ಬೆಂಗಳೂರು,ಮಾ.31- ರಾಜಧಾನಿ ಬೆಂಗಳೂರಿನಲ್ಲಿ ನಾಗರೀಕ ಸಮಾಜ ತಲೆತಗ್ಗಿಸುವಂತಹ ಅಮಾನುಷ ಕೃತ್ಯ ನಡೆದಿದೆ. ಮಗೀಯ ಸ್ವರೂಪದ ಕಾಮುಕರು ಯುವತಿಯನ್ನು ಅಪಹರಿಸಿ ಚಲಿಸುವ ಕಾರಿನಲ್ಲಿಯೇ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.
ಪಾರ್ಕ್ನಲ್ಲಿ ಸ್ನೇಹಿತನೊಂದಿಗೆ ಮಾತನಾಡುತ್ತಾ ಕುಳಿತಿದ್ದ ಯುವತಿಯನ್ನು ಬೆದರಿಸಿ ಅಪಹರಿಸಿದ ಕಿರಾತಕರು ಆಕೆಯನ್ನು ಕರೆದೊಯ್ಯುತ್ತಿದ್ದ ಕಾರಿನಲ್ಲಿಯೇ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಈ ಘಟನೆ ನಗರದ ಜನತೆ ಬೆಚ್ಚುವಂತೆ ಮಾಡಿದೆ
ಮಾರುತಿ 800 ಕಾರಿನಲ್ಲಿ ಹತ್ತಿಸಿಕೊಂಡ ಯುವತಿಯನ್ನು ನಗರದ ಹಲವೆಡೆ ಸುತ್ತಾಡಿಸಿ ಒಬ್ಬರ ನಂತರ ಒಬ್ಬರಂತೆ ಮೃಗೀಯವಾಗಿ ಮೇಲೆರಗಿ ಸುಮಾರು 8 ಗಂಟೆಗಳ ಕಾಲ ಸುತ್ತಾಡಿಸಿ ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆ.ಕಾಮಾಂದರ ಕ್ರೌರ್ಯಕ್ಕೆ ಕಾರಿನ ಸೀಟ್ ಕೂಡ ಚಿಂದಿ ಚಿಂದಿಯಾಗಿದೆ.
ಕಳೆದ ಮಾರ್ಚ್ 25ರಂದು ಕೋರಮಂಗಲದ ಸರ್ಕಾರಿ ನೌಕರರೇ ಹೆಚ್ಚಾಗಿ ವಾಸಿಸುವ ನ್ಯಾಷನಲ್ ಗೇಮ್ಸ್ ಪಾರ್ಕ್ನಲ್ಲಿ ರಾತ್ರಿ 10 ಗಂಟೆಯ ಸುಮಾರಿಗೆ ಯುವತಿ ಹಾಗೂ ಸ್ನೇಹಿತ ಕುಳಿತುಕೊಂಡು ಮಾತನಾಡುತ್ತಿದ್ದರು.
ಅಲ್ಲಿಗೆ ಬಂದ ಬಂಧಿತ ನಾಲ್ವರು ಯುವತಿಯ ಸ್ನೇಹಿತನನ್ನು ಬೆದರಿಸಿ ಮರಕ್ಕೆ ಕಟ್ಟಿ ಹಾಕಿ ಕಳುಹಿಸಿ ನಂತರ ಯುವತಿ ಜೊತೆಗೆ ಜಗಳ ತೆಗೆದು ಅಪಹರಿಸಿ ಕಾರಿನಲ್ಲಿ ಕರೆದೊಯ್ದಿದ್ದಾರೆ.
ಅಲ್ಲಿಂದ ದೊಮ್ಮಲೂರು, ಇಂದಿರಾನಗರ, ಆನೇಕಲ್, ನೈಸ್ ರಸ್ತೆ ಸೇರಿದಂತೆ ಹಲವೆಡೆ ಸುತ್ತಾಟ ನಡೆಸಿ ಚಲಿಸುತ್ತಿದ್ದ ಕಾರಿನಲ್ಲಿಯೇ ಅತ್ಯಾಚಾರ ಎಸಗಿದ್ದಾರೆ.
ರಾತ್ರಿಪೂರ್ತಿ ಸುತ್ತಾಡಿಸಿದ ನಂತರ ಬೆಳಗಿನ ಜಾವ 4 ಗಂಟೆಗೆ ಯುವತಿಯ ಮನೆಯ ಬಳಿ ರಸ್ತೆಯಲ್ಲಿಯೇ ಬಿಟ್ಟು ಹೋಗಿದ್ದರು. ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಮರುದಿನ ಮಾರ್ಚ್ 26 ರಂದು ದೂರು ನೀಡಿದ್ದರು.
ಪ್ರಕರಣ ದಾಖಲಿಸಿ ಯುವತಿಯ ವೈದ್ಯಕೀಯ ಪರೀಕ್ಷೆ ನಡೆಸಿ ಆಕೆ ಹಾಗೂ ಸ್ನೇಹಿತನಿಂದ ಮಾಹಿತಿಯನ್ನು ಪಡೆದು ಕಾರ್ಯಾಚರಣೆ ಕೈಗೊಂಡ ಕೋರಮಂಗಲ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಹೆಚ್ಚಿನ ವಿಚಾರಣೆ ನಡೆಸಿ ತನಿಖೆ ತೀವ್ರಗೊಳಿಸಲಾಗಿದೆ. ಆರೋಪಿಗಳ ಪೂರ್ವಾಪರ ಯುವತಿಯ ಜೊತೆ ಪರಿಚಯ ಇನ್ನಿತರ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ವೇಳೆ ಎಲ್ಲಾ ಆರೋಪಿಗಳು ಒಂದೇ ಏರಿಯಾದವರಾಗಿದ್ದು ಪರಿಚಯಸ್ಥರಾಗಿದ್ದಾರೆ ಏನ್ನಲಾಗಿದೆ. ಸದ್ಯ ಬಂಧಿತ ಆರೋಪಿಗಳು ಕೋರಮಂಗಲ ಪೊಲೀಸರ ಕಸ್ಟಡಿಯಲ್ಲಿದ್ದು ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.