ಬೆಂಗಳೂರು,ಮೇ. 21-
ಸೆಲಿಕಾನ್ ಸಿಟಿ ಬೆಂಗಳೂರಿನ ವೈಟ್ಫೀಲ್ಡ್ ಸಮೀಪದ ಬ್ರೂಕ್ ಫೀಲ್ಡ್ ನಲ್ಲಿರುವ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧಿಸಿದಂತೆ ನಗರದ ನಾಲ್ಕು ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಇದೇ ವೇಳೆ ಕೊಯಮತ್ತೂರಿನಲ್ಲಿ ಎನ್ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದೇಶಾದ್ಯಂತ ಒಟ್ಟು 11 ಕಡೆಗಳಲ್ಲಿ ಎಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ಹಾಗೂ ಬನಶಂಕರಿಯಲ್ಲಿ ಏಕಕಾಲದಲ್ಲಿ ದಾಳಿ ನಡೆಸಿರುವ ಎನ್ಐಎ ಅಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದಾರೆ ಕೊಯಮತ್ತೂರಿನ ವೈದ್ಯರಾದ ಜಾಫರ್ ಇಕ್ಬಾಲ್ ಹಾಗೂ ನಯನ್ ಸಾದಿಕ್ ಮನೆಗಳ ಮೇಲೆ ದಾಳಿ ನಡೆಸಿ ಇಂಚಿಂಚೂ ಶೋಧ ಕೈಗೊಂಡು ಇಬ್ಬರಿಂದಲೂ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.
ಎರಡು ತಂಡಗಳಲ್ಲಿ ಬಂದ ಅಧಿಕಾರಿಗಳು ದಾಳಿ ನಡೆಸಿ ಮಹತ್ವದ ದಾಖಲೆ ವಶಪಡಿಸಿಕೊಂಡು ಅಕ್ಕಪಕ್ಕದ ಮನೆಯವರಿಂದಲೂ ಮಾಹಿತಿಯನ್ನು ಕಲೆಹಾಕಿದ್ದಾರೆ.
ದಾಳಿಯ ವೇಳೆ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಹಾಗೂ ಮಂಗಳೂರಿನಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಪೋಟ ಸಂಬಂಧಿಸಿದಂತೆ ಮಹತ್ವದ ಮಾಹಿತಿಗಳು ಲಭ್ಯವಾಗಿವೆ ಎಂದು ಎನ್ ಐಎ ಮೂಲಗಳು ತಿಳಿಸಿವೆ.
ಕಳೆದ ಮಾರ್ಚ್ 1 ರಂದು ಮಧ್ಯಾಹ್ನ 12:55 ರ ಸುಮಾರಿಗೆ ವೈಟ್ಫೀಲ್ಡ್ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಲಾಗಿತ್ತು. ಕೃತ್ಯ ಎಸಗಿದ ಆರೋಪಿಗಳಾದ ಮೊಹಮ್ಮದ್ ಮತೀನ್ ಮತ್ತು ಮುಸಾವಿರ್ ಹುಸೇನ್ ಅನ್ನು ಎನ್ಐಎ ಅಧಿಕಾರಿಗಳು, ಘಟನೆ ನಡೆದು 43 ದಿನಗಳ ಬಳಿಕ, ಪಶ್ಚಿಮ ಬಂಗಾಳದಲ್ಲಿ ಬಂಧಿಸಿದ್ದರು.
ಬಂಧಿತರ ವಿಚಾರಣೆ ನಡೆಸಿದ್ದು ಬೆಚ್ಚಿ ಬೀಳಿಸುವ ಸಂಗತಿ ಬಯಲಾಗಿದ್ದು ಅದನ್ನು ಆಧರಿಸಿ ಬೆಂಗಳೂರು ಹಾಗೂ ಕೊಯಮತ್ತೂರಿನ 11ಕಡೆಗಳಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.