ಬೆಂಗಳೂರು,ಫೆ.4-
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಾಜ್ಯಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಸಂಚಾರ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ.
ಮುಖ್ಯವಾಗಿ ಬೆಂಗಳೂರು – ತುಮಕೂರು ರಸ್ತೆಯಲ್ಲಿ ವಾಹನ ಸಂಚಾರ ವ್ಯವಸ್ಥೆಯಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ.
ಫೆಬ್ರವರಿ 5, 6, 7ರಂದು ಬೆಂಗಳೂರು ನಗರದೊಳಗೆ ಎಲ್ಲಾ ರೀತಿಯ ಲಘು, ಮಧ್ಯಮ ಹಾಗೂ ಭಾರಿ ಸರಕು ಸಾಗಣೆ ವಾಹನಗಳಿಗೆ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ ತನಕ ಸಂಚಾರ ನಿರ್ಬಂಧವಿದೆ.
ತುಮಕೂರು ರಸ್ತೆಯಿಂದ ಬೆಂಗಳೂರು ನಗರದೊಳಗೆ ಸರಕು ಸಾಗಣೆ ವಾಹನಗಳ ನಿರ್ಬಂಧ, ಮೈಸೂರು ರಸ್ತೆಯಿಂದ ನಾಯಂಡಹಳ್ಳಿ ಮತ್ತು ಸೋಮನಹಳ್ಳಿಯವರೆಗೆ, ಬಳ್ಳಾರಿ ರಸ್ತೆಯಿಂದ ಬೆಂಗಳೂರು ನಗರದೊಳಗೆ, ಹೊಸಕೋಟೆ ರಸ್ತೆಯಿಂದ ಹೆಬ್ಬಾಳವರೆಗೆ ನಿರ್ಬಂಧಿಸಲಾಗಿದೆ. ಮೂರು ದಿನ ಭಾರಿ ಸರಕು ಸಾಗಣೆ ವಾಹನಗಳಿಗೆ ಬದಲಿ ಮಾರ್ಗದ ವ್ಯವಸ್ಥೆ ಕಲ್ಪಿಸಲಾಗಿದ್ದು, ತುಮಕೂರು ಕಡೆಯಿಂದ ಬಳ್ಳಾರಿ ರಸ್ತೆ, ಹೈದರಾಬಾದ್ ಕಡೆಗೆ ಸಂಚರಿಸುವ ವಾಹನಗಳು ಡಾಬಸ್ ಪೇಟೆಯಲ್ಲಿ ಎಡ ತಿರುವು ಪಡೆದು ದೊಡ್ಡಬಳ್ಳಾಪುರ ಕಡೆ ಸಂಚರಿಸಬೇಕು.
ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಸಂಚರಿಸುವ ವಾಹನಗಳು ಸೊಂಡೆಕೊಪ್ಪ ಕ್ರಾಸ್ ನಲ್ಲಿ ಬಲ ತಿರುವು ಪಡೆದು, ತಾವರೆಕೆರೆ ಮುಖಾಂತರ ಮಾಗಡಿ ರಸ್ತೆಗೆ ಸಂಪರ್ಕ ಪಡೆದು, ಆ ಮೂಲಕ ನೈಸ್ ರಸ್ತೆ ತಲುಪಿ ಮೈಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಹೊಸೂರು ಕಡೆ ಸಂಚರಿಸಬೇಕು.
ಬಳ್ಳಾರಿ ರಸ್ತೆ ಕಡೆಯಿಂದ ತುಮಕೂರು ರಸ್ತೆ ಕಡೆಗೆ ಸಂಚರಿಸುವ ವಾಹನಗಳು ದೇವನಹಳ್ಳಿ ಬಲ ತಿರುವು ಪಡೆದು ದೊಡ್ಡಬಳ್ಳಾಪುರ ರಸ್ತೆಯ ಮೂಲಕ ತುಮಕೂರು ಕಡೆಗೆ ಸಂಪರ್ಕ ಪಡೆಯುವುದು. ಹೊಸಕೋಟೆಯಿಂದ ತುಮಕೂರು ಕಡೆಗೆ ಸಂಚರಿಸುವ ವಾಹನಗಳು ಬೂದಿಗೆರೆ ಕ್ರಾಸ್ ಮುಖಾಂತರ ದೇವನಹಳ್ಳಿ, ದೊಡ್ಡಬಳ್ಳಾಪುರ ಮೂಲಕ ಡಾಬಸ್ ಪೇಟೆ ಮೂಲಕ ತುಮಕೂರು ಕಡೆ ಸಂಚರಿಸಬಹುದಾಗಿದೆ.