Bengaluru,ಫೆ.18:
ರಾಜ್ಯದಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತುತ್ತಿರುವ ಅನಧಿಕೃತ ಬಡಾವಣೆಗಳ ವಿರುದ್ಧ ಸಮರ ಸಾರಿರುವ ರಾಜ್ಯ ಸರ್ಕಾರ ಒಂದು ಬಾರಿ ಪರಿಹಾರ ಎಂದು ಎಲ್ಲಾ ಬಡಾವಣೆಗಳಿಗೆ ಬಿ ಖಾತೆ ನೀಡಿ ಸಕ್ರಮಗೊಳಿಸಲು ತೀರ್ಮಾನಿಸಿದೆ.
ಇದಾದ ನಂತರ ರಾಜ್ಯದ ಯಾವುದೇ ನಗರ ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿಅನಧಿಕೃತ ಬಡಾವಣೆಗಳು ಮತ್ತೆ ತಲೆ ಎತ್ತಿದರೆ ಜಿಲ್ಲಾಧಿಕಾರಿ, ಮುಖ್ಯ ಅಧಿಕಾರಿ, ಮತ್ತು ನಗರ ಯೋಜನಾ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತಾ ನೀಡುವ ಕುರಿತು ಜಿಲ್ಲಾಧಿಕಾರಿಗಳು ರಾಜ್ಯದ ಎಲ್ಲಾ ಮಹಾನಗರಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಪೌರಾಯುಕ್ತರು, ಮುಖ್ಯಾಧಿಕಾರಿಗಳು ಮತ್ತು ಯೋಜನಾ ನಿರ್ದೇಶಕರೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿದರು.
ಈ ವೇಳೆ ಕಂದಾಯ ಭೂಮಿಯಲ್ಲಿ ಅಕ್ರಮವಾಗಿ ಅಭಿವೃದ್ಧಿ ಪಡಿಸುತ್ತಿರುವ ನಿವೇಶನಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು ಇನ್ನು ಮುಂದೆ ಇಂತಹ ಬಡಾವಣೆಗಳು ತಲೆ ಎತ್ತಬಾರದು ಒಂದು ವೇಳೆ ಇವು ಕಾಣಿಸಿದರೆ ನಿಮ್ಮ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ ಎಂದು ಎಚ್ಚರಿಸಿದರು.
ಅನಧಿಕೃತ ಬಡಾವಣೆಗಳು ನಗರ, ಪಟ್ಟಣ, ಪಾಲಿಕೆ ವ್ಯಾಪ್ತಿ ಮತ್ತು ಹಳ್ಳಿಗಳಲ್ಲೂ ಇವೆ. ಇವೆಲ್ಲಕ್ಕೂ ನಾವು ಅಂತ್ಯ ಹಾಡುತ್ತಿದ್ದೇವೆ ಇನ್ನು ಮುಂದೆ ಅನಧಿಕೃತ ಬಡಾವಣೆಗಳಿಗೆ ರಾಜ್ಯದಲ್ಲಿ ಕಿಂಚಿತ್ತೂ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು
ಅನಧಿಕೃತ ಬಡಾವಣೆಗಳಿಂದ ಸರ್ಕಾರಕ್ಕೆ ಕಂದಾಯ ಬರುತ್ತಿಲ್ಲ, ಪರಿಣಾಮ ಜನರಿಗೆ ನಾಗರಿಕ ಸವಲತ್ತುಗಳೂ ಸಿಗುತ್ತಿಲ್ಲ, ಸ್ಥಳೀಯ ಸಂಸ್ಥೆಗಳಿಗೆ ಆದಾಯವೂ ಬಂದ್ ಆಗಿದೆ. ಇವೆಲ್ಲಾ ಅನಾನುಕೂಲಗಳಿಗೂ ಅಂತ್ಯ ಹಾಡಬೇಕಿದೆ ಇದಕ್ಕಾಗಿ ಹೊಸ ಕಾನೂನು ಜಾರಿಗೆ ತಂದಿದ್ದೇವೆ ಈ
ಕಾಯ್ದೆ ಮೂಲಕ ಅನಧಿಕೃತ ಬಡಾವಣೆಗಳಿಗೆ ಅಂತ್ಯ ಹಾಡಬೇಕು ಎಂದು ಹೇಳಿದರು
ಅಧಿಕಾರಿಗಳು ಕಾಯಿದೆಯನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡು ಕೆಲಸ ಮಾಡಬೇಕು ಇಂದಿನಿಂದಲೇ ಅಕ್ರಮ ನಿವೇಶನಗಳಿಗೆ ಬಿ ಖಾತೆ ನೀಡಬೇಕು ಇದಕ್ಕಾಗಿ ಮೂರು ತಿಂಗಳ ಗಡುವು ನೀಡಲಾಗುವುದು ಅಷ್ಟರೊಳಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ತಾಕೀತು ಮಾಡಿದರು.
ಅನಧಿಕೃತ , ರೆವಿನ್ಯೂ ಬಡಾವಣೆಗಳಲ್ಲಿ ಸೈಟು, ಮನೆ ಕಟ್ಟಿರುವವರಿಗೆ ತೊಂದರೆ ಆಗಬಾರದು. ಒಟ್ಟಾರೆಯಾಗಿ ಬಡವರು, ಮಧ್ಯಮ ವರ್ಗದವರಿಗೆ ಅನುಕೂಲ ಮಾಡಿಕೊಡಲು ಒಂದು ಬಾರಿ ಪರಿಹಾರದ ಅವಕಾಶ ಕೊಟ್ಟಿದ್ದೇವೆ. ಮಧ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಿ ಮೂರು ತಿಂಗಳಲ್ಲಿ ಎಲ್ಲರಿಗೂ ಖಾತಾ ನೀಡಿ ಅಂತ್ಯ ಹಾಡಿ ಎಂದು ಸೂಚಿಸಿದರು