ಮಹತ್ವ ಕಳೆದುಕೊಂಡ ಪಾದಯಾತ್ರೆ.
ಬೆಂಗಳೂರು,ಆ.7:
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬೆಂಗಳೂರಿನಿಂದ ಮೈಸೂರಿಗೆ ನಡೆಯುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ಪಾದಯಾತ್ರೆ ತನ್ನ ಮಹತ್ವ ಕಳೆದುಕೊಂಡಿದೆ ಎಂದು ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಪಾದಯಾತ್ರೆಯಲ್ಲಿ ಎರಡು ದಿನದಿಂದ ವೈಯಕ್ತಿಕ ಟೀಕೆ ಹೆಚ್ಚಾಗಿದೆ. ಇದರಿಂದ ಪಾದಯಾತ್ರೆಯಲ್ಲಿ ಕಾರ್ಯಕರ್ತರ ಹುಮ್ಮಸ್ಸು ಕಡಿಮೆಯಾಗುತ್ತಿದೆ ಅನಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನ ಹಂಚಿಕೆ ಆಕ್ರಮ ಮುಂದಿಟ್ಟುಕೊಂಡು ಮುಖ್ಯಮಂತ್ರಿ ರಾಜೀನಾಮೆಗೆ ಒತ್ತಾಯಿಸಿ ಆರಂಭಗೊಂಡಿದ್ದ ಈ ಪಾದಯಾತ್ರೆ ದೇಶದ ಗಮನ ಸೆಳೆದಿತ್ತು ಆದರೆ ಪಾದಯಾತ್ರೆ ಇದೀಗ ವಿಷಯಾಂತರಗೊಳ್ಳುವ ಮೂಲಕ ಮಹತ್ವ ಕಳೆದುಕೊಂಡಂತಾಗಿದೆ ಎಂದು ಹೇಳಿದರು.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ಕುಮಾರಸ್ವಾಮಿ ನಡುವಿನ ವೈಯಕ್ತಿಕ ವಿಷಯ ಈ ಪಾದಯಾತ್ರೆಯಲ್ಲಿ ದೊಡ್ಡ ಪ್ರಮಾಣದ ಸುದ್ದಿಯಾಗುವ ಮೂಲಕ ಇಡೀ ಹೋರಾಟದ ಸ್ವರೂಪವೇ ಬದಲಾಗಿದೆ ಇದು ಕಾರ್ಯಕರ್ತರಲ್ಲೂ ಬೇಸರಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.
ಬಿಜೆಪಿ ನಾಯಕರು ಮುಖ್ಯಮಂತ್ರಿ ರಾಜೀನಾಮೆ ಒತ್ತಾಯಿಸಿ ಈ ಪಾದಯಾತ್ರೆ ಮಾಡುತ್ತಿರುವುದಾಗಿ ಘೋಷಿಸಿದರು ಆದರೆ ಪಾದಯಾತ್ರೆ ಸಾಗುತ್ತಿದ್ದಂತೆ ಇದು ಶಿವಕುಮಾರ್ ವಿರುದ್ಧ ಆರೋಪ ಮತ್ತು ಪ್ರತ್ಯಾರೋಪದ ವೇದಿಕೆಯಾಗಿ ಪರಿವರ್ತನೆ ಯಾಗುವ ಮೂಲಕ ಉದ್ದೇಶವನ್ನೇ ಮರೆತಂತಾಗಿದೆ. ಪಾದಯಾತ್ರೆಯಲ್ಲಿ ವೈಯಕ್ತಿಕ ಟೀಕೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು
ಪಕ್ಷದ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಯಾವುದೇ ವಿಷಯಗಳಿದ್ದರೆ ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚಿಸಬೇಕು ಅದು ಬಿಟ್ಟು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ ಇದು ಕಾರ್ಯಕರ್ತರಿಗೂ ಬೇಸರ ತಂದಿದೆ ಹೈಕಮಾಂಡ್ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.