ಮುಂಬಯಿ: ನಾಯಕ ಕೆ.ಎಲ್. ರಾಹುಲ್ ಅವರ ಆಜೇಯ ಶತಕದ ನೆರವಿನೊಂದಿಗೆ ಲಕ್ನೋ ಸೂಪರ್ ಜೈಂಟ್ಸ್ ತಂಡವು ಟಾಟಾ ಐಪಿಎಲ್‌ನ 37ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 36 ರನ್‌ಗಳ ವಿಜಯ ಸಾಧಿಸಿದೆ.
ಈ ಮೂಲಕ ಆಡಿರುವ ಎಲ್ಲ 8 ಪಂದ್ಯಗಳಲ್ಲಿ ಸೋಲುಂಡಿರುವ ಮುಂಬೈ ತಂಡದ ಪ್ಲೇ-ಆಫ್ ಕನಸು ಬಹುತೇಕ ಭಗ್ನವಾದಂತಾಗಿದೆ. ಅಲ್ಲದೆ, ಐಪಿಎಲ್‌ನಲ್ಲಿ ರಾಹುಲ್ ಮುಂಬೈ ವಿರುದ್ಧವೇ ಮೂರನೇ ಶತಕ ಸಿಡಿಸಿರುವುದೂ ಪಂದ್ಯಾವಳಿಯ ಇತಿಹಾಸದಲ್ಲೇ ಒಂದು ಅಪೂರ್ವ ದಾಖಲೆಯೂ ಆಗಿದೆ. 62 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ ರಾಹುಲ್ ಏಕಾಂಗಿಯಾಗಿ ಇನ್ನಿಂಗ್ಸ್ ಕಟ್ಟಿದರು. ಮನೀಷ್ ಪಾಂಡೆ (22) ಮಾತ್ರ ಕೊಂಚ ಹೊತ್ತು ಮುಂಬೈ ದಾಳಿಯನ್ನು ತಾಳಿಕೊಂಡಿದ್ದರು. 6 ವಿಕೆಟ್ ನಷ್ಟಕ್ಕೆ 168 ರನ್ ಗಳಿಸಿದ ಲಕ್ನೋ ಸವಾಲಿನ ಮೊತ್ತ ದಾಖಲಿಸಿತು. ಪೊಲಾರ್ಡ್ 8 ರನ್‌ಗೆ 2 ವಿಕೆಟ್ ಕಿತ್ತರು.
ಉತ್ತರವಾಗಿ ಮುಂಬೈ ನಾಯಕ ರೋಹಿತ್ ಶರ್ಮ (39 ರನ್, 31 ಎಸೆತ, 5 ಬೌಂಡರಿ 1 ಸಿಕ್ಸರ್), ತಿಲಕ್ ವರ್ಮಾ (38 ರನ್, 27 ಎಸೆತ, 2 ಬೌಂಡರಿ, 2 ಸಿಕ್ಸರ್) ಇನ್ನಿಂಗ್ಸ್ ಬೆಳೆಸಲು ಯತ್ನಿಸಿದರೂ ಮಿಕ್ಕೆಲ್ಲ ಆಟಗಾರರ ವೈಫಲ್ಯದಿಂದ ರನ್ ಗತಿ ಹೆಚ್ಚಿಸಿಕೊಳ್ಳಲು ವಿಫಲವಾಗಿ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 132 ರನ್ ಗಳಿಸಲಷ್ಟೇ ಶಕ್ತವಾಯಿತು. ಕೃನಾಲ್ ಪಾಂಡ್ಯ 19 ರನ್ ನೀಡಿ 3 ವಿಕೆಟ್ ಗಳಿಸಿದರು.
ಇಂದು ಚೆನ್ನೈ ಮತ್ತು ಪಂಜಾಬ್ ತಂಡಗಳು ಮುಖಾಮುಖಿಯಾಗಲಿವೆ.