ಪುಣೆ: ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಡೇವಿಡ್ ಮಿಲ್ಲರ್ ಅಬ್ಬರದ ಬ್ಯಾಟಿಂಗ್ ಮುಂದೆ ಚೆನ್ನೈ ಆಟ ನಡೆಯಲಿಲ್ಲ.
ಟಾಟಾ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ರವಿವಾರ ರಾತ್ರಿ ನಡೆದ 29ನೇ ಪಂದ್ಯ ರೋಚಕವಾಗಿತ್ತು. ಗಾಯಾಳು ನಾಯಕ ಹಾರ್ದಿಕ್ ಪಾಂಡ್ಯ ಬದಲಿಗೆ ಗುಜರಾತ್ ಟೈಟಾನ್ಸ್ ತಂಡವನ್ನು ಮುನ್ನಡೆಸಿದ ರಶೀದ್ ಖಾನ್ ಟಾಸ್ ಗೆದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಬ್ಯಾಟ್ ಮಾಡಲು ಆಹ್ವಾನಿಸಿದರು. ಋತುರಾಜ್ ಗಾಯಕ್ವಾಡ್ 73 ರನ್ (48 ಎಸೆತ, 5 ಬೌಂಡರಿ, 5 ಸಿಕ್ಸರ್), ಅಂಬಾಟಿ ರಾಯುಡು 46 ರನ್ (31 ಎಸೆತ, 4 ಬೌಂಡರಿ, 2 ಸಿಕ್ಸರ್) ಹಾಗೂ ಕೊನೆ ಗಳಿಗೆಯಲ್ಲಿ ನಾಯಕ ರವೀಂದ್ರ ಜಡೇಜಾ ಆಜೇಯ 22 (12 ಎಸೆತ, 2 ಸಿಕ್ಸರ್) ಮತ್ತು ಶಿವಂ ದುಬೆ ಆಜೇಯ 19 ರನ್ ನೆರವಿನೊಂದಿಗೆ ಚೆನ್ನೈ 5 ವಿಕೆಟ್ ನಷ್ಟಕ್ಕೆ ಸವಾಲಿನ 169 ರನ್ ಕಲೆಹಾಕಿತು. ಗುಜರಾತ್ ಪರ ಅಲ್ಝಾರಿ ಜೋಸೆಫ್ ಎರಡು, ಮೊಹಮ್ಮದ್ ಶಮಿ ಮತ್ತು ಯಶ್ ದಯಾಳ್ ತಲಾ 1 ವಿಕೆಟ್ ಕಿತ್ತರು.
ಈ ಮೊತ್ತವನ್ನು ಬೆನ್ನಟ್ಟಿದ ಗುಜರಾತ್ ‘ತೀಕ್ಷ್ಣ’ ದಾಳಿಗೆ ತತ್ತರಿಸಿ 12.4 ಓವರ್‌ಗಳಲ್ಲಿ ಕೇವಲ 87 ರನ್‌ಗಳಿಗೆ 5 ವಿಕೆಟ್ ಉದುರಿಸಿಕೊಂಡು ಸಂಕಷ್ಟದಲ್ಲಿತ್ತು. ಪಂದ್ಯಶ್ರೇಷ್ಠ ಡೇವಿಡ್ ಮಿಲ್ಲರ್ ಆಜೇಯ 94 (51 ಎಸೆತ, 8 ಬೌಂಡರಿ, 6 ಸಿಕ್ಸರ್) ಹಾಗೂ ನಾಯಕ ರಶೀದ್ ಖಾನ್ 40 (21 ಎಸೆತ, 2 ಬೌಂಡರಿ, 3 ಸಿಕ್ಸರ್) ಅಬ್ಬರಿಸಿ ಚೆನ್ನೈಗೆ ಮತ್ತೊಂದು ಸೋಲಿನ ಆಘಾತವಿಕ್ಕಿದರು. ಡ್ವೇನ್ ಬ್ರಾವೋ ಕೇವಲ 23 ರನ್ ನೀಡಿ 3 ವಿಕರೆಟ್ ಕಬಳಿಸಿ ಮಿಂಚಿದರು. ಆದರೆ. ಕ್ರಿಸ್ ಜೋರ್ಡಾನ್ 3.5 ಓವರ್‌ಗಳಲ್ಲಿ ಬರೊಬ್ಬರಿ 58 ರನ್ ಬಿಟ್ಟುಕೊಟ್ಟು ಚೆನ್ನೈ ಸೋಲಿಗೆ ಕಾರಣರಾದರು.
ಸೋಮವಾರ ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ಮುಖಾಮುಖಿಯಾಗಲಿವೆ.