ಬೆಂಗಳೂರು,ಜು.17- ಈಗಾಗಲೇ ಸಂಚಾರ ದಟ್ಟಣೆಯಿಂದ ತತ್ತರಿಸಿದ ಬೆಂಗಳೂರಿನ ಪೂರ್ವ ಭಾಗದಲ್ಲಿ ಮುಂದಿನ ಎರಡು ತಿಂಗಳ ಕಾಲ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದ್ದು ಈ ರಸ್ತೆಯಲ್ಲಿ (Old Madras Road) ಸಂಚಾರ ಸೆಪ್ಟೆಂಬರ್ ವರೆಗೆ ಕಡಿಮೆ ಮಾಡಲೇಬೇಕು.
ಯಾಕೆಂದರೆ ಬಯ್ಯಪ್ಪನಹಳ್ಳಿ ಮತ್ತು ಹೊಸೂರು ರೈಲು ನಿಲ್ದಾಣಗಳ ನಡುವಿನ ರೈಲು ಸಂಪರ್ಕದ ಬೆನ್ನಿಗಾನಹಳ್ಳಿ ರೈಲ್ವೆ ಮೇಲ್ಸೇತುವೆ ಹಾಳಾಗಿದ್ದು ಇದರ ದುರಸ್ತಿ ಕಾಮಗಾರಿ ಆರಂಭವಾಗಿದೆ.ಇದರ ಪರಿಣಾಮ ಬೆನ್ನಿಗಾನಹಳ್ಳಿ- ಕೆಆರ್ ಪುರಂ ಮಾರ್ಗದಲ್ಲಿ ಆಗಸ್ಟ್ ವರೆಗೆ ಸಂಚಾರ ದಟ್ಟಣೆ ಹೆಚ್ಚಾಗಲಿದೆ.
ಕೆಆರ್ ಪುರಂ, ಮಹದೇವಪುರ, ಮಾರತ್ ಹಳ್ಳಿ ನಡುವಣ ಪ್ರತಿನಿತ್ಯ ಸಂಚರಿಸುವ ಜನರು ಮುಂದಿನ ದಿನಗಳಲ್ಲಿ ತೊಂದರೆ ಅನುಭವಿಸುವ ಸಾಧ್ಯತೆಯಿದ್ದು,ಇದರಿಂದ ಪ್ರಯಾಣಿಕರು ಕಸ್ತೂರಿನಗರದಿಂದ ಬಯಪ್ಪನಹಳ್ಳಿ ಮೆಟ್ರೊ ನಿಲ್ದಾಣದ ಕಡೆಗೆ ಎಡ ತಿರುವು ಪಡೆದು ಹೊರವರ್ತುಲ ರಸ್ತೆಯ ಸರ್ವೀಸ್ ರಸ್ತೆಯನ್ನು ಬಳಸಿ ಹಳೆ ಮದ್ರಾಸ್ ರಸ್ತೆಯಲ್ಲಿರುವ ಟಿನ್ ಫ್ಯಾಕ್ಟರಿ ಜಂಕ್ಷನ್‌ಗೆ ತೆರಳುವಂತೆ ಪೂರ್ವ ವಿಭಾಗದ ಸಂಚಾರ ಡಿಸಿಪಿ ಕಲಾ ಕೃಷ್ಣಸ್ವಾಮಿ ಅವರು ಮನವಿ ಮಾಡಿದ್ದಾರೆ.
ವೈಟ್‌ಫೀಲ್ಡ್-ಚಲ್ಲಘಟ್ಟ ನಡುವೆ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ಇದರಿಂದ ಈಗಾಗಲೇ ಸಂಚಾರ ದಟ್ಟಣೆಯಿಂದ ಬಳಲುತ್ತಿರುವ ದಟ್ಟಣೆ ಪ್ರದೇಶವು ಮುಂದಿನ ದಿನಗಳಲ್ಲಿ ತಿರುವುಗಳಿಂದಾಗಿ ಇನ್ನಷ್ಟು ಒತ್ತಡ ಹೆಚ್ಚಾಗುವ ಸಾಧ್ಯತೆಯಿದೆ.
ಪರ್ಯಾಯ ಮಾರ್ಗಗಳು:
ಈ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ದೃಷ್ಟಿಯಿಂದ ವಾಹನ ಸವಾರರು
ಬೆನ್ನಿಗಾನಹಳ್ಳಿ ಮೇಲ್ಸೇತುವೆಯ ಎಡಭಾಗಕ್ಕೆ ರೈಲ್ವೇ ಅಂಡರ್‌ಪಾಸ್ ಅನ್ನು ಬಳಸುವುದು ಹಳೆಯ ಮದ್ರಾಸ್ ರಸ್ತೆಯಲ್ಲಿ ಕಸ್ತೂರಿನಗರ ಕಡೆಗೆ ಎಡಕ್ಕೆ ತಿರುಗುವ ಮೂಲಕ ಬೈಯಪನಹಳ್ಳಿ ಮೆಟ್ರೋ ನಿಲ್ದಾಣದ ಮೂಲಕ ಪ್ರಯಾಣಿಸ ಬಹುದಾಗಿದೆ ಹೊರ ವರ್ತುಲ ರಸ್ತೆಯ ಸರ್ವೀಸ್ ರಸ್ತೆಯನ್ನು ಬಳಸಿ ಕೆ ಆರ್ ಪುರಂ ಕಡೆಗೆ ಪ್ರಯಾಣಿಸಬಹುದು. ಕೆಆರ್ ಪುರಂ ಮೆಟ್ರೋ ನಿಲ್ದಾಣವನ್ನು ಬೈಯಪ್ಪನಹಳ್ಳಿಗೆ ಸಂಪರ್ಕಿಸುವ ಮೆಟ್ರೋ ಕಾಮಗಾರಿಯು ಸಕ್ರಿಯವಾಗಿ ನಡೆಯುತ್ತಿದ್ದು, ಆಗಸ್ಟ್ 22 ರಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ ಸಿಎಲ್) ಪ್ರಾಯೋಗಿಕ ಚಾಲನೆಯನ್ನು ನಡೆಸಲು ಸಜ್ಜಾಗಿದೆ.
‘ಮಿಸ್ಸಿಂಗ್ ಲಿಂಕ್’ ಎನ್ನಿಸಿಕೊಂಡಿರುವ ಬೈಯಪ್ಪನಹಳ್ಳಿ-ಕೆ.ಆರ್.ಪುರ ಮೆಟ್ರೋ ಜೊತೆಗೆ ಕೆಂಗೇರಿ-ಚಲ್ಲಘಟ್ಟನಡುವಿನ ಮೆಟ್ರೋ ಮಾರ್ಗವನ್ನೂ ಏಕಕಾಲಕ್ಕೆ ಪ್ರಯಾಣಿಕರಿಗೆ ಮುಕ್ತಗೊಳಿಸಲು ಬಿಎಂಆರ್‌ಸಿಎಲ್ ತೀರ್ಮಾನಿಸಿದೆ.ಇದರಿಂದಾಗಿ ಆಗಸ್ಟ್ ಅಂತ್ಯಕ್ಕೆ ಜನತೆ ಈ ಮಾರ್ಗಗಳಲ್ಲಿ ಸಂಚರಿಸಲು ಸಾಧ್ಯವಾಗುವ ನಿರೀಕ್ಷೆಯಿದೆ. ಅದರಂತೆ ಎಲ್ಲವೂ ನಡೆದರೆ ಆಗಸ್ಟ್ ಅಂತ್ಯದ ವೇಳೆಗೆ ಈ ಪ್ರದೇಶದ ಸಂಚಾರ ದಟ್ಟಣೆ ಸ್ವಲ್ಪ ಕಡಿಮೆಯಾಗಲಿದೆ ಇಲ್ಲವಾದರೆ ಇನ್ನೂ ಮೂರು ತಿಂಗಳು ಕಷ್ಟ ಪಡಲೇಬೇಕು.