ಬೆಂಗಳೂರು,ಜು.5-
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ಚರ್ಚೆ ಆರಂಭವಾಗಿರುವ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಷ್ಟ್ರೀಯ ರಾಜಕಾರಣದತ್ತ ಸೆಳೆಯುವ ಪ್ರಯತ್ನ ತೆರೆ ಮರೆಯಲ್ಲಿ ಸದ್ದಿಲ್ಲದೆ ಆರಂಭಗೊಂಡಿದೆ.
ಸಹಕಾರ ಮಂತ್ರಿ ಕೆ ಎನ್ ರಾಜಣ್ಣ ಅವರು ಸೆಪ್ಟೆಂಬರ್ ಕ್ರಾಂತಿಯ ಭವಿಷ್ಯ ನುಡಿದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ಸಿನಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿದ್ದವು ಅಧಿಕಾರ ಹಸ್ತಾಂತರ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿದಂತೆ ಹಲವು ಚರ್ಚೆಗಳು ನಡೆದಿದ್ದವು.
ಇದರ ಬೆನ್ನಲ್ಲೇ ಬಲಾಬಲ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಆಪ್ತ ವಲಯಗಳಲ್ಲಿ ಮಾತುಕತೆಗಳು ನಡೆದಿದ್ದವು. ಇದಕ್ಕೆ ಪೂರಕವಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ನಾಯಕ ಸುರ್ಜೇವಾಲ ಅವರು ಕಾಂಗ್ರೆಸ್ ಶಾಸಕರ ಅಸಮಾಧಾನ ತಣಿಸುವ ಸಭೆಯ ಹೆಸರಿನಲ್ಲಿ ಬೆಂಗಳೂರಿಗೆ ಆಗಮಿಸಿ ಶಾಸಕರೊಂದಿಗೆ ಸಮಾಲೋಚನೆ ನಡೆಸಿದರು.
ಸುರ್ಜೇವಾಲ ಅವರು ಶಾಸಕರು ಅಹವಾಲು ಕೇಳುವ ಸಮಯದಲ್ಲಿ ನಾಯಕತ್ವ ಬದಲಾವಣೆಯ ಕುರಿತಂತೆ ಅವರ ಅಭಿಪ್ರಾಯ ಕೇಳಿದ್ದು ಕುತೂಹಲ ಮೂಡಿಸಿತ್ತು ಇದರ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 5 ವರ್ಷಗಳ ಕಾಲ ತಾವೇ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರೆ ಅದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ರೀತಿ ಹೇಳಿದರೆ ತಮಗೆ ಬೇರೆ ಆಯ್ಕೆ ಇನ್ನೆಲ್ಲಿದೆ ಎಂದು ಹೇಳುವ ಮೂಲಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ನಡೆಯ ಬಗ್ಗೆ ಕುತೂಹಲ ಮೂಡಿಸಿದ್ದರು.
ಈ ಇಬ್ಬರೂ ನಾಯಕರು ನೀಡಿರುವ ಹೇಳಿಕೆಯ ಸುತ್ತಮುತ್ತ ಚರ್ಚೆ ನಡೆದಿರುವ ನಡುವೆಯೇ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಪ್ತಬಣ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದಲ್ಲಿ ಶಾಸಕರನ್ನು ಒಟ್ಟುಗೂಡಿಸುವ ಕೆಲಸದಲ್ಲಿ ನಿರತರಾಗಿರುವುದು ಮತ್ತಷ್ಟು ಗಮನ ಸೆಳೆದಿದೆ.
ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ಇಂತಹ ಬೆಳವಣಿಗೆ ನಡೆದಿರುವ ಬೆನ್ನಲ್ಲೇ ರಾಷ್ಟ್ರೀಯ ಮಟ್ಟದಲ್ಲೂ ಆಶ್ಚರ್ಯಕರ ವಿದ್ಯಮಾನಗಳ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಷ್ಟ್ರೀಯ ರಾಜಕಾರಣಕ್ಕೆ ತರುವ ಯತ್ನ ಸದ್ದಿಲ್ಲದೆ ಕಾರ್ಯರೂಪಕ್ಕೆ ಬರತೊಡಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದೇಶದಲ್ಲಿ ಹಿಂದುಳಿದ ವರ್ಗಗಳ ಪ್ರಬಲ ನಾಯಕ ಎಂದು ಬಿಂಬಿಸಲಾಗುತ್ತಿದೆ ಸಿದ್ದರಾಮಯ್ಯ ಅವರ ಈ ವಿಶೇಷಣವನ್ನೇ ಬಳಸಿಕೊಂಡು ಹೈಕಮಾಂಡ್ ಅವರನ್ನು ರಾಷ್ಟ್ರೀಯ ರಾಜಕಾರಣದಲ್ಲಿ ತೊಡಗುವಂತೆ ಮಾಡಲು ಕಾರ್ಯತಂತ್ರ ರೂಪಿಸಿದೆ
ಇದರ ಪರಿಣಾಮವಾಗಿ ಕಾಂಗ್ರೆಸ್ ರಾಷ್ಟ್ರೀಯ ಮಟ್ಟದಲ್ಲಿ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆಯುವ ದೃಷ್ಟಿಯಿಂದ ಹಲವಾರು ಕಾರ್ಯಯೋಜನೆಯನ್ನು ರೂಪಿಸಲು ಮುಂದಾಗಿದೆ ಕರ್ನಾಟಕದಲ್ಲಿ ಇಂತಹ ಕಾರ್ಯತಂತ್ರ ರೂಪಿಸಿ ಯಶಸ್ವಿಯಾಗಿರುವ ಸಿದ್ದರಾಮಯ್ಯ ಅವರನ್ನು ಇದಕ್ಕೆ ಬಳಸಿಕೊಳ್ಳಲು ತೀರ್ಮಾನಿಸಿದೆ.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಎಐಸಿಸಿ ಹಿಂದುಳಿದ ವರ್ಗಗಳ ಘಟಕದ ಸಲಹಾ ಸಮಿತಿಯನ್ನು ರಚಿಸಲಾಗಿದೆ.
ಸಿದ್ದರಾಮಯ್ಯ ನೇತೃತ್ವದ ಈ ಘಟಕಕ್ಕೆ ಪಕ್ಷ ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯವನ್ನು ಸೆಳೆಯುವ ದೃಷ್ಟಿಯಿಂದ ರೂಪಿಸಬೇಕಾದ ಮುಂದಿನ ಕಾರ್ಯಯೋಜನೆಗಳು, ಅವುಗಳ ಅನುಷ್ಠಾನ, ಹಿಂದುಳಿದ ವರ್ಗಗಳಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕೈಗೆತ್ತಿಕೊಳ್ಳಬೇಕಾದ ವಿಷಯಗಳ ಕುರಿತು ಕಾರ್ಯಯೋಜನೆಯನ್ನು ಸಿದ್ಧಪಡಿಸಿ ಅದನ್ನು ಎಐಸಿಸಿಗೆ ನೀಡಲಿದೆ.
ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ ಅಶೋಕ್ ಗೆಲೋಟ್ ಸೇರಿದಂತೆ ನಾಲ್ವರು ಮಾಜಿ ಮುಖ್ಯಮಂತ್ರಿಗಳನ್ನೋಳಗೊಂಡ 24 ಸದಸ್ಯರಿರುವ ಸಲಹಾ ಮಂಡಳಿ ರಚನೆಯಾಗಿದ್ದು ಈ ಸಮಿತಿಯನ್ನು ಸಿದ್ದರಾಮಯ್ಯ ಮುನ್ನಡೆಸಲಿದ್ದಾರೆ.
ಸಮಕಾಲೀನ ಸಂದರ್ಭದಲ್ಲಿ ಹಿಂದುಳಿದ ವರ್ಗಗಳ ಅಗ್ರಗಣ್ಯ ನಾಯಕರಾಗಿರುವ ಸಿದ್ದರಾಮಯ್ಯ ಅವರ ವರ್ಚಸ್ಸನ್ನು ಬಳಸಿಕೊಂಡು ದೇಶದಾದ್ಯಂತ ಹಿಂದುಳಿದ ವರ್ಗಗಳನ್ನು ತನ್ನತ್ತ ಸೆಳೆಯಲು ಕಾಂಗ್ರೆಸ್ ಈ ಮಂಡಳಿ ರಚಿಸಿದೆ. ದೇಶದಾದ್ಯಂತ ಹಿಂದುಳಿದ ವರ್ಗಗಳ ಸಮಸ್ಯೆ, ಸವಾಲುಗಳನ್ನು ಅರಿತು ಸಲಹೆ ನೀಡುವುದರ ಜೊತೆಗೆ ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಪೂರಕವಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಈ ಮಂಡಳಿ ಸಲಹೆಗಳನ್ನು ನೀಡಲಿದೆ.
ಹಿಂದುಳಿದ ವರ್ಗಗಳ ರಾಷ್ಟ್ರೀಯ ಸಲಹಾ ಮಂಡಳಿ ರಚನೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ಅನುಮೋದಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಸಮಯದಲ್ಲಿ ಅಧಿಕಾರ ಹಂಚಿಕೆ ಕುರಿತಂತೆ ಆದ ಒಪ್ಪಂದವನ್ನು ಸದ್ದು ಗದ್ದಲವಿಲ್ಲದೆ ಹೈ ಕಮಾಂಡ್ ಅನುಸ್ಥಾನಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.