ಬೆಂಗಳೂರು, ಜೂ.13-
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಪರಾಧ ಪ್ರಕರಣಗಳು ಹೆಚ್ಚಿವೆ. ಗಲಾಟೆ, ಚಾಕು ಇರಿತದ ಪ್ರಕರಣಗಳು ಹೆಚ್ಚಿದೆ.ಒಂದು ರೀತಿಯಲ್ಲಿ ತಾಲಿಬಾನ್ ಆಡಳಿತ ನಡೆಯುತ್ತಿದ್ದು
ಇದರ ವಿರುದ್ಧ ಬಿಜೆಪಿ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದೂಗಳ ಮೇಲೆ ಹಲ್ಲೆ ಪ್ರಕರಣಗಳು ವರದಿಯಾಗುತ್ತಿವೆ ಎಂದು ಆರೋಪಿಸಿದ ಅವರು ಇಂತಹ ತಾಲಿಬಾನ್ ಸರ್ಕಾರಕ್ಕೆ ಬಿಜೆಪಿ ಪಾಠ ಕಲಿಸಲಿದೆ ಎಂದು ಎಚ್ಚರಿಸಿದರು.
ಭಾರತ್ ಮಾತಾ ಕೀ ಜೈ ಅಂದವರ ಮೇಲೆ ಚಾಕು ಇರಿತದ ಪ್ರಕರಣಗಳು ವರದಿಯಾಗಿವೆ. ಸರ್ಕಾರ ಬಂದ ಮೇಲೆ ಗಲಾಟೆಗಳು, ಅಪರಾಧ ಪ್ರಕರಣಗಳು ಹೆಚ್ಚಾಗಿವೆ.ಈ ಸರ್ಕಾರ ಅಲ್ಪಸಂಖ್ಯಾತರ ಒಲೈಕೆ ಮಾಡುತ್ತಿದೆ. ಹಾಗಾಗಿ ಗಲಾಟೆ, ಹಲ್ಲೆ ಪ್ರಕರಣಗಳು ಹೆಚ್ಚಾಗಿವೆ ಎಂದು ದೂರಿದರು.
ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಹೋರಾಟ ನಡೆಸಲಿದೆ. ನಾಳೆ ಸಭೆ ಸೇರಿ ಹೋರಾಟದ ರೂಪುರೇಷೆಗಳನ್ನು ತೀರ್ಮಾನ ಮಾಡುತ್ತೇವೆ ಎಂದು ಅವರು ಹೇಳಿದರು.
ನಟ ದರ್ಶನ್ ಅವರ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾನೂನಿನ ಮುಂದೆ ಎಲ್ಲರೂ ಒಂದೇ. ಕಾನೂನನ್ನು ಕೈಗೆತ್ತಿಕೊಂಡಿದ್ದು ಸರಿಯಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಹೇಳಿದರು.
ಕೊಲೆಯಾಗಿರುವ ರೇಣುಕಸ್ವಾಮಿ ಕುಟುಂಬದ ಪರಿಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತದೆ. ಆತ ಅಮಾಯಕ, ಆತನ ಹೆಂಡತಿ ಗರ್ಭಿಣಿ ಬೇರೆ, ಕಣ್ಣಲ್ಲಿ ನೀರು ಬರುತ್ತದೆ ಎಂದ ಅಶೋಕ್ ಅವರು, ರೇಣುಕಸ್ವಾಮಿ ತಪ್ಪು ಮಾಡಿದ್ದರೆ ಕರೆಸಿ ಬುದ್ಧಿ ಹೇಳಬೇಕಿತ್ತು. ಅದು ಬಿಟ್ಟು ಕಾನೂನು ಕೈಗೆತ್ತಿಕೊಂಡಿದ್ದು ಸರಿಯಲ್ಲ ಎಂದರು.
ಈ ಘಟನೆ ಇಡೀ ಚಿತ್ರರಂಗಕ್ಕೆ ಕಳಂಕ. ಕೊಲೆಯಾದವನು ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಇರಲಿಲ್ಲ. ಆತ ಅಮಾಯಕ ಎಂದ ಅವರು, ತನಿಖೆಯಿಂದ ಸತ್ಯಾಸತ್ಯತೆ ಹೊರ ಬರಬೇಕು ಎಂದು ಹೇಳಿದರು.
Previous Articleಬೆಂಗಳೂರಿನಲ್ಲಿ ಹೆಚ್ಚಾಗುತ್ತಿದ್ದಾರೆ HIV ಪೀಡಿತರು.!
Next Article ಜೈಲು ಪಾಲಾಗುತ್ತಾರಾ ಯಡಿಯೂರಪ್ಪ.?

