ಬೆಂಗಳೂರು,ಜ.8-
ನಿಗಧಿತ ಆದಾಯ ಮೂಲ ಮೀರಿ ನೂರಾರು ಪಟ್ಟು ಅಕ್ರಮ ಆಸ್ತಿ-ಪಾಸ್ತಿ ಗಳಿಸಿರುವ ಆರೋಪದಲ್ಲಿ
ಸಾರಿಗೆ ಇಲಾಖೆ ಜಂಟಿ ನಿರ್ದೇಶಕಿ ಸೇರಿದಂತೆ ಎಂಟು ಮಂದಿ ಅಧಿಕಾರಿಗಳಿಗೆ ಲೋಕಾಯುಕ್ತರು ಬೆವರು ಹರಿಸುವಂತೆ ಮಾಡಿದ್ದಾರೆ.
ಈ ಅಧಿಕಾರಿಗಳು ಅಪಾರ ಪ್ರಮಾಣದ ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ಮಾಹಿತಿ ಆಧರಿಸಿ ಬೆಳ್ಳಂಬೆಳಗ್ಗೆ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ -ಪಾಸ್ತಿ ಹಾಗೂ ದಾಖಲೆಗಳನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ.
Bengaluru ಸೇರಿದಂತೆ ರಾಜ್ಯದ ವಿವಿಧೆಡೆ ಈ ದಾಳಿ ನಡೆದಿದೆ.ಬೆಂಗಳೂರಿನಲ್ಲಿರುವ ಸಾರಿಗೆ ಇಲಾಖೆ ಜಂಟಿ ನಿರ್ದೇಶಕಿ ಶೋಭಾ,ಚಿಕ್ಕಮಗಳೂರು ಜಿಲ್ಲೆ ಕಡೂರಿನ ಆಡಳಿತ ವೈದ್ಯಾಧಿಕಾರಿ ಡಾ. ಎಸ್ಎನ್ ಉಮೇಶ್, ಬೀದರ್ ಜಿಲ್ಲೆಯ ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ರವೀಂದ್ರ ಬೆಳಗಾವಿ ಜಿಲ್ಲೆಯ ಖಾನಾಪುರದ ತಹಶೀಲ್ದಾರ್ ಪ್ರಕಾಶ್ ಶ್ರೀಧರ್, ತುಮಕೂರಿನ ನಿವೃತ್ತ ಆರ್ಟಿಒ ಅಧಿಕಾರಿ ಎಸ್.ರಾಜು ಅವರುಗಳ ಕಚೇರಿ ಮನೆಗಳ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.
ಗದಗ-ಬೆಟಗೇರಿ ನಗರಸಭೆಯ ಕಾರ್ಯನಿರ್ವಾಹಕ ಇಂಜಿನಿಯರ್ ಹುಚ್ಚೇಶ್ ಬಂಡಿವಡ್ಡರ್ ಮನೆ, ಕಚೇರಿ, ತೋಟದ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಗದಗ, ಗಜೇಂದ್ರಗಡ, ಬಾಗಲಕೋಟೆ ಸೇರಿದಂತೆ ಐದು ಕಡೆ ದಾಳಿ ನಡೆದಿದೆ. ಬಳ್ಳಾರಿ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮನೆ, ರಾಯಚೂರು ಜಿಲ್ಲೆಯ ಬೆಸ್ಕಾಂ ಜೆಇ ಹುಲಿರಾಜ್ ಮನೆ ಮೇಲೆಯೂ ದಾಳಿ ನಡೆಸಿ ದಾಖಲೆ ಪತ್ರಗಳನ್ನು ಪರಿಶೀಲನೆ ಕೈಗೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರ ತಹಶೀಲ್ದಾರ್ ಪ್ರಕಾಶ್ ಗಾಯಕವಾಡ ಮನೆ ಮೇಲೆಯೂ ಲೋಕಾಯುಕ್ತ ದಾಳಿ ನಡೆದಿದೆ. ಬೆಳಗಾವಿ ನಗರದ ಲಕ್ಷ್ಮೀಟೆಕ್ನಲ್ಲಿರುವ ಪ್ರಕಾಶ್ ನಿವಾಸ, ತಹಶೀಲ್ದಾರ್ ಕಚೇರಿ, ನಿಪ್ಪಾಣಿಯ ನಿವಾಸ ಸೇರಿ 6 ಕಡೆ ದಾಳಿ ನಡೆದಿದೆ.
ನಿವೃತ್ತ ಅಧಿಕಾರಿಗೂ ಬಿಸಿ:
ಅಕ್ರಮ ಆಸ್ತಿ ಸಂಪಾದನೆ ಆರೋಪ ಹಿನ್ನೆಲೆ
ತುಮಕೂರು ಆರ್ಟಿಒದಲ್ಲಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಎಸ್ ರಾಜು ಮನೆ ಮೇಲೆ ದಾಳಿ ನಡೆದಿದೆ. ಎಸ್ ರಾಜು ಕಳೆದ ವರ್ಷ ನಿವೃತ್ತಿ ಹೊಂದಿದ್ದರು.
ಬಲೆಗೆ ಬಿದ್ದಿರುವ 8 ಮಂದಿ ಭ್ರಷ್ಟ ಅಧಿಕಾರಿಗಳು ಆದಾಯ ಮೀರಿ ನೂರಾರು ಪಟ್ಟು ಅಕ್ರಮ ಆಸ್ತಿ ಪಾಸ್ತಿಗಳಿಸಿರುವುದು ದಾಳಿಯಲ್ಲಿ ಪತ್ತೆಯಾಗಿದೆ,
ಅಧಿಕಾರಿಗಳಿಂದ ವಶಕ್ಕೆ ತೆಗೆದುಕೊಂಡಿರುವ ನಗದು, ಚಿನ್ನ,ಬೆಳ್ಳಿ,ಐಷಾರಾಮಿ ವಸ್ತುಗಳು, ಆಸ್ತಿಪಾಸ್ತಿಗಳ ದಾಖಲೆ ಪತ್ರಗಳನ್ನು ಪರಿಶೀಲನೆ ಕೈಗೊಳ್ಳಲಾಗಿದ್ದು ಅವುಗಳ ಒಟ್ಟಾರೆ ಮೌಲ್ಯ ಸಂಜೆ ವೇಳೆಗೆ ಲಭ್ಯವಾಗಲಿದೆ ಎಂದು ಲೋಕಾಯುಕ್ತ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.