ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವಾಗಲೆಲ್ಲಾ ವಿವಿಧ ಜಾತಿಯ ಮಠಗಳಿಗೆ ಭರಪೂರ ಕೊಡುಗೆ ನೀಡಿ ಮಠಾಧೀಶರ ಒಲೈಕೆಗೆ ಯತ್ನಿಸುವುದು ವಾಡಿಕೆ. ಪ್ರತಿ ವರ್ಷ ಬಜೆಟ್ ನಲ್ಲಿ ಮಠಗಳಿಗೆ ಅನುದಾನ ಪ್ರಕಟಿಸುವ ಪರಂಪರೆಗೆ ಮಾಜಿ ಸಿಎಂ ಯಡಿಯೂರಪ್ಪ ನಾಂದಿ ಹಾಡಿದ್ದರು.
ಹಾಗೆಂದ ಮಾತ್ರಕ್ಕೆ ಯಡಿಯೂರಪ್ಪ ಮಾತ್ರ ಮಠ-ಮಾನ್ಯಗಳಿಗೆ ಅನುದಾನ ನೀಡಿದವರಲ್ಲ. ಸಿದ್ದರಾಮಯ್ಯ ಸೇರಿದಂತೆ ಎಲ್ಲಾ ಸಿಎಂ ಗಳು ನೀಡಿದ್ದಾರೆ ಆದರೆ ಇವರೆಲ್ಲಾ ನಿರ್ದಿಷ್ಟ ಮಾನದಂಡ ಅನುಸರಿಸಿ ಅನುದಾನ ಬಿಡುಗಡೆ ಮಾಡುತ್ತಿದ್ದರು. ಯಡಿಯೂರಪ್ಪ ಮಾತ್ರ ಇಂತಹ ನಿಯಮಗಳ ಗೋಜಿಗೆ ಹೋಗದೆ ಜಾತಿವಾರು ಅನುದಾನ ಬಿಡುಗಡೆ ಮಾಡಿದರು.
ನಂತರದ ಎಲ್ಲಾ ಬಿಜೆಪಿ ಸಿಎಂ ಗಳು ಇದನ್ನೇ ಪಾಲಿಸಿದರು. ಆದರೆ, ಬಸವರಾಜ ಬೊಮ್ಮಾಯಿ ಮಾತ್ರ ಇದಕ್ಕೆ ಅಪವಾದ ಎಂದು ಹೇಳಲಾಗಿತ್ತು. ಯಾಕೆಂದರೆ ತಮ್ಮ ಬಜೆಟ್ ನಲ್ಲಿ ಇಂತಹ ಅನುದಾನ ನೀಡಿರಲಿಲ್ಲ ಇದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಇದೆಲ್ಲಾ ಕೆಲವು ದಿನಗಳು ಮಾತ್ರ .ಇದೀಗ ಇವರು ಕೂಡಾ ಯಡಿಯೂರಪ್ಪ ಹಾದಿ ಹಿಡಿದಿದ್ದಾರೆ.
ಬಜೆಟ್ ಎಲ್ಲಾ ಮುಗಿದ ನಂತರ ವಿಶೇಷ ಪ್ರಕರಣವೆಂದು ಹೇಳಿ ಅನುದಾನ ಬಿಡುಗಡೆ ಮಾಡಿದ್ದಾರೆ.ಅದು ಅಷ್ಟಿಷ್ಟಲ್ಲ ಬರೋಬ್ಬರಿ 119 ಕೋಟಿ ರೂಪಾಯಿ ಹಿಂದುಳಿದ ,ದಲಿತ ಸಮಾಜದ ವಿವಿಧ ಮಠಗಳ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ರಾಜ್ಯದ 65 ಮಠಗಳ ಶಿಕ್ಷಣ ಸಂಸ್ಥೆಗಳಿಗೆ ಒಟ್ಟು 119 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಅದೇಶ ಹೊರಡಿಸಲಾಗಿದೆ. ಕಾಗಿನೆಲೆ ಮಹಾಸಂಸ್ಥಾನ, ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಮಹಾಸಂಸ್ಥಾನ ಮಠ, ಶಿವಶರಣ ಶ್ರೀ ಮಾದಾರ ಚನ್ನಯ್ಯ ಗುರುಪೀಠ, ಜಗದ್ಗುರು ಅಖಿಲ ಕುಂಚಿಟಿಗ ಮಹಾಸಂಸ್ಥಾನ ಮಠ, ವಾಲ್ಮೀಕಿ ಗುರುಪೀಠಗಳಿಗೆ ತಲಾ 5 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಮಾಚಿದೇವ ಮಹಾಸಂಸ್ಥಾನ ಮಠ, ಯಾದವ ಮಹಾಸಂಸ್ಥಾನ ಮಠ, ಹಡಪದ ಅಪ್ಪಣ್ಣ ಗುರುಪೀಠ, ಕುಂಬಾರ ಗುರುಪೀಠ, ಶ್ರೀ ನಾರಾಯಣ ಗುರು ಮಹಾಸಂಸ್ಥಾನ, ಶ್ರೀ ಮಹಾಲಕ್ಷ್ಮಿ ತಿಗಳರ ಮಹಾಸಂಸ್ಥಾನ ಟ್ರಸ್ಟ್, ಭಗವದ್ ರಾಮಾನುಜ ಟ್ರಸ್ಟ್, ನಿಕೇತನ ಎಜುಕೇಷನ್ ಟ್ರಸ್ಟ್, ಆನಂದಮಯ ಟ್ರಸ್ಟ್‌ಗೆ ತಲಾ 3 ಕೋಟಿ ರೂ. ನೀಡಲಾಗಿದೆ.
ಕಾಗಿನೆಲೆ ಮಹಾಸಂಸ್ಥಾನದ ಶಾಖಾಮಠ, ವನಶ್ರೀ ಜಯದೇವ ಟ್ರಸ್ಟ್, ಛಲವಾದಿ ಗುರುಪೀಠ, ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠ, ಮೇದಾರ ಕೇತೇಶ್ವರ ಮಠ, ಎಸ್.ಜೆ.ಎಸ್.ಮಹಾಸಂಸ್ಥಾನ, ಮುದ್ಗರ ಟ್ರಸ್ಟ್, ಶಿವಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿ ಟ್ರಸ್ಟ್, ಹೇಮವೇಮ ಸದ್ದಾವನ ಪೀಠಕ್ಕೆ ತಲಾ 2 ಕೋಟಿ ರೂ. ಅನುದಾನ ಒದಗಿಸಲಾಗಿದೆ.
ಜಗದ್ಗುರು ಗುರುಸಿದ್ದೇಶ್ವರ ಬೃಹನ್ಮಠ, ಬೃಂಗೇಶ್ವರ ಮಠ, ಸಿದ್ದಶ್ರೀ ಸಂಸ್ಥೆ, ಸವಿತಾ ಪೀಠ, ಸರೂರ ಮಹಾಸಂಸ್ಥಾನ ಶ್ರೀ ಜಗದ್ಗುರು ರೇವಣಸಿದ್ದೇಶ್ವರ ಗುರುಪೀಠ ಟ್ರಸ್ಟ್, ಅಮೋಘ ಸಿದ್ದೇಶ್ವರ ಮಠ ಟ್ರಸ್ಟ್, ಗುರು ಸೋಮೇಶ್ವರ ಪ್ರತಿಷ್ಠಾನ, ಅದಿಶಕ್ತಿ ಮಹಾಸಂಸ್ಥಾನ ಮಠ, ಮಹಿಳಾ ಮಠಾಧೀಶರ ಸಂಸತ್, ಜಗದ್ಗುರು ಗೌಳಿ ಗುರುಪೀಠ ಮಹಾಸಂಸ್ಥಾನ ಮಠ, ಸದ್ಗುರು ಪರಮಹಂಸ ವಿದ್ಯಾವರೇಣ್ಯ ಯೋಗೇಶ್ವರ ಪಾರಮಾರ್ಥ ವಿಶ್ವಸ್ಥ ಧಾರ್ಮಿಕ ಟ್ರಸ್ಟ್ ಸೇರಿದಂತೆ ಇತರೆ ಮಠಗಳ ಶಿಕ್ಷಣ ಸಂಸ್ಥೆಗಳಿಗೆ ತಲಾ ಒಂದು ಕೋಟಿ ರೂ. ನೀಡಿ ಸರ್ಕಾರ ಆದೇಶಿಸಿದೆ.