ಹುಬ್ಬಳ್ಳಿ : ಇಲ್ಲಿನ ಹಳೇ ಹುಬ್ಬಳ್ಳಿ ಗಲಭೆಯಲ್ಲಿ ಯಾವುದೇ ಪಕ್ಷದ ಮುಖಂಡರು ಭಾಗಿಯಾಗಿದ್ದರೂ ಕಾನೂನು ರೀತಿಯಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಹೀಗಂತ ಹೇಳಿದವರು ರಾಜ್ಯದ ಮಾಜಿ ಮುಖ್ಯಮಂತ್ರಿ, ಶಾಸಕ ಜಗದೀಶ್ ಶೆಟ್ಟರ್ ಅವರು.
ಹೌದು, ಮಳೆ ನಿಂತರು ಹನಿ ನಿಂತಿಲ್ಲ ಎನ್ನುವಂತೆ ಗಲಭೆ ನಡೆದು ಇಷ್ಟು ದಿನವಾದ್ರು ಗಲಭೆಗೆ ಸಂಬಂಧಿಸಿದ ಆರೋಪ-ಪ್ರತ್ಯಾರೋಪಗಳು ನಿಂತಿಲ್ಲ. ಆದರೆ ಒಂದೆಡೆ ಬಿಜೆಪಿಯ ಮುಖಂಡರು ಕೇವಲ ಒಂದು ಕೋಮನ್ನು ಗುರಿಯಾಗಿಸಿಕೊಂಡೇ ಹೇಳಿಕೆ ಕೊಟ್ಟಿದ್ದು ಹೆಚ್ಚು. ಆದರೆ ಶಾಸಕ ಜಗದೀಶ್ ಶೆಟ್ಟರ್ ಗಲಭೆಯಲ್ಲಿ ಭಾಗಿಯಾದವರು ಯಾವ ಪಕ್ಷದವರೇ ಆಗಿದ್ದರೂ ಕಠಿಣ ಕ್ರಮ ತೆಗೆದುಕೊಳ್ಳಿ ಎಂದು ಅಭಿಪ್ರಾಯಪಟ್ಟಿದ್ದಾರೆ. ಹುಬ್ಬಳ್ಳಿಯ ಶಾಂತಿಗೆ ದಕ್ಕೆಯನ್ನುಂಟು ಮಾಡಿದವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.
ಸುಮಾರು ವರ್ಷಗಳಿಂದ ಯಾವುದೇ ಗಲಾಟೆ ಹಾಗು ಕೋಮುಗಲಭೆ ಇಲ್ಲದಿರುವ ಹುಬ್ಬಳ್ಳಿಯಲ್ಲಿ ಈಗ ಏಕಾಏಕಿ ಅಶಾಂತಿಯನ್ನು ಹುಟ್ಟು ಹಾಕಲಾಗಿದೆ. ಈ ಘಟನೆಯಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವುದೇ ಪಕ್ಷದ ಮುಖಂಡರು ಇದ್ದರೂ ನಿರ್ದಾಕ್ಷಿಣ್ಯವಾಗಿ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸಿದ್ದೇನೆ. ಇಂತಹ ಘಟನೆಗಳಿಂದ ವಿದ್ಯಾರ್ಥಿಗಳ ಜೀವನ ಹಾಳಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.