ಬೆಂಗಳೂರು,ಆ. 9-
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಗೆ ಮೈಸೂರಿನಲ್ಲಿ ಬೃಹತ್ ಶಕ್ತಿ ಪ್ರದರ್ಶನ ನಡೆಸುವ ಮೂಲಕ ಕಾಂಗ್ರೆಸ್ ತಿರುಗೇಟು ನೀಡಿದೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಜನಾಂದೋಲನ ಯಾತ್ರೆಯ ಬಹಿರಂಗ ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಸೇರಿದಂತೆ ಎಲ್ಲ ನಾಯಕರು ಜೆಡಿಎಸ್ ಮತ್ತು ಬಿಜೆಪಿಯ ವಿರುದ್ಧ ವಾಕ್ ಪ್ರಹಾರ ನಡೆಸಿದರು.
ಸುಮ್ಮನೆ ಕೂರುವುದಿಲ್ಲ:
ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕಾರ್ಯಕರ್ತರನ್ನು ನೋಡಿ ಆವೇಶಭರಿತರಾಗಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನಾನು ಈ ನೆಲದ ಶೋಷಿತರು ಶ್ರಮಿಕರು ಬಡವರು ದಲಿತರು ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಪರವಾಗಿದ್ದೇನೆ. ಇದನ್ನು ಸಹಿಸಲಾಗದೆ ನನ್ನ ಪದಚ್ಯುತಿಗೆ ಪ್ರಯತ್ನ ಮಾಡುತ್ತಿದ್ದಾರೆ ಇದನ್ನು ನೋಡಿ ನಾನು ಸುಮ್ಮನೆ ಕೂರುವುದಿಲ್ಲ ಎಂದು ಗುಡುಗಿದರು.
ಶೋಷಿತರು ದಲಿತರು ಹಿಂದುಳಿದ ಅಲ್ಪಸಂಖ್ಯಾತರ ಪರವಾಗಿ ಕೆಲಸ ಮಾಡುವಂತೆ ರಾಜ್ಯದ ಜನತೆ ನನಗೆ ಅವಕಾಶ ನೀಡಿದ್ದಾರೆ ಅದನ್ನು ಪೂರ್ಣಗೊಳಿಸುವ ಪ್ರಯತ್ನ ಮಾಡುತ್ತಿದ್ದೇನೆ ಇಂತಹ ಸಮಯದಲ್ಲಿ ನನ್ನನ್ನು ಕೆಳಗಿಳಿಸಲು ಪ್ರಯತ್ನ ಮಾಡಿದರೆ ಅದಕ್ಕೆ ರಾಜ್ಯದ ಜನತೆ ಅವಕಾಶ ನೀಡುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.
ಜೆಡಿಎಸ್ ಬಿಜೆಪಿ ನಡೆಸುತ್ತಿರುವ ಕಪಟ ಉದ್ದೇಶದ ಪಾದಯಾತ್ರೆಯಿಂದ ನಾನು ಹೆದರುವುದಿಲ್ಲ ಕೇಂದ್ರ ಸರ್ಕಾರ ಮತ್ತು ಬಿಜೆಪಿ ರಾಜಭವನ ದುರ್ಬಳಕೆ ಸೇರಿದಂತೆ ಯಾವುದೇ ಷಡ್ಯಂತ್ರ ನಡೆಸಿದರು ಬೆಚ್ಚುವುದಿಲ್ಲ ಇವರ ತಂತ್ರಕ್ಕೆ ಬಲಿಯಾಗಿ ಮನೆಯಲ್ಲಿ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಸಿದರು.
ಮನುವಾದಿಗಳು ಮತ್ತು ಜಾತಿವಾದಿಗಳು ಎಂದಿಗೂ ಶೋಷಿತರು ಅಧಿಕಾರ ನಡೆಸುವುದು ಸಹಿಸುವುದಿಲ್ಲ. ಈ ಹಿಂದೆ ದೇವರಾಜ ಅರಸು ಬಂಗಾರಪ್ಪ ಸೇರಿದಂತೆ ಹಲವರನ್ನು ಇವರು ಸಹಿಸಲಿಲ್ಲ ಅದೇ ರೀತಿಯಲ್ಲಿ ಈಗ ತಮ್ಮ ಸರ್ಕಾರವನ್ನು ವಸ್ತ್ರ ಗೊಳಿಸಲು ಪ್ರಯತ್ನ ನಡೆಸುತಿದ್ದಾರೆ ಎಂದು ಆಪಾದಿಸಿದರು.
ಇಂತಹ ಸಮಯದಲ್ಲಿ ರಾಜ್ಯದ ಜನರೆಲ್ಲರೂ ಒಟ್ಟಾಗಿ ನನ್ನ ಬೆಂಬಲಕ್ಕೆ ನಿಂತಿದ್ದೀರಿ, ಇದಕ್ಕಾಗಿ ನಾನು ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎರಡು ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ನೀವು ಅವಕಾಶ ಮಾಡಿಕೊಟ್ಟಿದ್ದೀರಿ ಇದಕ್ಕಾಗಿ ನಾನು ನಿಮಗೆ ಋಣಿಯಾಗಿರುತ್ತೇನೆ ಎಂದು ಹೇಳಿದರು.
ಎರಡು ಅವಧಿಯ ತಮ್ಮ ಅಧಿಕಾರ ಅವಧಿಯಲ್ಲಿ ಒಂದು ಸಣ್ಣ ಕಪ್ಪು ಚುಕ್ಕೆಯೂ ಬಾರದಂತೆ ಆಡಳಿತ ನಡೆಸಿದ್ದೇನೆ. ಈ ಅವಧಿಯಲ್ಲಿ ಎಂದಿಗೂ ತಮ್ಮ ಪತ್ನಿ ಬಹಿರಂಗವಾಗಿ ಕಾಣಿಸಿಕೊಂಡಿಲ್ಲ ನಾನು ಮುಖ್ಯಮಂತ್ರಿಯಾದರೂ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಬರಲಿಲ್ಲ ನನ್ನ 9 Electionಗಳನ್ನು ಜನರೇ ಹಣ ಹಾಕಿ ಗೆಲ್ಲಿಸಿಕೊಂಡು ಬಂದಿದ್ದಾರೆ ಎಂದು ವಿವರಿಸಿದರು.
ನಿವೇಶನ ಹಂಚಿಕೆ ಮತ್ತು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಪ್ರಕರಣದಲ್ಲಿ ನನ್ನ ಯಾವುದೇ ಪತ್ರ ಇಲ್ಲ ಸಹಿಯೂ ಇಲ್ಲ ಎಂದು ಹೇಳಿದ ಅವರು ನಿವೇಶನ ನೀಡಿದ ಸಮಯದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿತ್ತು ಆದರೆ ಈಗ ನನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು.
ರಾಜ್ಯದ ಹಣಕಾಸು ಮಂತ್ರಿಯಾಗಿ 15 ಬಜೆಟ್ ಮಂಡಿಸಿದ್ದೇನೆ ನನಗೆ ಹಣದ ಬಗ್ಗೆ ಮೋಹ ಇಲ್ಲ ಇದ್ದಿದ್ದರೆ ಕೋಟ್ಯಂತರ ರೂಪಾಯಿ ಮಾಡಬಹುದಿತ್ತು ಬಾಡಿಗೆ ಮನೆಯಲ್ಲಿ ಇದ್ದುಕೊಂಡು ಲೋಕಸಭೆ ವಿಧಾನಸಭೆ ಚುನಾವಣೆ ಮಾಡುತ್ತಿರಲಿಲ್ಲ ಮೈಸೂರಿನಲ್ಲಿ ಈಗ ಕಟ್ಟುತ್ತಿರುವ ಮನೆ ಬಿಟ್ಟು ನನ್ನ ಹೆಸರಿನಲ್ಲಿ ಯಾವುದಾದರೂ ಒಂದು ನಿವೇಶನ ಇದ್ದರೆ ತೋರಿಸಲಿ ಎಂದು ಸವಾಲು ಹಾಕಿದರು.