ಬೆಂಗಳೂರು,ಏ.8-ರೌಡಿ ಸೈಲೆಂಟ್ ಸುನಿಲ್ ಪೋಟೋ ತೋರಿಸಿ ಉದ್ಯಮಿ ಬಳಿ 13 ಲಕ್ಷ ರೂ.ಗಳಿಗೆ 63 ಲಕ್ಷ ಬಡ್ಡಿ ಪಡೆದು ಜೀವ ಬೆದರಿಕೆ ಹಾಕಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪ್ರಕಾಶ್ ನಗರದ ದೀಪಕ್ (33), ಜಯಕುಮಾರ್ (39) ಹಾಗೂ ಬಾಲು (33) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ರೌಡಿಗಳಾದ ಸುನಿಲ್ ಹಾಗೂ ಆಯಿಲ್ ಪುರುಷೋತ್ತಮ್ ಜತೆಗಿನ ಪೋಟೋಗಳನ್ನು ಬಳಸಿ ದೂರುದಾರರಿಗೆ ಹೆದರಿಸಿದ್ದಾರೆ. ಈ ಕೃತ್ಯದಲ್ಲಿ ಇಬ್ಬರು ರೌಡಿಗಳ ಪಾತ್ರವಿದೆಯೇ ಎಂಬುದರ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
ಲಕ್ಕಸಂದ್ರ ನಿವಾಸಿ ಉದ್ಯಮಿ ಎಂ. ರವಿ ಎಂಬುವವರಿಗೆ ಕಳೆದ 15 ವರ್ಷಗಳಿಂದ ಆರೋಪಿ ದೀಪಕ್ ಪರಿಚಯವಿತ್ತು. ಹೀಗಾಗಿ, 2020ರಲ್ಲಿ ದೀಪಕ್ ಬಳಿ 13 ಲಕ್ಷ ರೂ.ಸಾಲ ಪಡೆದಿದ್ದರು. ಸಾಲ ನೀಡುವಾಗ ಒಂದು ತಿಂಗಳ ಅವಧಿಗೆ 13 ಲಕ್ಷಕ್ಕೆ 13 ಲಕ್ಷ ರೂ. ಸೇರಿ ಒಟ್ಟು 26 ಲಕ್ಷ ರೂ. ಕೊಡುವ ಒಪ್ಪಂದ ಪತ್ರಕ್ಕೆ ಸಹಿ ಮಾಡಿದ್ದರು. ಈ ನಡುವೆ, ರವಿ ಅವರ ಕಂಪನಿ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಸಕಾಲಕ್ಕೆ ಹಣ ಹಿಂದಿರುಗಿಸಲು ಸಾಧ್ಯವಾಗಿಲ್ಲ. ಈ ವೇಳೆ ದೀಪಕ್, 26 ಲಕ್ಷ ರೂ.ಗೆ 10 ಲಕ್ಷ ರೂ. ಸೇರಿಸಿ ಒಟ್ಟು 36 ಲಕ್ಷ ರೂ. ಕೊಡುವಂತೆ ಬೆದರಿಕೆ ಹಾಕಿದ್ದ.ಅದರಂತೆ, ರವಿ ಅವರು ಪ್ರತಿ ತಿಂಗಳು 3.60 ಲಕ್ಷ ರೂ. ಬಡ್ಡಿಯಂತೆ ಒಂದು ವರ್ಷ ದೀಪಕ್‌ಗೆ ಹಣ ನೀಡಿದ್ದಾರೆ. ಬಡ್ಡಿ ಕಟ್ಟಲಾಗದೆ ರವಿ ಅವರು ಕುರುಬರಹಳ್ಳಿಯ ಮನೆಯನ್ನು 53 ಲಕ್ಷ ರೂ.ಗೆ ಮಾರಾಟ ಮಾಡಿದ್ದರು. ಈ ಹಣದಲ್ಲಿ 10 ಲಕ್ಷ ರೂ. ಪಡೆದಿದ್ದ ದೀಪಕ್, ಪುನಃ ರವಿ ಅವರ ಖಾತೆಯಿಂದ ಬಲವಂತವಾಗಿ 8.50 ಲಕ್ಷ ರೂ. ವರ್ಗಾಯಿಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರೌಡಿಗಳ ಹೆಸರು ಬಳಕೆಈ ನಡುವೆ, ಜಯಕುಮಾರ್ ಬಳಿಯೂ 8 ಲಕ್ಷ ರೂ. ಸಾಲ ಪಡೆದಿದ್ದ ರವಿ, ಬಡ್ಡಿ 6.40 ಲಕ್ಷ ರೂ. ಪಾವತಿಸಿದ್ದರು. ಕೆಲ ತಿಂಗಳಿಂದ ಬಡ್ಡಿ ಕಟ್ಟಲಾಗದೆ ಅಸಹಾಯಕತೆಗೆ ಸಿಲುಕಿದ ರವಿ ಅವರನ್ನು ಕೊಠಡಿಯೊಂದಲ್ಲಿ ಕೂಡಿಹಾಕಿ ಕಿರುಕುಳ ನೀಡಿದ್ದರು.
ಅಷ್ಟೇ ಅಲ್ಲದೆ, ರೌಡಿ ಸೈಲೆಂಟ್ ಸುನಿಲ್ ನಮಗೆ ಪರಿಚಯವಿದ್ದು, ನಿನ್ನನ್ನು ಕೊಲೆ ಮಾಡಿಸುತ್ತೇವೆ’ ಎಂದು ಆರೋಪಿಗಳು ಆತನ ಜತೆ ತೆಗೆಸಿರುವ ಪೋಟೋಗಳನ್ನು ರವಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದರು. ಅಲ್ಲದೆ, ರೌಡಿಗಳಾದ ಪ್ರಕಾಶನಗರದ ರೌಡಿ ಆಯಿಲ್ ಪರುಷೋತ್ತಮ್ ಜತೆಗಿರುವ ಪೋಟೋಗಳನ್ನು ಕಳುಹಿಸಿ ಬೆದರಿಸುತ್ತಿದ್ದರು. ಈ ಕೃತ್ಯಕ್ಕೆ ಬಾಲು ಸಹಕಾರ ನೀಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ
Previous ArticleReels Star ಗಳಿಗೆ ಬಿಸಿ ಮುಟ್ಟಿಸಿದ ಪೊಲೀಸ್.
Next Article ಕಾಂಗ್ರೆಸ್ ನಾಯಕ ಮಂಜುನಾಥ್ ಗೌಡ ಇಡಿ ವಶಕ್ಕೆ