ರಾಜ್ಯದಲ್ಲಿ ಶಬ್ದ ಮಾಲಿನ್ಯ ನಿಯಂತ್ರಣ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು. ಚರ್ಚ್, ಮಸೀದಿ, ದೇವಸ್ಥಾನಗಳನ್ನು ಒಳಗೊಂಡಂತೆ ಯಾವುದೇ ತಾರತಮ್ಯ ಇಲ್ಲದಂತೆ ಕಾನೂನನ್ನು ಜಾರಿಗೊಳಿಸುವುದಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್‌ನ ಆದೇಶದಂತೆ ಶಬ್ದ ಮಾಲಿನ್ಯ ನಿಯಂತ್ರಣಕ್ಕೆ ರಾಜ್ಯದಲ್ಲಿ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ. ಅದರಂತೆ ರಾತ್ರಿ ಹತ್ತು ಗಂಟೆಯಿಂದ ಬೆಳಗಿನ ಜಾವ ಆರು ಗಂಟೆಯವರೆಗೆ ಯಾವುದೇ ಧ್ವನಿವರ್ಧಕಗಳ ಉಪಯೋಗಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟ ಪಡಿಸಿದರು
ಬೇರೆ ಬೇರೆ ಸಮಯ, ಸಂದರ್ಭಗಳಲ್ಲಿ ಧ್ವನಿವರ್ಧಕಗಳ ಶಬ್ದದ ಸಾಂದ್ರತೆ ಯಾವ ಪ್ರಮಾಣದಲ್ಲಿರಬೇಕು. ಎಲ್ಲವನ್ನು ಮಾರ್ಗಸೂಚಿಯಲ್ಲಿ ಹೇಳಲಾಗಿದೆ. ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಶಬ್ದ ಮಾಲಿನ್ಯ ಉಂಟು ಮಾಡುವ ಹಾಗು ಅನುಮತಿ ಇಲ್ಲದ ಧ್ವನಿವರ್ಧಕಗಳನ್ನು ತೆಗೆದು ಹಾಕುವ ಪ್ರಕ್ರಿಯೆ ಇಡೀ ರಾಜ್ಯದಲ್ಲಿ ನಡೆಯಲಿದೆ. ಧ್ವನಿವರ್ಧಕ ಬಳಸಲು ಬಯಸುವವರು 15 ದಿನಗಳ ಮೊದಲು ಸಂಬಂಧಿತ ಅಧಿಕಾರಿಯಿಂದ ಅನುಮತಿ ಪಡೆಯಬೇಕು ಎಂದು ಅವರು ಹೇಳಿದರು