ನವದೆಹಲಿ,ಏ.9- ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯಲು ರಣತಂತ್ರ ರೂಪಿಸುತ್ತಿರುವ ಬಿಜೆಪಿ, ಗೆಲ್ಲುವ ಮಾನದಂಡ ಆದರಿಸಿ ಅಭ್ಯರ್ಥಿಗಳ ಆಯ್ಕೆಗೆ ಮುಂದಾಗಿದ್ದು, ಅದಕ್ಕೆ ಇದೀಗ ಕುಟುಂಬ ರಾಜಕಾರಣ ದೊಡ್ಡ ತೊಡಕಾಗುವ ಸಾಧ್ಯತೆಗಳು ಗೋಚರಿಸಿವೆ.
ಅಭ್ಯರ್ಥಿಗಳ ಆಯ್ಕೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ದೆಹಲಿಯಲ್ಲಿ ಬಿಜೆಪಿಯ ಸಂಸದೀಯ ಮಂಡಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಟಿಕೆಟ್ ಆಕಾಂಕ್ಷಿ ಹಿರಿಯ ನಾಯಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ತಮ್ಮ ಕುಟುಂಬ ಸದಸ್ಯರಿಗೆ ಟಿಕೆಟ್ ನೀಡುವಂತೆ ವರಿಷ್ಠರ ಮೇಲೆ ಒತ್ತಡ ಹೇರ ತೊಡಗಿದ್ದಾರೆ.
ಸಂಸದರಾದ ಕರಡಿ ಸಂಗಣ್ಣ ,ಜಿಎಂ ಸಿದ್ದೇಶ್ವರ್, ಪಿ. ಸಿ. ಮೋಹನ್, ಕೆ ಎಸ್ ಈಶ್ವರಪ್ಪ ,ವಿ ಸೋಮಣ್ಣ, ಮುರುಗೇಶ್ ನಿರಾಣಿ ಸೇರಿದಂತೆ ಹಲವಾರು ಮುಖಂಡರು ತಮ್ಮ ಕುಟುಂಬ ಸದಸ್ಯರ ಪರವಾಗಿ ಲಾಭಿ ಆರಂಭಿಸಿದ್ದಾರೆ.
ಕೊಪ್ಪಳ ಕ್ಷೇತ್ರದಿಂದ ಚುನಾವಣೆ ಸ್ಪರ್ಧಿಸಲು ತಮಗೆ ಅವಕಾಶ ನೀಡಬೇಕು. ಇಲ್ಲವೇ ತಮ್ಮ ಪುತ್ರ ಗವಿಸಿದ್ದ ಕರಡಿ ಅವರಿಗೆ ಅವಕಾಶ ನೀಡಬೇಕು ಎಂದು ಕರಡಿ ಸಂಗಣ್ಣ ಪಟ್ಟು ಹಿಡಿದಿದ್ದರೆ ,ಜಿಎಂ ಸಿದ್ದೇಶ್ವರ ಅವರು ದಾವಣಗೆರೆ ಕ್ಷೇತ್ರದಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ.
ಪಿಸಿ ಮೋಹನ್ ಅವರು ಬೆಂಗಳೂರಿನ ಗಾಂಧಿನಗರದಿಂದ ತಮ್ಮ ಪುತ್ರ ರಿತಿನ್ ಅವರಿಗೆ ಟಿಕೆಟ್ ನೀಡಬೇಕು ಎಂದು ಬೇಡಿಕೆ ಮಂಡಿಸಿದ್ದಾರೆ. ಸಚಿವ ಮುರುಗೇಶ್ ನಿರಾಣಿ ಬಾಗಲಕೋಟೆಯ ತೇರದಾಳ ಕ್ಷೇತ್ರದಿಂದ ತಮ್ಮ ಸೋದರ ಸಂಗಮೇಶ ನಿರಾಣಿ ಅವರಿಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಶಿವಮೊಗ್ಗದಲ್ಲಿ ಮತ್ತೊಮ್ಮೆ ತಮಗೆ ಸ್ಪರ್ಧಿಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿರುವ ಹಿರಿಯ ನಾಯಕ ಈಶ್ವರಪ್ಪ ,ತಪ್ಪಿದಲ್ಲಿ ತಮ್ಮ ಪುತ್ರ ಕಾಂತೇಶ್ ಗೆ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾರೆ. ಸಚಿವ ವಿ ಸೋಮಣ್ಣ ಕೂಡ ತಮ್ಮ ಪುತ್ರ ಅರುಣ್ ಸೋಮಣ್ಣ ಅವರಿಗೆ ಟಿಕೆಟ್ ನೀಡುವಂತೆ ಮಾನವಿ ಸಲ್ಲಿಸಿದ್ದಾರೆ. ಇದೇ ರೀತಿಯಲ್ಲಿ ಹಲವಾರು ನಾಯಕರು ತಮ್ಮ ಕುಟುಂಬ ಸದಸ್ಯರ ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಟಿಕೆಟ್ ನೀಡುವಂತೆ ಲಾಬಿ ನಡೆಸುತ್ತಿರುವುದು ಅಭ್ಯರ್ಥಿಗಳ ಸುಗಮ ಆಯ್ಕೆಗೆ ಕಸರತ್ತು ನಡೆಸುತ್ತಿರುವ ಹೈಕಮಾಂಡ್ ಗೆ ತೀವ್ರ ತಲೆನೋವು ತಂದಿದೆ
ನನ್ನ ಮಗನಿಗೂ ಕೊಡಿ:
ಎಲ್ಲಾ ಬೆಳವಣಿಗೆಗಳ ನಡುವೆ ಸುದ್ದಿಗಾರರೊಂದಿಗೆ ಮಾತನಾಡಿದ, ಸೋಮಣ್ಣ,ಬೇರೆಯವರ ಮಕ್ಕಳಿಗೆ ಟಿಕೆಟ್ ಕೊಟ್ಟರೆ ನನ್ನ ಮಗನಿಗೂ ಸಹ ತುಮಕೂರು ಜಿಲ್ಲೆ ಗುಬ್ಬಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೊಡಬೇಕೆಂದು ಮನವಿ ಮಾಡಿರುವುದಾಗಿ ತಿಳಿಸಿದರು.
ನನ್ನ ಪುತ್ರ ಅರುಣ್ ಸೋಮಣ್ಣನಿಗೆ ತುಮಕೂರಿನ ಗುಬ್ಬಿಯಿಂದ ಟಿಕೆಟ್ ಕೇಳಿರುವುದು ನಿಜ. ಪಕ್ಷದ ವರಿಷ್ಠರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದು ಗೊತ್ತಿಲ್ಲ. ಟಿಕೆಟ್ ಕೊಟ್ಟರೆ ಗೆಲ್ಲುವ ಸಾಧ್ಯತೆ ಇದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಪಕ್ಷದಲ್ಲಿ ಹಲವಾರು ವರ್ಷಗಳ ಕಾಲ ದುಡಿದಿದ್ದಾರೆ. ಕಾರ್ಯಕರ್ತರ ಜೊತೆ ಉತ್ತಮವಾದ ಒಡನಾಟವನ್ನು ಇಟ್ಟುಕೊಂಡಿದ್ದಾರೆ. ವರಿಷ್ಠರಿಗೆ ಇವೆಲ್ಲವನ್ನು ಮನವರಿಕೆ ಮಾಡಲಾಗಿದೆ. ಅರುಣ್ ಸೋಮಣ್ಣ ಕಣಕ್ಕಿಳಿಯಬೇಕೆಂಬುದು ಕಾರ್ಯಕರ್ತರ ಒತ್ತಾಯವಾಗಿದೆ ಎಂದು ಹೇಳಿದರು.
14 ಶಾಸಕರಿಗೆ ಟಿಕೆಟ್ ಕಟ್ :
ವಿವಿಧ ಸಮೀಕ್ಷೆಗಳು ಕಾರ್ಯಕರ್ತರ ಅಭಿಪ್ರಾಯ ಸಂಘ ಪರಿವಾರದ ವರದಿಯನ್ನು ಆಧರಿಸಿ ಗೆಲ್ಲುವ ಮಾನದಂಡದೊಂದಿಗೆ, ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸುತ್ತಿರುವ ಬಿಜೆಪಿ ಉನ್ನತ ಸಮಿತಿ, ಕಳೆದ ರಾತ್ರಿ ಹಲವು ಕ್ಷೇತ್ರಗಳ ಕುರಿತಂತೆ ಚರ್ಚೆ ನಡೆಸಿತು.
ಇಂದು ಬೆಳಗ್ಗೆ ಮತ್ತೆ ಸಭೆ ಸೇರಿದ ಸಮಿತಿ, ಅಭ್ಯರ್ಥಿಗಳ ಆಯ್ಕೆ ಕುರಿತು ಅನುಸರಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ಸಮಲೋಚನೆ ನಡೆಸಿತು. ಆ ಮಾರ್ಗಸೂಚಿಗೆ ಹೊಂದಿಕೆಯಾಗುವ ಹೆಸರುಗಳನ್ನು ಪರಿಶೀಲನೆ ನಡೆಸಿತು. ಬಳಿಕ ಸಂಜೆ ಸಂಸದೀಯ ಮಂಡಳಿ ಸಭೆ ನಡೆದಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಪಕ್ಷದ ಹಿರಿಯ ನಾಯಕ ಅಮಿತ್ ಶಾ ಸೇರಿದಂತೆ ಹಲವಾರು ಪ್ರಮುಖ ನಾಯಕರು ಪಾಲ್ಗೊಂಡಿದ್ದರು. ಈ ಸಭೆ ಪಕ್ಷದ ರಾಜ್ಯ ಕೋರ್ ಕಮಿಟಿ ಸಲ್ಲಿಸಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಮತ್ತು ಇದನ್ನು ಆಧರಿಸಿ ಬಿಜೆಪಿಯ ಕೇಂದ್ರದ ಉನ್ನತ ಮಟ್ಟದ ಸಮಿತಿ ಮಾಡಿರುವ ಶಿಫಾರಸುಗಳನ್ನು ಮುಂದಿಟ್ಟುಕೊಂಡು ಸುಧೀರ್ಘಸಮಾಲೋಚನೆ ನಡೆಸಿತು.
ಈ ವೇಳೆ ವಿಧಾನ ಪರಿಷತ್ ಸದಸ್ಯರು, ಮತ್ತು ಸಂಸದರಿಗೆ ಯಾವುದೇ ಕಾರಣಕ್ಕೂ ವಿಧಾನಸಭೆಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬಾರದು ಎಂಬ ತೀರ್ಮಾನ ಕೈಗೊಳ್ಳಲಾಯಿತು. ಅಲ್ಲದೆ ಕ್ಷೇತ್ರದಲ್ಲಿ ಕಾರ್ಯಕರ್ತರ ವಿರೋಧ ಜನಸಾಮಾನ್ಯರ ಅಸಮಾಧಾನ, ಭ್ರಷ್ಟಾಚಾರ ಆರೋಪ, ಮತ್ತು ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಸುಮಾರು 14 ಮಂದಿ ಹಾಲಿ ಶಾಸಕರಿಗೆ ಟಿಕೆಟ್ ನೀಡಬಾರದು ಎಂಬ ತೀರ್ಮಾನ ಕೈಗೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಬಿಜೆಪಿಯ ಮೂಲಗಳ ಉನ್ನತ ಮೂಲಗಳ ಪ್ರಕಾರ
ಶಿವಮೊಗ್ಗ ಕ್ಷೇತ್ರದ ಹಾಲಿ ಶಾಸಕ ಕೆ.ಎಸ್. ಈಶ್ವರಪ್ಪ, ಭಟ್ಕಳ ಶಾಸಕ ಸುನೀಲ್ ನಾಯ್ಕ್, ಪುತ್ತೂರಿನ ಸಂಜೀವ್ ಮಠಂದೂರು, ಕಾಪು -ಲಾಲಾಜಿ ಮೆಂಡನ್, ಉಡುಪಿ– ರಘುಪತಿ ಭಟ್, ಚಿಕ್ಕಪೇಟೆ- ಉದಯ ಗರುಡಾಚಾರ್, ಬಸವನಗುಡಿ -ರವಿ ಸುಬ್ರಮಣ್ಯ, ಸಿರುಗುಪ್ಪ -ಸೋಮಲಿಂಗಪ್ಪ, ಶಿರಹಟ್ಟಿ,-ರಾಮಣ್ಣ ಲಮಾಣಿ, ಕಲಬುರಗಿ ಉತ್ತರ-.ಬಸವರಾಜ ಮತ್ತಿ ಮೂಡ್, ರೋಣ- ಕಳಕಪ್ಪ, ಬೈಂದೂರು- ಸುನೀಲ್ ಕುಮಾರ್ ಶೆಟ್ಟಿ, ಕುಂದಾಪುರ -ಹಾಲಾಡಿ ಶ್ರೀನಿವಾಸ ಶೆಟ್ಟಿ, ಹೊಸದುರ್ಗ- ಬಿ.ಹೆಚ್. ತಿಪ್ಪಾರೆಡ್ಡಿ, ಮೂಡಿಗೆರೆ- ಎಂ.ಪಿ.ಕುಮಾರಸ್ವಾಮಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಆಡಳಿತ ವಿರೋಧಿ ಅಲೆಯನ್ನು ದೂರ ಮಾಡುವ ದೃಷ್ಟಿಯಿಂದ ಕರಾವಳಿಯಲ್ಲಿ ಐದಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲು ತೀರ್ಮಾನಿಸಲಾಗಿದೆ.
ಪ್ರತಿ ಪಕ್ಷಗಳ ಶಾಸಕರು ಇರುವ ಕ್ಷೇತ್ರಗಳಲ್ಲಿ, ಪ್ರಭಾವಿ ನಾಯಕರು ಮತ್ತು ಗೆಲ್ಲುವ ಅವಕಾಶ ಇರುವ ಹೊಸ ಮುಖಗಳಿಗೆ ಮನ್ನಣೆ ನೀಡಲು ಸಮಿತಿ ತೀರ್ಮಾನಿಸಿದ್ದು ,ತಡರಾತ್ರಿ ಇಲ್ಲವೇ ನಾಳೆ ಬೆಳಗ್ಗೆ ಬಿಡುಗಡೆಯಾಗಲಿದೆ .