ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯ ಬಾಬಾ ಬೈದ್ಯನಾಥ್ ದೇವಸ್ಥಾನದ ಸಮೀಪದ ತ್ರಿಕೂಟ ಬೆಟ್ಟದ ರೋಪ್‌ವೇನಲ್ಲಿ ಎರಡು ಕೇಬಲ್ ಕಾರ್‌ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭಯಾನಕ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. 48 ಮಂದಿ ಇನ್ನೂ ರೋಪ್‌ವೇನಲ್ಲಿ ಸಿಲುಕಿಕೊಂಡಿದ್ದಾರೆ. ಜಾರ್ಖಂಡ್ ನ ತ್ರಿಕೂಟ ಬೆಟ್ಟದಲ್ಲಿನ 372 ಮೀ.ಉದ್ದದ ಈ ರೋಪ್ ವೇ ದೇಶದ ಅತೀ ಉದ್ದದ ರೋಪ್ ವೇ ಎಂದು ಖ್ಯಾತಿ ಪಡೆದಿದೆ.
ದುರಂತಕ್ಕೀಡಾಗಿರುವ ರೋಪ್‌ವೇನಲ್ಲಿ ಕನಿಷ್ಠ 12 ಕ್ಯಾಬಿನ್‌ಗಳಲ್ಲಿ ಇನ್ನೂ 48 ಮಂದಿ ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಭಾರತೀಯ ವಾಯು ಪಡೆಯ ಹೆಲಿಕಾಪ್ಟರ್ ಸಹಾಯದೊಂದಿಗೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಾಂತ್ರಿಕ ಸಮಸ್ಯೆಯಿಂದ ಕೇಬಲ್ ಕಾರುಗಳ ಡಿಕ್ಕಿ ಸಂಭವಿಸಿದೆ ಎಂದು ಹೇಳಲಾಗಿದೆ. ಆದರೆ ಈ ಅವಘಡಕ್ಕೆ ನಿಖರ ಕಾರಣ ಇನ್ನೂ ಗೊತ್ತಾಗಿಲ್ಲ. ಅಪಘಾತದ ಬಳಿಕ ರೋಪ್‌ವೇ ಮ್ಯಾನೇಜರ್ ಮತ್ತು ಇತರೆ ಉದ್ಯೋಗಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ಪರಿಹಾರ ದಳದ (ಎನ್‌ಡಿಆರ್‌ಎಫ್) ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ.ರಕ್ಷಣಾ ಕಾರ್ಯಾಚರಣೆಗೆ ಸ್ಥಳೀಯರು ಕೂಡ ನೆರವು ನೀಡುತ್ತಿದ್ದಾರೆ. ಡಿಸಿ ಮತ್ತು ಎಸ್‌ಪಿ ಇಬ್ಬರೂ ಸ್ಥಳದಲ್ಲಿಯೇ ಇದ್ದು ರಕ್ಷಣಾ ಕಾರ್ಯದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.