ಬೆಂಗಳೂರು,ಜು.21-
ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣ ಬಿಜೆಪಿ ಶಾಸಕ ಹಾಗೂ ಮಾಜಿ ಮಂತ್ರಿ ಬೈರತಿ ಬಸವರಾಜ್ ಅವರಿಗೆ ಸಂಕಷ್ಟ ತಂದೊಡ್ಡಿದೆ. ಹತ್ಯೆಯ ಪ್ರಕರಣ ಸಂಬಂಧ ಭಾರತಿನಗರ ಪೊಲೀಸರು ಮತ್ತೆ ಇಬ್ಬರನ್ನು ಬಂಧಿಸಿ,ಶಾಸಕ ಭೈರತಿ ಬಸವರಾಜ್ ಸಹೋದರನ ಪುತ್ರನನ್ನು ವಶಕ್ಕೆ ಪಡೆದಿದ್ದಾರೆ.
ಬಾಣಸವಾಡಿಯ ಆರ್ ಎಸ್ ಪಾಳ್ಯದ ಅರುಣ್, ನವೀನ್ ಬಂಧಿತ ಆರೋಪಿಗಳಾಗಿದ್ದಾರೆ. ಅಲ್ಲದೆ ಶಾಸಕ ಭೈರತಿ ಬಸವರಾಜ್ ಸಹೋದರನ ಮಗ ಅನಿಲ್ನನ್ನು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿದ್ದಾರೆ.
ಅರುಣ್ ಮತ್ತು ನವೀನ್ ಮೊದಲನೇ ಆರೋಪಿ ಜಗದೀಶ್ ಸಹಚರರು. ಕೊಲೆ ಬಳಿಕ ಇಬ್ಬರು ತಲೆಮರೆಸಿಕೊಂಡಿದ್ದರು. ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಅನಿಲ್ ಕಾರು ನೀಡಿದ್ದ. ಹೀಗಾಗಿ ಅನಿಲ್ನನ್ನು ವಶಕ್ಕೆ ಪಡೆದಿರುವ ಭಾರತಿನಗರ ಠಾಣೆ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ರೌಡಿಶೀಟರ್ ಬಿಕ್ಲು ಶಿವನ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಅಷ್ಟಕ್ಕೂ, ಬಿಕ್ಲು ಕೊಲೆಗೆ ಕಾರಣ ಕಿತ್ತಗನೂರಲ್ಲಿರುವ ಒಂದೂವರೆ ಎಕರೆ ಜಮೀನು. ಈ ಜಮೀನಿಗೆ ಮೂವರು ಮಾಲೀಕರಿದ್ದು, ಈ ಪೈಕಿ ನದಾಫ್ ಬಳಿ ಬಿಕ್ಲು ಜಮೀನು ಖರೀದಿ ಅಗ್ರಿಮೆಂಟ್ ಮಾಡಿಸಿಕೊಂಡಿದ್ದ.
ಮತ್ತೊಬ್ಬ ಮಾಲೀಕನಿಂದ ರವಿ ಅಗ್ರಿಮೆಂಟ್ ಮಾಡಿಸಿಕೊಂಡು ಕಾಂಪೌಂಡ್ ಹಾಕುತ್ತಿದ್ದ. ಇದರಿಂದ ಕೆರಳಿದ ಶಿವು ಕಾಂಪೌಂಡ್ ಕೆಡವಿದ್ದ. ಬಳಿಕ ರವಿ ಬೆನ್ನಿನ ಹಿಂದೆ ಇದ್ದ ಜಗದೀಶ್ ಮತ್ತು ಕಿರಣ್, ಶಿವುಗೆ ಪ್ರಾಣ ಬೆದರಿಕೆ ಹಾಕಿದ್ದರು. ಈ ಬಗ್ಗೆ ಶಿವು ಅಂದಿನ ಕಮಿಷನರ್ಗೆ ದೂರು ನೀಡಿದ್ದ.ಅಲ್ಲದೆ ರಾಮಮೂರ್ತಿನಗರ ಠಾಣೆಗೆ ದೂರು ನೀಡಿದ್ದ. ಆದರೆ ಅವರು ಎನ್ಸಿಆರ್ ದಾಖಲಿಸಿ ಕೈ ಚೆಲ್ಲಿದ್ದರು.
ಇದಾದ ನಂತರ ಶಿವನನ್ನು ಮುಗಿಸುವುದಕ್ಕೆ ಸಂಚು ಹೂಡಿದ್ದ ಜಗದೀಶ್, ಸ್ಯಾಮ್ಯುಯೆಲ್ ನನ್ನು ಹಿಂಬಾಲಿಸಲು ಬಿಟ್ಟಿದ್ದು,ಕಳೆದ 45 ದಿನಗಳಿಂದ ಶಿವನ ಚಲನವಲನಗಳನ್ನು ಸ್ಯಾಮ್ಯುಯೆಲ್ ಗಮನಿಸುತ್ತಿದ್ದ. ಆತನಿಗೆ ಪ್ರತಿ ನಿತ್ಯ 1 ಸಾವಿರ ಹಣವನ್ನು ಜಗ್ಗ ಕೊಡುತ್ತಿದ್ದ. ಕೊಲೆ ದಿನ ಕೂಡ ಸ್ಯಾಮ್ಯುಯೆಲ್ ಕೊಟ್ಟ ಲೊಕೇಷನ್ ಆಧರಿಸಿ ಬಂದವರು, ಬಿಕ್ಲು ಶಿವುನನ್ನ ಕೊಲೆಗೈದು ಪರಾರಿ ಆಗಿದ್ದರು.
Previous Articleಸಿದ್ದರಾಮಯ್ಯ ಕ್ಷಮೆ ಕೋರಿದ META.
Next Article ಡಿಸಿಎಂ ಶಿವಕುಮಾರ್ ಮೂರು ದಿನ ರಜೆ