ಬೆಂಗಳೂರು, ಫೆ.20- ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ (Karnataka Governor) ನಡುವಿನ ಸಂಘರ್ಷ ದೇಶಾದ್ಯಂತ ಸುದ್ದಿ ಮಾಡಿದೆ. ಆದರೆ ಕರ್ನಾಟಕದಲ್ಲಿ ಇದಕ್ಕೆ ವಿಭಿನ್ನ.ಇಲ್ಲಿನ
ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಅವರು ರಾಜ್ಯ ಸರ್ಕಾರದ ಮುಖ್ಯಸ್ಥರಾಗಿ ಕೇಂದ್ರ ಸರ್ಕಾರವನ್ನು ಟೀಕಿಸುವುದರಲ್ಲೂ ಹಿಂದೆ ಮುಂದೆ ನೋಡುವುದಿಲ್ಲ.ಇದಕ್ಕಾಗಿ ರಾಜ್ಯಪಾಲರನ್ನು ಅಭಿನಂದಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಕರಾರು ಮಾಡುವುದಿಲ್ಲ.
ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ. ರಾಜ್ಯಪಾಲರು ಮಾಡಿದ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲರನ್ನು ಹಾಡಿ ಹೊಗಳಿದರು.
ಕೇರಳ ಮತ್ತು ತಮಿಳುನಾಡಿನಲ್ಲಿ ಅಲ್ಲಿನ ರಾಜ್ಯಪಾಲರು ಸರ್ಕಾರದ ಭಾಷಣವನ್ನು ಓದದೇ ತಮ್ಮದೇ ಅಭಿಪ್ರಾಯವನ್ನು ಮಂಡಿಸಿದ್ದಾರೆ ಅಥವಾ ಭಾಷಣ ಮಾಡದೇ ಹೊರನಡೆದಿದ್ದಾರೆ. ಆದರೆ ನಮ್ಮ ರಾಜ್ಯಪಾಲರಾದ ತಾವರ್ ಚಂದ್ ಗೆಹ್ಲೋಟ್ ಆ ರೀತಿ ಮಾಡಿಲ್ಲ. ಸರ್ಕಾರದ ನಿಲುವು, ನೀತಿ, ಮುನ್ನೋಟ ಕಾರ್ಯಕ್ರಮವನ್ನು ಸ್ಪಷ್ಟವಾಗಿ ಸದನದ ಮುಂದಿಟ್ಟಿದ್ದಾರೆ ಎಂದು ಹೇಳಿ ಪ್ರಶಂಸಿದರು.
ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಸರ್ಕಾರದ ಭಾಷಣ ಓದುವ ಮೂಲಕ ರಾಜ್ಯಪಾಲರು ತಮ್ಮ ಸ್ಥಾನದ ಗೌರವವನ್ನು ಉಳಿಸಿಕೊಂಡಿರುವುದಲ್ಲದೆ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿ ಹಿಡಿದಿದ್ದಾರೆ ಎಂದರು
ತಮ್ಮ ಸರ್ಕಾರ ಆಡಳಿತಕ್ಕೆ ಬಂದು ಇಂದಿಗೆ 9 ತಿಂಗಳಾಗಿವೆ. ರಾಜ್ಯಪಾಲರು ಸರ್ಕಾರದ ನಿಲುವು, ಮುನ್ನೋಟ, ನೀತಿಯನ್ನು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ತಿಳಿಸಿದರು.
ಕೇಂದ್ರದ ವಿರುದ್ಧ ಕಿಡಿ:
ರಾಜ್ಯದಲ್ಲಿ ಬರಪರಿಸ್ಥಿತಿ ಇದೆ. ಪರಿಹಾರ ನೀಡಿ ಎಂದು ನಾನು ಖುದ್ದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್‍ಷಾ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇನೆ. ರಾಜ್ಯಸರ್ಕಾರದಿಂದ 17 ಬಾರಿ ಪತ್ರ ಬರೆದಿದ್ದೇವೆ. ಒಂದು ಬಾರಿ ಮಾತ್ರ ಅಮಿತ್ ಷಾ ನಿಮ್ಮ ಪತ್ರ ತಲುಪಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಉಳಿದ 16 ಪತ್ರಗಳನ್ನು ಕಡೆಗಣಿಸಿದ್ದಾರೆ. ಇದನ್ನು ಒಕ್ಕೂಟ ವ್ಯವಸ್ಥೆ ಎಂದು ಕರೆಯಬೇಕೆ ಎಂದು ಪ್ರಶ್ನಿಸಿದರು.
ಸಚಿವರು ಐದು ಬಾರಿ ಕೇಂದ್ರ ಸಚಿವರನ್ನು ಭೇಟಿ ಮಾಡಿ ಉದ್ಯೋಗ ಖಾತ್ರಿ ಯೋಜನೆಯಡಿ ಮಾನವ ದಿನಗಳ ಪ್ರಮಾಣವನ್ನು 100 ರಿಂದ 150 ಕ್ಕೆ ಹೆಚ್ಚಿಸುವಂತೆ ಮನವಿ ಕೊಟ್ಟಿದ್ದಾರೆ. ಕಂದಾಯ ಸಚಿವರೂ ಹಲವು ಬಾರಿ ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ. ಆದರೆ ಯಾವುದಕ್ಕೂ ಕೇಂದ್ರ ಸ್ಪಂದಿಸಿಲ್ಲ ಎಂದು ದೂರಿದರು.
ಮೊದಲ ಬಾರಿಗೆ 2023 ರ ಅಕ್ಟೋಬರ್ 20 ರಂದು ಬರ ನಿರ್ವಹಣೆಗೆ ನೆರವು ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ನಾಲ್ಕು ತಿಂಗಳು ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಬಳಿಕ ನವೆಂಬರ್ 16 ರಂದು ಎರಡನೇ ಬಾರಿ ಪ್ರಸ್ತಾವನೆ ಸಲ್ಲಿಸಿದ್ದೇವೆ. ಈಗಲೂ ಕೇಂದ್ರದಿಂದ ಉತ್ತರ ಇಲ್ಲ. ಈ ಅನ್ಯಾಯವನ್ನು ಬಿಜೆಪಿಯವರಂತೂ ಕೇಳುತ್ತಿಲ್ಲ. ನಾವೂ ಕೇಳಬಾರದೆ ಎಂದು ಪ್ರಶ್ನಿಸಿದರು. ಜೆಡಿಎಸ್‍ನ ಎಚ್.ಡಿ.ಕುಮಾರಸ್ವಾಮಿಯವರು ಕೇಂದ್ರ ಸರ್ಕಾರದಿಂದ ಸಂಘರ್ಷ ಮಾಡಿಕೊಳ್ಳಬಾರದು ಎಂದು ಹೇಳಿದ್ದಾರೆ. ಇಡೀ ಸದನ ಒಟ್ಟಾಗಿ ನ್ಯಾಯ ಕೇಳಬೇಕಿದೆ. ನಾವು ಯಾರ ಜೊತೆಯೂ ಸಂಘರ್ಷ ಮಾಡುತ್ತಿಲ್ಲ. ನಮಗೆ ದೊರೆಯಬೇಕಾದ ಪಾಲಿನ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ತಿರುಗೇಟು ನೀಡಿದರು.
ಕೇಂದ್ರದಿಂದಾಗುತ್ತಿರುವ ಆರ್ಥಿಕ ತಾರತಮ್ಯದ ವಿರುದ್ಧ ಧ್ವನಿ ಎತ್ತದೇ ಇರುವುದು ರಾಜ್ಯದ ಏಳು ಕೋಟಿ ಕನ್ನಡಿಗರಿಗೆ ಮಾಡಿದ ಅನ್ಯಾಯ ಎಂದು ಹೇಳಿದರು.