ಬೆಂಗಳೂರು, ಜು.5:
ನಿಯಮಾವಳಿ ಉಲ್ಲಂಘಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಪರಿಹಾರ ರೂಪದಲ್ಲಿ 61 ನಿವೇಶನ ನೀಡಿರುವ ಮೈಸೂರು ಅಭಿವೃದ್ಧಿ ಪ್ರಾಧಿಕಾರ(ಮುಡಾ)ದ ಹಗರಣ ತೀವ್ರ ಸ್ವರೂಪ ಪಡೆದುಕೊಳ್ಳತೊಡಗಿದೆ.
ಸಿಎಂ ಸಿದ್ದರಾಮಯ್ಯ ಅವರ ಪತ್ನಿಗೆ ಮಂಜೂರಾಗಿರುವ 35 ಕೋಟಿ ರೂ. ಮೌಲ್ಯದ ನಿವೇಶನಗಳಿಗೆ ಸಂಬಂಧಪಟ್ಟ ಕಡತಗಳನ್ನು ತಿರುಚುವ ಉದ್ದೇಶದಿಂದ ನಗರಾಭಿವೃದ್ಧಿ ಸಚಿವರು ಕಡತಗಳನ್ನು ಬೆಂಗಳೂರಿಗೆ ತಂದಿದ್ದಾರೆ ಎಂದು ವಿಧಾನಸ ಭೆಯ ಪ್ರತಿಪಕ್ಷದ ನಾಯಕ ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
ಆದರೆ ಈ ಎಲ್ಲಾ ಆರೋಪಗಳನ್ನು ನಿರಾಕರಿಸಿರುವ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಮುಡಾದಲ್ಲಿ ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷ ನಾಯಕ ಅಶೋಕ್, ಪ್ರಕರಣವನ್ನು ಮುಚ್ಚಿ ಹಾಕುವ ಉದ್ದೇಶದಿಂದಲೇ ನಗರಾಭಿವೃದ್ಧಿ ಸಚಿವ ಭೈರತಿ ಸಚಿವ ಕಡತಗಳನ್ನು ಬೆಂಗಳೂರಿಗೆ ತಂದಿರುವ ಗುಮಾನಿ ಇದೆ ಎಂದು ಶಂಕೆ ವ್ಯಕ್ತಪಡಿಸಿದರು.
ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣವಾದ 4,000 ಕೋಟಿ ಮೌಲ್ಯದ ಮುಡಾ ಹಗರಣದಲ್ಲಿ ದಿನಕ್ಕೊಂದು ಕರ್ಮಕಾಂಡ ಬಯಲಾಗುತ್ತಿದೆ.ಸರ್ಕಾರ ಈ ಕೂಡಲೇ ಸಂಬಂಧಪಟ್ಟ ಕಡತಗಳನ್ನು ಬಹಿರಂಗ ಮಾಡಿ ಸಾರ್ವಜನಿಕರ ಮುಂದಿಡಬೇಕು ಎಂದು ಆಗ್ರಹಿಸಿದರು.
ಅಕ್ರಮ ನಡೆದಿಲ್ಲ:
ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಸಚಿವ ಬೈರತಿ ಸುರೇಶ್, ಮುಡಾದಲ್ಲಿ ಯಾವ ಹಗರಣ ಇದೆ. ಅದರಲ್ಲಿ ಯಾವ ಹಗರಣವೂ ಇಲ್ಲ. ಮುಖ್ಯಮಂತ್ರಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಯಾರಿಗೆ ನಿವೇಶನ ನೀಡಲಾಗಿದೆ ಎಂಬ ವಿಚಾರದ ಬಗ್ಗೆ ಇಬ್ಬರು ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.ಇದರ ವರದಿ ಬಂದ ನಂತರ ಮುಂದಿನ ಚರ್ಚೆ ಮಾಡಬಹುದು ಎಂದರು.
ತನಿಖೆ ನಡೆಸುತ್ತಿರುವ ಇಬ್ಬರು ಐಎಎಸ್ ಅಧಿಕಾರಿಗಳಿಗೆ ನಾಲ್ಕು ವಾರಗಳ ಕಾಲಾವಕಾಶ ನೀಡಲಾಗಿದೆ.ಅದು ಮುಗಿಯುವವರೆಗೂ ಕಾಯಬೇಕು. ಅದಕ್ಕೂ ಮೊದಲು ಸಿಬಿಐ, ಎಫ್‌ಬಿಐ ತನಿಖೆಗೆ ಕೊಡಿ ಎಂದರೆ ಬಿಜೆಪಿ-ಜೆಡಿಎಸ್‌ನವರು ಹೇಳಿದರೆ, ಸರ್ಕಾರ ಅದನ್ನು ಪಾಲನೆ ಮಾಡಬೇಕೆ. ಸರ್ಕಾರಕ್ಕೆ ತನ್ನದೇ ಆದ ವ್ಯವಸ್ಥೆಯಲ್ಲಿ ಕೆಲಸ ಮಾಡಲಿದೆ ಎಂದರು.
ಮುಡಾದಲ್ಲಿ ಏನಾಗಿದೆ ಎಂದು ಸಿಬಿಐ ತನಿಖೆಗೆ ಒಪ್ಪಿಸಬೇಕು. ಹಗರಣ ನಡೆದಿದ್ದರೆ ತಾನೇ ಸಿಬಿಐಗೆ ವಹಿಸುವುದು. ಏನು ಆಗೇ ಇಲ್ಲ ಎಂದ ಮೇಲೆ ಸಿಬಿಐ ತನಿಖೆ ಯಾಕೆ ಎಂದ ಅವರು, ನಮಲ್ಲಿ ಪೊಲೀಸ್ ಅಧಿಕಾರಿಗಳಿಲ್ಲವೇ, ಬಿಜೆಪಿಯವರು ಎಷ್ಟು ಪ್ರಕರಣಗಳನ್ನು ಸಿಬಿಐಗೆ ಕೊಟ್ಟಿದ್ದರು ಎಂದು ಪ್ರಶ್ನಿಸಿದರು.
ಈ ಪ್ರಕರಣಕ್ಕೂ ಡಿ.ಕೆ.ಶಿವುಕುಮಾರ್ ಅವರಿಗೂ ಸಂಬಂಧ ಇಲ್ಲ. ಅವರು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿದ್ದಾರೆ. ಮೈಸೂರಿನಲ್ಲಿ ಅವರ ಪಾತ್ರ ಇರುವುದಿಲ್ಲ ಎಂದು ಹೇಳಿದರು.