ಬೆಂಗಳೂರು,ಫೆ. 24:
ಮಗ್ಗಿ ಹೇಳಲು ಬಾರದ ರಾಜ್ಯದ ಬಿಜೆಪಿ ನಾಯಕರೆಲ್ಲಾ ಈಗ ಅರ್ಥಶಾಸ್ತ್ರದ ಪ್ರಖಂಡ ಪಂಡಿತರಂತೆ ರಾಜ್ಯದ ಹಣಕಾಸು ಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮಂತ್ರಿ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸುಧೀರ್ಘ ಹೇಳಿಕೆ ಪೋಸ್ಟ್ ಮಾಡಿರುವ ಅವರು
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತಿದೆ ಎನ್ನುವ ಬಿಜೆಪಿ ನಾಯಕರಿಗೆ ತಮ್ಮ ಆಡಳಿತದಲ್ಲಿ ರಾಜ್ಯವನ್ನು ದುಸ್ಥಿತಿಗೆ ತಳ್ಳಿದ್ದನ್ನು ಮರೆತುಬಿಟ್ಟಿದ್ದಾರೆ ಎನಿಸುತ್ತದೆ ಎಂದು ಟೀಕಿಸಿದ್ದಾರೆ.
ರಾಜ್ಯ ಸರ್ಕಾರ ಮತ್ತು ರಾಜ್ಯದ ಹಣಕಾಸು ಪರಿಸ್ಥಿತಿಯ ಬಗ್ಗೆ ಮಾತನಾಡುತ್ತಿರುವ ಬಿಜೆಪಿ ನಾಯಕರು ಎಂದಾದರೂ ಕೇಂದ್ರ ಸರ್ಕಾರದ ಅನ್ಯಾಯದ ಬಗ್ಗೆ ತುಟಿ ಬಿಚ್ಚಿದ್ದಾರೆಯೇ? ಕರ್ನಾಟಕದ ಹಿತ ಕಾಯುವ ಸಣ್ಣ ಕೆಲಸವನ್ನಾದರೂ ಮಾಡಿದ್ದಾರೆಯೇ? ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿಸಿದ್ದ ಅನುದಾನ ಬಾರದಿರುವ ಬಗ್ಗೆ ಒಮ್ಮೆಯಾದರೂ ಪ್ರಶ್ನಿಸಿದ್ದಾರೆಯೇ? ತೆರಿಗೆ ಪಾಲಿನ ಅನ್ಯಾಯ, 15 ಹಣಕಾಸು ಆಯೋಗದ ಅನುದಾನದಲ್ಲಿನ ಅನ್ಯಾಯ, ಪ್ರಕೃತಿ ವಿಕೋಪ ಪರಿಹಾರಗಳಲ್ಲಿನ ಅನ್ಯಾಯಗಳ ಬಗ್ಗೆ ಮಾತಾಡಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
ಹಿಂದೆ ನೆರೆ ಪರಿಹಾರದ ಬಗ್ಗೆ ವೇದಿಕೆ ಮೇಲೆ ಬಹಿರಂಗವಾಗಿಯೇ ಯಡಿಯೂರಪ್ಪ ಅವರು ಪ್ರಧಾನಿ ಮೋದಿ ಅವರ ಅನ್ಯಾಯವನ್ನು ಜಗಜ್ಜಾಹೀರು ಮಾಡಿದ್ದರು, ಹಣಕಾಸು ಆಯೋಗದ ಅನ್ಯಾಯವನ್ನು ಸದನದಲ್ಲಿ ಬೊಮ್ಮಾಯಿಯವರು ಒಪ್ಪಿಕೊಂಡಿದ್ದರು, ಇದು ಬಿಜೆಪಿಗರಿಗೆ ನಾಚಿಕೆಗೇಡಿನ ವಿಷಯ ಎನಿಸಲಿಲ್ಲವೇ ಎಂದು ಕೇಳಿದ್ದಾರೆ.
ತಮ್ಮ ಆಡಳಿತದ ಅವಧಿಯಲ್ಲಿ ಯಾವುದೇ ಜನಕಲ್ಯಾಣ ಯೋಜನೆಗಳನ್ನು ನೀಡದೆ, ಯಾವುದೇ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳದೆ ಹಣಕಾಸು ವ್ಯವಸ್ಥೆಯನ್ನು ಹದಗೆಡಿಸಿದ್ದು ಹೇಗೆ ಎನ್ನುವುದನ್ನು ಉತ್ತರ ನೀಡಲಿ. ಹಿಂದಿನ ಬಿಜೆಪಿಯ ಗಾಂಪರ ಸರ್ಕಾರ ಮಾಡಿದ ಹಣಕಾಸಿನ ಅವ್ಯವಸ್ಥೆಯನ್ನು, ಅವಾಂತರವನ್ನು ನಮ್ಮ ಸರ್ಕಾರ ಸರಿ ದಾರಿಗೆ ತರುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.