ಚಾಮರಾಜನಗರ: ವಾಯುಭಾರ ಕುಸಿತ ಹಾಗೂ ಪೂರ್ವ ಮುಂಗಾರು ಚುರುಕುಗೊಂಡಿರುವುದು, ಕಾವೇರಿ ನದಿ ಪಾತ್ರದಲ್ಲಿ ಹೊರ ಹರಿವಿನಿಂದಾಗಿ ಹನೂರು ತಾಲೂಕಿನ ಹೊಗೆನೆಕಲ್ ಜಲಾಪಾತ ಭೋರ್ಗರೆದು ಹರಿಯುತ್ತಿದೆ.30 ಸಾವಿರ ಕ್ಯೂಸೆಕ್ ನೀರಿನ ಹರಿವಿರುವುದರಿಂದ ಭಾರೀ ವೇಗದಲ್ಲಿ ನೀರು ಹರಿವಿದ್ದು ನೋಡುಗರಿಗೆ ರುದ್ರ ರಮಣೀಯ ದೃಶ್ಯ ಕಟ್ಟಿಕೊಡುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ತಮಿಳುನಾಡು ಭಾಗ ಹಾಗು ನಮ್ಮ ರಾಜ್ಯದ ಕಡೆ ತೆಪ್ಪ ಸವಾರಿಗೆ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ.ಇನ್ನು, ಜಮ್ಮಕಪಟ್ಟಿ, ಆಲಂಬಾಂಡಿ ಮಾರಿಕೋಟೈ, ಗೋಫಿನಾಥಂ, ಆತೂರು, ಕೋಟೊಯೂರು ಗ್ರಾಮಗಳ ಜನರು ನದಿ ದಡಕ್ಕೆ ಹೋಗದಂತೆ ಹಾಗು ಮಹಿಳೆಯರು, ಮಕ್ಕಳು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚನೆಯನ್ನೂ ನೀಡಿದ್ದಾರೆ.ಕಳೆದ ಎರಡು ವರ್ಷಗಳ ಹಿಂದೆ ಸುರಿದ ಭಾರೀ ಮಳೆಗೆ ಹೊಗೆನಕಲ್ ಜಲಪಾತವೇ ಮುಳುಗಡೆಯಾಗಿತ್ತು ಅದೇ ಪರಿಸ್ಥಿತಿ ಈ ವರ್ಷವೂ ಮುಂದುವರೆಯಬಹುದು ಎಂದು ಸ್ಥಳೀಯರು ಆತಂಕ ಹೊರಹಾಕಿದ್ದಾರೆ.