು.
ಈ ಸಚಿವರುಗಳ ಕ್ಷೇತ್ರಗಳಿಗೆ ಎಷ್ಟು ಹಣ ಬಿಡುಗಡೆಯಾಗಿದೆ. ಅದನ್ನು ತಿಳಿದುಕೊಳ್ಳುವ ಹಕ್ಕು ಜನರಿಗೆ ಇದೆ. ಯಾವುದಕ್ಕೆ ಎಷ್ಟು ಹಣ ಖರ್ಚಾಗಿದೆ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಮಳೆಯಿಂದ ನಷ್ಟ ಆಗಿರುವವರಿಗೆ ಸರ್ಕಾರ ಸರಿಯಾದ ಪರಿಹಾರ ಕೊಡಬೇಕು. ತೋರಿಕೆ ಗೆ ಅಷ್ಟೋ ಇಷ್ಟೋ ಕೊಟ್ಟು ಸುಮ್ಮನಾಗಬಾರದು. ನಷ್ಟ ಆಗಿರುವ ಶೇ. 75 ದರಷ್ಟು ಪರಿಹಾರ ಕೊಡಬೇಕು. ಅದರಲ್ಲೂ ಅಧಿಕಾರಿಗಳು ಮತ್ತೆ ದುಡ್ಡು ಹೊಡೆಯಲು ನೋಡುತ್ತಾರೆ. ಹಾಗಾಗದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದರು. ಮುಖ್ಯಮಂತ್ರಿ ಅವರೇ ಮಂತ್ರಿಗಳ ಕ್ಷೇತ್ರಕ್ಕೆ ಹೋಗಬೇಡಿ. ಜನರು ಸಮಸ್ಯೆ ಪಡುತ್ತಿರುವ ಕ್ಷೇತ್ರಕ್ಕೆ ಹೋಗಿ. ಏಳು ಮಂದಿ ವಲಸೆ ಸಚಿವರು ಏನು ಮಾಡ್ತಿದ್ದಾರೆ. ಆ ಸಚಿವರ ಕ್ಷೇತ್ರಕ್ಕೆ ಯಾಕೆ ಹೋಗ್ತೀರಾ.1200 ಕೋಟಿ ಬಿಡುಗಡೆ ಮಾಡಿದ್ದೇನೆ ಅಂತ ಸಿಎಂ ಹೇಳ್ತಾರೆ. ಹಾಗಾದರೆ ಅ ಹಣ ಏನು ಆಯಿತು ಎಂದು ಪ್ರಶ್ನಿಸಿದರು.
ಚಂಬಲ್ ಕಣಿವೆಗೆ ದರೋಡೆ ಮಾಡುವವರನ್ನು ನೋಡುವುದಕ್ಕೆ ಹೋಗುವುದು ಬೇಡ. ಇಲ್ಲೇ ಚಂಬಲ್ ಕಣಿಕೆ ದರೋಡೆಕೋರರು ಇದ್ದಾರೆ. ಜನರ ಹಣ ಲೂಟಿ ಮಾಡಬೇಡಿ. ಲೂಟಿ ಮಾಡಿದ್ದು ಸಾಕು. ಎರಡು ಹೊತ್ತು ಊಟಕ್ಕೆ ಯಾಕೆ ಇಷ್ಟು ಮಾಡ್ತೀರಾ? ಎಂದು ಸಚಿವರ ವಿರುದ್ಧ ಟೀಕಾ ಪ್ರಹಾರ ನಡೆಸಿದರು.