Bengaluru
ಮುಂಬರುವ ವಿಧಾನಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಾ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಆರಂಭಿಸಿರುವ Congress ನಲ್ಲಿ ಸಮಸ್ಯೆ ಎದುರಾಗಿದೆ. ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುವ ತಯಾರಿಯಲ್ಲಿರುವ ವೇಳೆ ಪ್ರಮುಖ ನಾಯಕರು ಅಸಮಾಧಾನಗೊಂಡಿದ್ದು ವರಿಷ್ಠರಿಗೆ ದೊಡ್ಡ ತಲೆನೋವಾಗಿದೆ. ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ, KPCC ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಇತರೆ ನಾಯಕರ ಕಾರ್ಯವೈಖರಿಗೆ ಪ್ರಮುಖ ನಾಯಕರಾದ ಡಾ.ಜಿ ಪರಮೇಶ್ವರ್ ಮತ್ತು ಎಂ.ಬಿ ಪಾಟೀಲ್ ಬೇಸರಗೊಂಡಿದ್ದು, ಪಕ್ಷದ ಪ್ರಚಾರ ವೇಗಕ್ಕೆ ತಡೆಯಾದಂತಾಗಿದೆ.
ಈ ಅಸಮಾಧಾನದ ಬಗ್ಗೆ ಮಾಹಿತಿ ಪಡೆದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರು ಪರಮೇಶ್ವರ್ ಅವರನ್ನು ಭೇಟಿ ಮಾಡಿ ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದಾರೆ. ಇತ್ತೀಚೆಗೆ ಭೇಟಿಯಾದ ಪರಮೇಶ್ವರ್ ಮತ್ತು ಎಂ.ಬಿ.ಪಾಟೀಲ್ ತಾವು ಪ್ರಣಾಳಿಕೆ ಮತ್ತು ಪ್ರಚಾರ ಸಮಿತಿಯ ಅಧ್ಯಕ್ಷರಾಗಿದ್ದರೂ ಯಾವುದೇ ವಿಷಯದಲ್ಲೂ ತಮ್ಮನ್ನು ಪರಿಗಣಿಸಲಾಗುತ್ತಿಲ್ಲ. ಪ್ರಚಾರ ಸಮಿತಿಗೆ ಇಲ್ಲಿಯವರೆಗೆ ಪದಾಧಿಕಾರಿಗಳನ್ನು ನೇಮಕ ಮಾಡಿಲ್ಲ. ಹೀಗಾದರೆ ಕೆಲಸ ಮಾಡುವುದು ಹೇಗೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇದೇ ವೇಳೆ ಪರಮೇಶ್ವರ್ ‘ಪ್ರಣಾಳಿಕೆ ಸಮಿತಿಯ ಅಧ್ಯಕ್ಷ ತಾನಾದರೂ ತಮ್ಮನ್ನು ಸಂಪೂರ್ಣ ನಿರ್ಲ್ಯಕ್ಷ ಮಾಡಿ ತಾವೇ ಪ್ರಮುಖ ಘೋಷಣೆಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಕರಾವಳಿಯ ಪ್ರಜಾಧ್ವನಿ ಯಾತ್ರೆಯಲ್ಲಿ ತಮ್ಮ ಗಮನಕ್ಕೆ ತಾರದೆ ಪ್ರಣಾಳಿಕೆ ವಿಚಾರಗಳನ್ನು ಘೋಷಣೆ ಮಾಡಿದ್ದಾರೆ. ಹಾಗಾದರೆ ನಮ್ಮ ಕೆಲಸ ಏನು?’ ಎಂದು ಹೇಳಿಕೊಂಡಿದ್ದಾರೆ. ಬಳಿಕ ಇಬ್ಬರೂ ನಾಯಕರೂ ಹೈಕಮಾಂಡ್ ಗೆ ಪತ್ರ ಬರೆದು ಸಂಪೂರ್ಣ ವಿದ್ಯಮಾನ ತಿಳಿಸಿದ್ದಾರೆ ಎಂದು ಗೊತ್ತಾಗಿದೆ.
ಈ ಬಗ್ಗೆ ವರಿಷ್ಠರಿಂದ ಮಾಹಿತಿ ಪಡೆದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಪರಮೇಶ್ವರ್ ಮನೆಗೆ ತೆರಳಿ ಉಪಹಾರದ ಜೊತೆಗೆ ಸಂಧಾನ ಮಾಡುವ ಪ್ರಯತ್ನ ಕೂಡಾ ನಡೆಸಿದ್ದಾರೆ. ‘ತಾವು ಪತ್ರ ಮುಖೇನ ವ್ಯಕ್ತಪಡಿಸಿದ ಎಲ್ಲಾ ಅಭಿಪ್ರಾಯಗಳನ್ನು ನಾವು ಗೌರವಿಸುತ್ತೇವೆ. ಇನ್ನು ಮುಂದೆ ಇಂತಹ ಲೋಪಗಳಾಗದಂತೆ ಗಮನ ಹರಿಸುತ್ತೇವೆ. ಅಷ್ಟೇ ಅಲ್ಲ ಮೀಸಲು ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ವೇಳೆ ತಮ್ಮ ಅಭಿಪ್ರಾಯ ಪರಿಗಣಿಸುತ್ತೇವೆ’ ಎಂದು ಸಮಾಧಾನ ಮಾಡಿದರೆಂದು ಗೊತ್ತಾಗಿದೆ.

