ಜೀವನ ಶೈಲಿಗೆ ತಕ್ಕಂತೆ ಮನುಷ್ಯನ ಆಹಾರ ಪದ್ಧತಿಗಳು ಬದಲಾಗುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಯಾವ ರೀತಿಯ ಆಹಾರ ಸೇವನೆ ಉತ್ತಮ ಎಂಬ ವಿಚಾರ ಜಾಗತಿಕ ಚರ್ಚೆಗಳಿಗೂ ಗ್ರಾಸವಾಗಿದೆ. ಈ ನಡುವೆ ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯವು ಮಾಂಸಹಾರ ಸೇವನೆಯೂ ಕ್ಯಾನ್ಸರ್ ಉಲ್ಬಗೊಳಿಸುವಲ್ಲಿ ಹೆಚ್ಚಿನ ಪಾತ್ರವಹಿಸುತ್ತದೆ ಎಂಬ ಆತಂಕಕಾರಿ ಸಂಶೋಧನೆಯನ್ನು ಬಹಿರಂಗಪಡಿಸಿದ್ದು, ಈಗ ಮತ್ತೆ ಮಾಂಸಹಾರ ಸೇವನೆ ಉತ್ತಮವೋ ಅಥವ ಸಸ್ಯಹಾರವೋ ಎಂಬ ಚರ್ಚೆಗೆ ಇಂಬು ನೀಡಿದಂತಾಗಿದೆ. ಸಂಶೋಧನೆ ಹೇಳುವುದೇನು? ಯಾವ ಆಹಾರ ಪದ್ಧತಿ ಉತ್ತಮ? ಎಂಬುದರ ವಿವರ ಇಲ್ಲಿದೆ.
ಸಂಶೋಧನೆಯ ಉದ್ದೇಶವೇನು ?
ವರ್ಲ್ಡ್ ಕ್ಯಾನ್ಸರ್ ರಿಸರ್ಚ್ ಫಂಡ್ ಮತ್ತು ಕ್ಯಾನ್ಸರ್ ರಿಸರ್ಚ್ ಬ್ರಿಟನ್‌ನ ಧನ ಸಹಾಯದೊಂದಿಗೆ ನಡೆಸಿದ ಅತಿದೊಡ್ಡ ಸಂಶೋಧನೆ ಇದಾಗಿದ್ದು, ಕರುಳಿನ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಸೇರಿದಂತೆ ಕ್ಯಾನ್ಸರ್‌ಗಳ ಉಲ್ಬಣದಲ್ಲಿ ಮಾಂಸಹಾರ ಹಾಗೂ ಸಸ್ಯಹಾರದ ಪಾತ್ರವನ್ನು ನಿರ್ಣಯಿಸಲು ಆಕ್ಸ್ಫರ್ಡ್ ವಿಶ್ವವಿದ್ಯಾನಿಲಯದ ಕ್ಯಾನ್ಸರ್ ಸಾಂಕ್ರಾಮಿಕ ಘಟಕದ ಸಂಶೋಧಕರು ಈ ಅಧ್ಯಯನ ಕೈಗೆತ್ತಿಕೊಂಡಿದ್ದರು.
ಪ್ರಕ್ರಿಯೆ ಹೇಗಿತ್ತು?
2006 ಮತ್ತು 2010ರ ನಡುವೆ ಯುಕೆ ಬಯೋಬ್ಯಾಂಕ್‌ನಿಂದ ಸಂಗ್ರಹಿಸಿದ 4,27,000 ಕ್ಕೂ ಹೆಚ್ಚು ಬ್ರಿಟಿಷ್ ವಯಸ್ಕರ ದತ್ತಾಂಶವನ್ನು ಸಂಶೋಧನೆ ಆಧರಿಸಿದೆ. ಸಂಶೋಧನೆಗೆ ಒಳಪಡಿಸಿದ ವ್ಯಕ್ತಿಗಳ ನೇಮಕಾತಿ ಸಂದರ್ಭದಲ್ಲಿ ಅವರಿಗೆ ಕ್ಯಾನ್ಸರ್ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಅಲ್ಲದೇ, ಅವರ ಆಹಾರ ಪದ್ಧತಿಗಳಿಗೆ ಅನುಗುಣವಾದ ಪ್ರಶ್ನೆಗಳನ್ನು ಕೇಳಿ ಆ ಆಧಾರದಲ್ಲೇ ಭಾಗವಹಿಸುವವರನ್ನು 4 ವರ್ಗವಾಗಿ ವರ್ಗೀಕರಿಸಲಾಗಿತ್ತು.
ಗುಂಪು 1: ನಿಯಮಿತ ಮಾಂಸ ಸೇವನೆ (ವಾರಕ್ಕೆ ಐದು ಬಾರಿ)
ಗುಂಪು 2: ಕಡಿಮೆ ಪ್ರಮಾಣದ ಮಾಂಸ ಸೇವನೆ (ವಾರಕ್ಕೆ ಐದು ಬಾರಿಗಿಂತ ಕಡಿಮೆ)
ಗುಂಪು 3: ಪೆಸ್ಕಟೇರಿಯನ್ಸ್ (ಮೀನು ಮತ್ತು ಸಸ್ಯ ಆಧಾರಿತ ಆಹಾರ ಸೇವಿಸುವವರು)
ಗುಂಪು 4: ಸಸ್ಯಾಹಾರಿಗಳು (ಮಾಂಸ ಮುಕ್ತ ಆಹಾರ)
ಸಂಶೋಧನೆ ಹೇಳಿದ್ದೇನು?
ಸತತ 11.4 ವರ್ಷಗಳ ಅನುಸರಣೆಯ ಬಳಿಕ 54.961 ಕ್ಯಾನ್ಸರ್ ಪ್ರಕರಣಗಳನ್ನು ಗುರುತಿಸಲಾಗಿದ್ದು ಇದರಲ್ಲಿ 5882 ಕರುಳು ಸಂಬಂಧಿತ ಕ್ಯಾನ್ಸರ್ ಪ್ರಕರಣಗಳು, 7537 ಸ್ತನ ಕ್ಯಾನ್ಸರ್, 9501 ಪ್ರಾಸ್ಟೇಟ್ ಕ್ಯಾನ್ಸರ್‌ಗಳು ಸೇರಿವೆ ಎಂದು ಸಂಶೋಧನೆ ಬಹಿರಂಗಪಡಿಸಿದೆ.
ಯಾರಿಗೆ ಎಷ್ಟು ಅಪಾಯ ?
ನಿಯಮಿತ ಮಾಂಸ ಸೇವನೆ (ವಾರಕ್ಕೆ 5 ಬಾರಿ) ಮಾಡುವವರಿಗೆ ಹೋಲಿಸಿದರೆ ಕಡಿಮೆ ಮಾಂಸ ತಿನ್ನುವವರು, ಮೀನು ತಿನ್ನುವವರು ಮತ್ತು ಸಸ್ಯಾಹಾರಿಗಳಿಗೆ ಕ್ಯಾನ್ಸರ್ ಅಪಾಯ ಕಡಿಮೆ ಇದೆ. ಅಲ್ಲದೇ, ಕಡಿಮೆ ಮಾಂಸ ಸೇವನೆ ಮಾಡುವವರಲ್ಲಿ ಕರುಳು ಸಂಬಂಧ ಕ್ಯಾನ್ಸರ್ ಅಪಾಯವೂ ಕಡಿಮೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಇದಲ್ಲದೇ ಸಸ್ಯಹಾರಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ವರದಿಯಾಗಿರುವುದು ಕಡಿಮೆ ಆದಾಗ್ಯೂ ತೂಕ ಅಥವಾ ಬೊಜ್ಜು ಹೊಂದಿರುವವರು ಸಸ್ಯಹಾರಿಯಾಗಿದ್ದರೂ ಅವರಿಗೆ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ. ಆದಾಗ್ಯೂ ಯಾವುದೇ ವ್ಯಕ್ತಿಯ ದೇಹದ ತೂಕ ಕೂಡ ಕ್ಯಾನ್ಸರ್ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದು ಎಂದು ಹೇಳಲಾಗಿದೆ. ಇನ್ನು ಪುರುಷರಲ್ಲಿ ವರದಿಯಾಗುವ ಪ್ರಾಸ್ಟೇಟ್ ಕ್ಯಾನ್ಸರ್ ಮೀನು ಹಾಗೂ ಸಸ್ಯಹಾರಿಗಳಲ್ಲಿ ಕಡಿಮೆ ವರದಿಯಾಗುತ್ತಿದೆ. ಈ ಕ್ಯಾನ್ಸರ್‌ಗೆ ಆಹಾರ ಪದ್ಧತಿಯ ಜತೆಗೆ ಧೂಮಪಾನದಂತಹ ಇತರ ಅಂಶಗಳು ಕೂಡ ಕಾರಣವಾಗಬಹುದು ಎಂದು ಸಂಶೋಧನೆ ಹೇಳಿದೆ.
ಪರಿಹಾರವೇನು?
•ನಿರ್ದಿಷ್ಟ ಆಹಾರ ಪದ್ಧತಿ, ಕಡಿಮೆ ಮಾಂಸಹಾರ ಸೇವನೆ ಅಥವಾ ಸಸ್ಯಾಹಾರಿ ಆಹಾರವನ್ನು ಅನುಸರಿಸುವುದು, ಕೆಲ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
•ಕೆಂಪು ಮತ್ತು ಸಂಸ್ಕರಿಸಿದ ಮಾಂಸದ ಸೇವನೆಯನ್ನು ಸೀಮಿತಗೊಳಿಸುವುದು ಮತ್ತು ತಾಜಾ ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಬೇಳೆಕಾಳುಗಳಂತಹ ಸಂಪೂರ್ಣ ಆಹಾರವನ್ನು ಹೆಚ್ಚು ಸೇವಿಸುವುದು ಆರೋಗ್ಯಕ್ಕೆ ಪ್ರಯೋಜನಕಾರಿ ಮತ್ತು ರೋಗ ಮುಕ್ತ ಜೀವನವನ್ನು ನಡೆಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ
ಭಾರತೀಯರಲ್ಲಿ ಕ್ಯಾನ್ಸರ್ ಕಡಿಮೆ !
ವಿಶ್ವದಲ್ಲಿ ಭಾರತೀಯರು ಏಕೆ ಕಡಿಮೆ ಮಟ್ಟದ ಕ್ಯಾನ್ಸರ್ ಪ್ರಕರಣಗಳನ್ನು ಹೊಂದಿದ್ದಾರೆಂದು ಪಾಶ್ಚಿಮಾತ್ಯರು ಸಂಶೋಧೀಸಿದ್ದಾರೆ ಮತ್ತು ನಮ್ಮ ಪೂರ್ವಜರು ಸೂಚಿಸಿದ ಮತ್ತು ನಾವು ಸೇವಿಸಿದ ಆಹಾರವೇ ನಮ್ಮ ಆರೋಗ್ಯಕ್ಕೆ ಪ್ರಮುಖ ಕಾರಣ ಎಂದು ಕಂಡುಕೊಂಡಿದ್ದಾರೆ. ಅಲ್ಲದೇ, ಭಾರತದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ಪದಾರ್ಥ ಎನ್ನಲಾಗಿರುವ ಅರಿಶಿಣ ಹೆಚ್ಚು ಪರಿಣಾಮಕಾರಿಯಾಗಿದ್ದು, ಅರಿಶಿಣವನ್ನು ಆಹಾರದಲ್ಲಿ ವ್ಯಾಪಕವಾಗಿ ಬಳಸುವ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಕೂಡ ಕ್ಯಾನ್ಸರ್ ಪ್ರಮಾಣ ಕಡಿಮೆ ಇದೆ ಎಂದು ಜನಸಂಖ್ಯೆ ಆಧರಿತ ದತ್ತಾಂಶ ಬಹಿರಂಗ ಪಡಿಸಿದೆ.